ಪಂಜಾಬ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿದ ವಾಯುಪಡೆಯ ಚಿನೂಕ್ ಹೆಲಿಕಾಪ್ಟರ್
ಚಂಡೀಗಢ : ಭಾರತೀಯ ವಾಯುಪಡೆಯ ಚಿನೂಕ್ ಹೆಲಿಕಾಪ್ಟರ್ ರವಿವಾರ ಪಂಜಾಬ್‌ನ ಬರ್ನಾಲಾ ಬಳಿ ತಾಂತ್ರಿಕ ತೊಂದರೆಯಿಂದ ತುರ್ತು ಭೂಸ್ಪರ್ಷ ಮಾಡಿದೆ ಎಂದು ಭಾರತೀಯ ವಾಯುಪಡೆ ತಿಳಿಸಿದೆ.
ಎಂದಿನಂತೆ ಸಾಮಾನ್ಯ ಹಾರಾಟ ನಡೆಸುತ್ತಿದ್ದ ಹೆಲಿಕಾಪ್ಟರ್ ತೆರೆದ ಮೈದಾನದಲ್ಲಿ ತುರ್ತು ಭೂ ಸ್ಪರ್ಷ ಮಾಡಿದ್ದು, ಸಿಬ್ಬಂದಿ ಮತ್ತು ಹೆಲಿಕಾಪ್ಟರ್ ಸುರಕ್ಷಿತವಾಗಿದ್ದು, ರಕ್ಷಣಾ ತಂಡ ಸ್ಥಳಕ್ಕೆ ತಲುಪಿದೆ ಎಂದು ವಾಯುಪಡೆ ಅಧಿಕಾರಿಗಳು ತಿಳಿಸಿದ್ದಾರೆ. ತಾಂತ್ರಿಕ ತೊಂದರೆಯ ಹಿಂದಿನ ಕಾರಣ ತನಿಖೆಯ ಬಳಿಕ ತಿಳಿದು ಬರಲಿದೆ ಎಂದು ಭಾರತೀಯ ವಾಯುಪಡೆ ಹೇಳಿದೆ ಎಂದು ndtv ವರದಿ ಮಾಡಿದೆ.
2022 ರಲ್ಲಿ, ಅಮೇರಿಕ ಸೇನೆಯು ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಚಿನೂಕ್ ಹೆಲಿಕಾಪ್ಟರ್ ಗಳನ್ನು ಸೇವೆಯಿಂದ ಹಿಂಪಡೆದಿತ್ತು. ಭಾರತೀಯ ವಾಯುಪಡೆಯು ಚಿನೂಕ್‌ನ ತಯಾರಕರಾದ ಬೋಯಿಂಗ್‌ನಿಂದ ಅಮೇರಿಕ ಸೇನೆಯು ಚಿನೂಕ್ ಹೆಲಿಕಾಪ್ಟರ್‌ಗಳನ್ನು ಸೇವೆಯಿಂದ ಹಿಂಪಡೆದಿದ್ದರ ಹಿಂದಿನ ಕಾರಣಗಳ ಬಗ್ಗೆ ವಿವರಗಳನ್ನು ಕೇಳಿತ್ತು. ಭಾರತೀಯ ವಾಯುಪಡೆಯ ಸೇವೆಯಲ್ಲಿರುವ ಚಿನೂಕ್ಸ್ ಹೆಲಿಕಾಪ್ಟರ್ ಗಳಿಗೆ ಯಾವುದೇ ತೊಂದರೆಗಳಿಲ್ಲ ಎಂದು ಬೋಯಿಂಗ್‌ನ ಭಾರತ ಮುಖ್ಯಸ್ಥ ಸಲೀಲ್ ಹುಪ್ಟೆ ಹೇಳಿದ್ದರು.
ವಿಯೆಟ್ನಾಂ ಕಾರ್ಯಾಚರಣೆ, ಮಧ್ಯಪ್ರಾಚ್ಯದಲ್ಲಿ ಮೊದಲ ಮತ್ತು ಎರಡನೆಯ ಗಲ್ಫ್ ಯುದ್ಧಗಳಲ್ಲಿ ಚಿನೂಕ್ ಹೆಲಿಕಾಪ್ಟರ್ ಗಳು ಅಮೇರಿಕಾ ಸೇನೆಗೆ ಗಣನೀಯ ಸೇವೆ ಸಲ್ಲಿಸಿದೆ.
ಚಿನೂಕ್‌ನ ಕಾರ್ಯಾಚರಣೆಯ ಸಾಮರ್ಥ್ಯ
ಚಿನೂಕ್ ಹೆಲಿಕಾಪ್ಟರ್ ಗಳು ಭಾರತೀಯ ಸೇನೆಯ ಸೇವೆಯಲ್ಲಿ ಚಂಡೀಗಢದ ಹೊರಭಾಗದಲ್ಲಿ ಮತ್ತು ಈಶಾನ್ಯ ಭಾರತದ ಪ್ರದೇಶದ ಸೇವೆಗಳಿಗಾಗಿ ಅಸ್ಸಾಂ ಬಳಿ ಕಾರ್ಯಾಚರಣೆ ಮಾಡುತ್ತಿದೆ. ಈ ಪ್ರದೇಶಗಳಲ್ಲಿ ಎರಡು ಘಟಕಗಳು ಕಾರ್ಯನಿರ್ವಹಿಸುತ್ತಿವೆ.
Ch47 ಚಿನೂಕ್ ಹೆಲಿಕಾಪ್ಟರ್‌ಗಳು ಏರ್‌ಲಿಫ್ಟ್ ಮತ್ತು ಮಾನವೀಯ ಕಾರ್ಯಾಚರಣೆಗಳಿಗಾಗಿ ಭಾರತೀಯ ವಾಯುಪಡೆಯ ಸೇವೆಯಲ್ಲಿರುವ ಹೆವಿ-ಲಿಫ್ಟ್ ಹೆಲಿಕಾಪ್ಟರ್‌ಗಳಾಗಿವೆ. 2019 ರಲ್ಲಿ ಚಂಡೀಗಢದ ಭಾರತೀಯ ವಾಯುಪಡೆಯ ನಿಲ್ದಾಣದಲ್ಲಿ ಈ ಹೆಲಿಕಾಪ್ಟರ್ ಗಳನ್ನು ಔಪಚಾರಿಕವಾಗಿ ಸೇವೆಗೆ ಅರ್ಪಿಸಲಾಯಿಸಿತು. ಉಳಿದ 11 ಹೆಲಿಕಾಪ್ಟರ್ ಗಳನ್ನು 2020ರಲ್ಲಿ ಸಮರ್ಪಿಸಲಾಯಿತು.
ಚಿನೂಕ್‌ನ ಟಂಡೆಮ್-ರೋಟರ್ ವಿನ್ಯಾಸವು ಅತೀ ಎತ್ತರದಲ್ಲಿ ರಕ್ಷಣಾ ಪಡೆಗಳಿಗೆ ಭಾರವಾದ ಸರಕುಗಳನ್ನು ಸಾಗಿಸಲು ಆದ್ಯತೆಯ ಆಯ್ಕೆಯಾಗಿದೆ. ಅಂಡರ್‌ಸ್ಲಂಗ್ ಕಾರ್ಯಾಚರಣೆ ಸಂದರ್ಭಗಳಲ್ಲಿ ಟ್ಯಾಂಕ್‌ಗಳು, ಪರಿಹಾರ ನೆರವು ಮತ್ತು ಫಿರಂಗಿಗಳನ್ನು ಸಾಗಿಸಲೂ ಈ ಹೆಲಿಕಾಪ್ಟರ್ ಗಳು ಸಹಕಾರಿ.
ಚಿನೂಕ್‌ನ ಟಂಡೆಮ್ ರೋಟರ್ ವಿನ್ಯಾಸವು ಗಾಳಿಯಲ್ಲಿ ಹೆಚ್ಚು ಸ್ಥಿರವಾಗಿ ನಿಯಂತ್ರಿಸಬಲ್ಲ ಗರಿಷ್ಠ ಕಾರ್ಯಕ್ಷಮತೆ ಹೊಂದಿದೆ. ಅದಲ್ಲದೇ ಸುಲಭವಾಗಿ ಲೋಡಿಂಗ್ ಮತ್ತು ಅನ್ ಲೋಡಿಂಗ್ ಮಾಡಲು ರಕ್ಷಣಾ ಪಡೆಗಳಿಗೆ ಸಹಕಾರಿಯಾಗಿದೆ. ಚಿನೂಕ್ ಹೆಲಿಕಾಪ್ಟರ್ 20,000 ಅಡಿಗಳಷ್ಟು ಸರ್ವಿಸ್ ಸೀಲಿಂಗ್ (ಹಾರಬಲ್ಲ ಎತ್ತರ) ಹೊಂದಿದೆ. ಈ ವರ್ಗದಲ್ಲಿ ಇಷ್ಟು ಎತ್ತರಕ್ಕೆ ಹಾರಬಲ್ಲ ಏಕೈಕ ಹೆಲಿಕಾಪ್ಟರ್ ಚಿನೂಕ್ ಎಂದು ಬೋಯಿಂಗ್ ತಿಳಿಸಿದೆ.