ಮಾನಹಾನಿಕರ ಪೋಸ್ಟ್ ಮಾಡಿದ ಆರೋಪ; ಖರ್ಗೆ, ಜೈರಾಮ್ ರಮೇಶ್ ಗೆ ಕಾನೂನು ನೋಟಿಸ್ ಜಾರಿಗೊಳಿಸಿದ ನಿತಿನ್ ಗಡ್ಕರಿ
ಹೊಸದಿಲ್ಲಿ: ಎಕ್ಸ್ ಅಧಿಕೃತ ಖಾತೆಯಿಂದ ಮಾನಹಾನಿಕರ ಅಂಶಗಳನ್ನು ಪೋಸ್ಟ್ ಮಾಡಿದ ಆರೋಪದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ವಿರುದ್ಧ ಕಾನೂನು ನೋಟಿಸ್ ಜಾರಿ ಮಾಡಿದ್ದಾರೆ.
ನಿತಿನ್ ಗಡ್ಕರಿಯವರ ವಕೀಲ ಬಲೇಂದು ಶೇಖರ್ ಈ ಬಗ್ಗೆ ಹೇಳಿಕೆ ನೀಡಿ, "ನ್ಯೂಸ್ಪೋರ್ಟಲ್ ಗೆ ನೀಡಿದ ಸಂದರ್ಶನವೊಂದರಿಂದ 19 ಸೆಕೆಂಡ್ ಗಳ ವಿಡಿಯೊ ತುಣುಕನ್ನು ತೆಗೆದು ಪೋಸ್ಟ್ ಮಾಡಿದ ಬಗ್ಗೆ ಗಡ್ಕರಿ ತೀವ್ರ ಆಘಾತಗೊಂಡಿದ್ದಾರೆ. ಈ ತುಣುಕಿನಲ್ಲಿ ಪರಿಸ್ಥಿತಿ ಹಾಗು ಅವರ ಮಾತಿನ ಅರ್ಥವನ್ನು ಮುಚ್ಚಿಹಾಕಲಾಗಿದೆ" ಎಂದು ದೂರಿದ್ದಾರೆ.
ಈ ನೋಟಿಸ್ ನ ಪ್ರಕಾರ, ನಿತಿನ್ ಗಡ್ಕರಿಯವರ ಸಂದರ್ಶನವನ್ನು ತಿರುಚಲಾಗಿದೆ ಹಾಗೂ ವಿರೂಪಗೊಳಿಸಲಾಗಿದೆ. ಗೊಂದಲ, ಭಾವಸೂಕ್ಷ್ಮತೆ ಸೃಷ್ಟಿಸುವ ಸಲುವಾಗಿ ಮತ್ತು ಘನತೆಗೆ ಧಕ್ಕೆ ತರುವ ಉದ್ದೇಶದಿಂದ ಈ ವಿಡಿಯೊ ತುಣುಕು ಪೋಸ್ಟ್ ಮಾಡಲಾಗಿದೆ ಎಂದು ವಕೀಲರು ಆಪಾದಿಸಿದ್ದಾರೆ. ಉಭಯ ಮುಖಂಡರು ಲಿಖಿತವಾಗಿ ಕ್ಷಮೆಯಾಚನೆ ಮಾಡುವಂತೆ ಸೂಚಿಸಲಾಗಿದೆ.
ಲಾಲನ್ ಟಾಪ್ ನ್ಯೂಸ್ ಪೋರ್ಟಲ್ ಗೆ ನೀಡಿದ ಸಂದರ್ಶನದ ಒಂದು ತುಣುಕನ್ನು ಕಾಂಗ್ರೆಸ್ ಖಾತೆಯಿಂದ ಪೋಸ್ಟ್ ಮಾಡಲಾಗಿದ್ದು, "ಗ್ರಾಮಸ್ಥರು, ಕಾರ್ಮಿಕರು ಹಾಗೂ ರೈತರು ಇಂದು ಅಸಮಾಧಾನ ಹೊಂದಿದ್ದಾರೆ. ಗ್ರಾಮಸ್ಥರಿಗೆ ರಸ್ತೆಗಳಿಲ್ಲ. ಕುಡಿಯುವ ನೀರು, ಒಳ್ಳೆಯ ಆಸ್ಪತ್ರೆ ಮತ್ತು ಶಾಲೆಗಳಿಲ್ಲ" ಎಂದು ಗಡ್ಕರಿ ಹೇಳುತ್ತಿರುವ ವಿಡಿಯೊ ಪೋಸ್ಟ್ ಮಾಡಲಾಗಿತ್ತು.