ಸಿಎಎ ನಿಯಮಗಳ ಕುರಿತು ಇಂದು ಅಧಿಸೂಚನೆ ಸಾಧ್ಯತೆ
ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ನಿಯಮಗಳ ಕುರಿತಂತೆ ಕೇಂದ್ರ ಗೃಹ ಸಚಿವಾಲಯ ಇಂದು ಅಧಿಸೂಚನೆ ಹೊರಡಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ನಿಯಮಗಳ ಕುರಿತು ಅಧಿಸೂಚನೆ ಜಾರಿಗೊಳಿಸಿದ್ದೇ ಆದಲ್ಲಿ ವಿವಾದಿತ ಸಿಎಎ ಜಾರಿಯ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಲಿದೆ.
ಈ ಕಾನೂನಿನಂತೆ ಡಿಸೆಂಬರ್ 31, 2014ಕ್ಕಿಂತ ಮುಂಚೆ ಭಾರತಕ್ಕೆ ವಲಸೆ ಬಂದಿರುವ ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಗಾನಿಸ್ತಾನದ ಹಿಂದು ಸಿಖ್, ಜೈನ, ಕ್ರೈಸ್ತ, ಬೌದ್ಧ ಮತ್ತು ಪಾರ್ಸಿ ಸಮುದಾಯದ ಮಂದಿಗೆ ಭಾರತದ ಪೌರತ್ವ ನೀಡಬಹುದಾಗಿದೆ.
ಸಿಎಎ ಅಡಿ ಪೌರತ್ವಕ್ಕೆ ಅರ್ಜಿ ಸಲ್ಲಿಸಲು ಮತ್ತು ಪೌರತ್ವ ಒದಗಿಸಲು ಆನ್‌ಲೈನ್ ವ್ಯವಸ್ಥೆ ಜಾರಿಗೊಳಿಸುವ ನಿಟ್ಟಿನಲ್ಲಿ ಗೃಹ ಸಚಿವಾಲಯ ಚಿಂತನೆ ನಡೆಸುತ್ತಿದೆ.
ಡಿಸೆಂಬರ್ 2019ರಲ್ಲಿ ಸಿಎಎ ಕುರಿತು ಅಧಿಸೂಚನೆ ಹೊರಡಿಸಲಾಗಿದ್ದರೆ ಜನವರಿ 10, 2020ರಂದು ಅದು ಜಾರಿಗೆ ಬಂದಿತ್ತು. ಆದರೆ ಸಿಎಎ ನಿಯಮಗಳ ಕುರಿತು ಸರ್ಕಾರ ಅಧಿಸೂಚನೆ ಹೊರಡಿಸದೇ ಇದ್ದುದರಿಂದ ಕಾನೂನು ಅನುಷ್ಠಾನ ಸಾಧ್ಯವಾಗಿರಲಿಲ್ಲ.