ಕೇಂದ್ರ ಸಚಿವರ ಪರ ನಡೆಸಿದ ರ್‍ಯಾಲಿಯಲ್ಲಿ'ಅಲ್ಲಾಹು ಅಕ್ಬರ್‌' ಘೊಷಣೆ ಕೂಗಿದ ಬಿಜೆಪಿ ಕಾರ್ಯಕರ್ತರು

Update: 2024-03-31 12:09 GMT

Photo : twitter

ಕೂಚ್ ಬೆಹಾರ್: ಬಿಜೆಪಿಯ ಕೂಚ್ ಬಿಹಾರ್ ಅಭ್ಯರ್ಥಿ ನಿಸಿತ್ ಪ್ರಮಾಣಿಕ್ ಅವರನ್ನು ಬೆಂಬಲಿಸಿ ಅಲ್ಪಸಂಖ್ಯಾತ ಮೋರ್ಚಾ ನಡೆಸಿದ ರ್‍ಯಾಲಿಯಲ್ಲಿ ಕಾರ್ಯಕರ್ತರು "ಅಲ್ಲಾಹು ಅಕ್ಬರ್" ಘೋಷಣೆಗಳನ್ನು ಕೂಗಿದ್ದಾರೆ.

ಪಶ್ಚಿಮ ಬಂಗಾಳದ ದಿನಾತಾದಲ್ಲಿ ಗುರುವಾರ ನಡೆದ ಮೆರವಣಿಗೆಯಲ್ಲಿ ಈ ಬೆಳವಣಿಗೆ ನಡೆದಿದೆ. ಆ ಮೂಲಕ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮುಸ್ಲಿಮರನ್ನು ತನ್ನತ್ತ ಸೆಳೆಯುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಎರಡು ವಿಧಾನಸಭಾ ಕ್ಷೇತ್ರಗಳಾದ ಸೀತಾಯಿ ಮತ್ತು ದಿನಾತಾದಲ್ಲಿ ಮುಸ್ಲಿಮರೊಂದಿಗೆ ಬಿಜೆಪಿ ಮೆರವಣಿಗೆಯನ್ನು ನಡೆಸಲಾಗಿದೆ. ಕೂಚ್ ಬೆಹಾರ್ ಪಟ್ಟಣದಲ್ಲಿ ಶೀಘ್ರದಲ್ಲೇ ಇಡೀ ಜಿಲ್ಲೆಯ ಮುಸ್ಲಿಮರೊಂದಿಗೆ ನಾವು ರ್‍ಯಾಲಿ ನಡೆಸುತ್ತೇವೆ ಎಂದು ಬಿಜೆಪಿ ಕೂಚ್ ಬೆಹಾರ್ ಅಧ್ಯಕ್ಷ ಮತ್ತು ಶಾಸಕ ಸುಕುಮಾರ್ ರಾಯ್ ಅವರು Times of India ಗೆ ತಿಳಿಸಿದ್ದಾರೆ.

ಪಕ್ಷವು ಭೇಟಗುರಿ ಪಂಚಾಯಿತಿಯಲ್ಲಿ ಮುಸ್ಲಿಂ ಪಂಚಾಯತ್ ಸಮಿತಿ ಸದಸ್ಯರನ್ನು ಹೊಂದಿದೆ. ಹಾಗಾಗಿ, ಇದು ಅಸಾಮಾನ್ಯವೇನಲ್ಲ ಎಂದು ರಾಯ್ ಹೇಳಿದ್ದಾರೆ.

ಬಿಜೆಪಿ ಬೆಂಬಲಿಗರ ಪ್ರಕಾರ, ಉತ್ತರ ಬಂಗಾಳದ, ವಿಶೇಷವಾಗಿ ಕೂಚ್ ಬೆಹಾರ್ ಜಿಲ್ಲೆಯ ಸುಕ್ತಬರಿ ಪ್ರದೇಶದ ರಾಜ್‌ಬನ್ಷಿ ಮುಸ್ಲಿಮರ ದೊಡ್ಡ ಗುಂಪು ಈ ತಿಂಗಳ ಆರಂಭದಲ್ಲಿ ಸಿಲಿಗುರಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ರ್‍ಯಾಲಿಯಲ್ಲಿ ಭಾಗವಹಿಸಿತ್ತು.

"ಇಲ್ಲಿನ ಪರಿಸ್ಥಿತಿ ಬದಲಾಗುತ್ತಿದೆ. ಜನರು ಈಗ ಟಿಎಂಸಿಗೆ ಕೋಮುವಾದಿ ಹಣೆಪಟ್ಟಿ ಹಚ್ಚುತ್ತಿದ್ದಾರೆ ಏಕೆಂದರೆ ಟಿಎಂಸಿಯು ಯಾವಾಗಲೂ ಮುಸ್ಲಿಮರನ್ನು ಮತ ಬ್ಯಾಂಕ್ ಆಗಿ ಮಾತ್ರ ಬಳಸಿಕೊಂಡಿದೆ" ಎಂದು ರಾಯ್ ಹೇಳಿದರು.

ಬಿಜೆಪಿಯ ತಮ್ಲುಕ್ ಅಭ್ಯರ್ಥಿ ಅಭಿಜಿತ್ ಗಂಗೋಪಾಧ್ಯಾಯ ಅವರು ತಮ್ಮ ಪ್ರಚಾರದ ಸಮಯದಲ್ಲಿ ಮಹಿಷಾದಲ್ ರಾಜಬರಿಯ ಗೋಬಿಂದೋ ಜಿಯು ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಮಹಿಷಾದಲ್ ದರ್ಗಾದಲ್ಲಿ ಚಾದರ್ ಅರ್ಪಿಸಿದ್ದರು.

ಸಂದೇಶ್ಖಾಲಿಯಲ್ಲಿ ಮಹಿಳೆಯರಿಗೆ ಚಿತ್ರಹಿಂಸೆ ನೀಡಿದ್ದರಿಂದ ಮುಸ್ಲಿಂ ಮಹಿಳೆಯರು ಟಿಎಂಸಿ ವಿರುದ್ಧ ಮತ ಚಲಾಯಿಸುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಹೇಳಿದ್ದರು.

ಕೇಂದ್ರ ಸಚಿವ ನಿಸಿತ್‌ ಪ್ರಮಾಣಿಕ್ ಅವರು ಎರಡು ತಿಂಗಳ ಹಿಂದೆ ನಡೆಸಿದ ಸಭೆಯಲ್ಲಿ ಬುರ್ಖಾಧಾರಿ ಮುಸ್ಲಿಂ ಮಹಿಳೆಯರು ಸಚಿವರೊಂದಿಗೆ ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗಿದ್ದರು.


Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News