ಜಾಹಿರಾತಿನಷ್ಟೇ ದೊಡ್ಡದಾಗಿ ಕ್ಷಮಾಪಣೆಯನ್ನು ಪ್ರಕಟಿಸಲಾಗಿದೆಯೇ?: ಪತಂಜಲಿಗೆ ಸುಪ್ರೀಂ ಕೋರ್ಟ್‌ ತರಾಟೆ

Update: 2024-04-23 06:23 GMT

Photo: PTI

ಹೊಸದಿಲ್ಲಿ: ಪತಂಜಲಿ ಆಯುರ್ವೇದವು ತಪ್ಪುದಾರಿಗೆಳೆಯುವ ಜಾಹೀರಾತು ಪ್ರಕಟಿಸಿದ ಪ್ರಕರಣವನ್ನು ಆಲಿಸಿದ ಸುಪ್ರೀಂ ಕೋರ್ಟ್, ಇಂದು ಪತ್ರಿಕೆಗಳಲ್ಲಿ ಪ್ರಕಟಿಸಿದ ಕ್ಷಮೆಯಾಚನೆಯ ಗಾತ್ರವು ಅದರ ಉತ್ಪನ್ನಗಳ ಪೂರ್ಣ ಪುಟದ ಜಾಹೀರಾತುಗಳಿಗೆ ಸರಿಸಮವಾಗಿದೆಯೇ ಎಂದು ಪ್ರಶ್ನಿಸಿದೆ.

ಪತಂಜಲಿ ಸಂಸ್ಥಾಪಕರಾದ ರಾಮ್‌ದೇವ್ ಮತ್ತು ಬಾಲಕೃಷ್ಣ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ ಅವರು ನ್ಯಾಯಾಲಯದ ಮುಂದೆ ಕ್ಷಮೆಯಾಚನೆಯನ್ನು ಸಲ್ಲಿಸಲಾಗಿದೆ ಎಂದು ತಿಳಿಸಿದರು.

ನಿನ್ನೆ ಏಕೆ ಕ್ಷಮೆಯಾಚಿಸಲಾಗಿದೆ ಎಂದು ಪ್ರಶ್ನಿಸಿದ ನ್ಯಾಯಪೀಠ ಅದನ್ನು ಮೊದಲೇ ಮಾಡಬೇಕಿತ್ತು ಎಂದು ಹೇಳಿದೆ.

ರೂ. 10 ಲಕ್ಷ ವೆಚ್ಚದಲ್ಲಿ 67 ಪತ್ರಿಕೆಗಳಲ್ಲಿ ಕ್ಷಮಾಪಣೆಯನ್ನು ಪ್ರಕಟಿಸಲಾಗಿದೆ ಎಂದು ರೋಹಟಗಿ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಹಿಮಾ ಕೊಹ್ಲಿ, "ಕ್ಷಮೆಯನ್ನು ಪ್ರಮುಖ ಪುಟದಲ್ಲಿ ಪ್ರಕಟಿಸಲಾಗಿದೆಯೇ? ನಿಮ್ಮ ಹಿಂದಿನ ಜಾಹೀರಾತುಗಳ ಅದೇ ಫಾಂಟ್ ಮತ್ತು ಗಾತ್ರದಲ್ಲೇ ಪ್ರಕಟಿಸಲಾಗಿದೆಯೇ?" ಎಂದು ಪ್ರಶ್ನಿಸಿದ್ದಾರೆ.

ಪತ್ರಿಕೆಗಳಲ್ಲಿ ದೊಡ್ಡ ಕ್ಷಮಾಪಣೆಯನ್ನು ಪ್ರಕಟಿಸುವುದಾಗಿ ರಾಮ್‌ದೇವ್ ಪರ ವಕೀಲರು ಹೇಳಿದ ನಂತರ ಸುಪ್ರೀಂ ಕೋರ್ಟ್ ಪ್ರಕರಣವನ್ನು ಒಂದು ವಾರಕ್ಕೆ ಮುಂದೂಡಿದೆ.

ಸುಪ್ರೀಂ ಕೋರ್ಟ್ ವಿಚಾರಣೆಗೆ ಮುನ್ನ, ಪತಂಜಲಿ ಆಯುರ್ವೇದ್ ರಾಷ್ಟ್ರೀಯ ದಿನಪತ್ರಿಕೆಗಳಲ್ಲಿ ಕ್ಷಮೆಯಾಚಿಸಿದ್ದು, ನ್ಯಾಯಾಲಯದ ಬಗ್ಗೆ ತನಗೆ ಹೆಚ್ಚಿನ ಗೌರವವಿದೆ ಮತ್ತು ತಮ್ಮ ತಪ್ಪುಗಳು ಪುನರಾವರ್ತನೆಯಾಗುವುದಿಲ್ಲ ಎಂದು ಪತಂಜಲಿ ಹೇಳಿದೆ.

ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ಕಾಯಿಲೆಗಳನ್ನು ಗುಣಪಡಿಸುವ ಬಗ್ಗೆ ಕಂಪನಿಯ ತಪ್ಪುದಾರಿಗೆಳೆಯುವ ಜಾಹಿರಾತುಗಳ ಬಗ್ಗೆ ಸುಪ್ರೀಂ ಕೋರ್ಟ್‌ ತರಾಟೆ ಎತ್ತಿದ ಬಳಿಕ ಪತಂಜಲಿ ಕ್ಷಮಾಪನೆಯನ್ನು ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News