ಕೇಜ್ರಿವಾಲ್ ಅವರ ಆಪ್ತ ಸಹಾಯಕನಿಂದ ಹಲ್ಲೆ: ಆಪ್ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಆರೋಪ
ಹೊಸದಿಲ್ಲಿ: ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರ ಆಪ್ತ ಸಹಾಯಕ ಬಿಭವ್ ಕುಮಾರ್ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆಪ್ ರಾಜ್ಯಸಭಾ ಸಂಸದೆ ಮತ್ತು ದಿಲ್ಲಿ ಮಹಿಳಾ ಆಯೋಗದ ಮಾಜಿ ಮುಖ್ಯಸ್ಥೆ ಸ್ವಾತಿ ಮಳಿವಾಲ್ ಆರೋಪಿಸಿದ್ದಾರೆ. ಸೋಮವಾರ ಬೆಳಿಗ್ಗೆ ಸ್ವಾತಿ ಅವರು ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ಈ ಆರೋಪ ಹೊರಿಸಿದ್ದರು. ನಂತರ ಅವರು ಸಿವಿಲ್ ಲೈನ್ಸ್ ಠಾಣೆಗೆ ತೆರಳಿ ತಮಗೆ ಬಿಭವ್ ಕುಮಾರ್ ಕಪಾಳಮೋಕ್ಷಗೈದಿದ್ದಾರೆಂದು ಆರೋಪಿಸಿದ್ದರು. ಆದರೆ ಆಕೆ ಔಪಚಾರಿಕವಾಗಿ ದೂರು ನೀಡಿಲ್ಲ ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ.
ವರದಿಗಳ ಪ್ರಕಾರ ಮೇ 13ರಂದು ಬೆಳಿಗ್ಗೆ ಸ್ವಾತಿ ಅವರು ಕೇಜ್ರಿವಾಲ್ ನಿವಾಸಕ್ಕೆ ತೆರಳಿದಾಗ ಅಲ್ಲಿ ಕೇಜ್ರಿವಾಲ್ ಸಿಬ್ಬಂದಿ ಮತ್ತು ಭದ್ರತಾ ತಂಡ ಅವರಿಗೆ ಕೇಜ್ರಿವಾಲ್ ಅವರನ್ನು ಭೇಟಿಯಾಗಲು ಅನುಮತಿಸಲಿಲ್ಲ. ಈ ಸಂದರ್ಭ ಆಕೆ ಹಾಗೂ ಅಲ್ಲಿನ ಸಿಬ್ಬಂದಿ ನಡುವೆ ಜಟಾಪಟಿ ನಡೆದಿತ್ತೆನ್ನಲಾಗಿದ್ದು ಆಗ ಸ್ವಾತಿ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿದ್ದರು.
“ಸಂಸದೆ ಸ್ವಾತಿ ಮಳಿವಾಲ್ ಮಾತನಾಡುತ್ತಿದ್ದೇನೆ, 6 ಫ್ಲ್ಯಾಗ್ ಸ್ಟಾಫ್ ರೋಡ್‌ನಿಂದ ಮಾತನಾಡುತ್ತಿದ್ದೇನೆ. ಸಿಎಂ ಸೂಚನೆಯಂತೆ ವಿಭವ್ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ,” ಎಂದು ಕಂಟ್ರೋಲ್ ರೂಂಗೆ ಕರೆ ಮಾಡಿದ್ದರು.
ನಂತರ ಪೊಲೀಸರು ಸಿಎಂ ನಿವಾಸಕ್ಕೆ ತೆರಳಿದ್ದು ಆಕೆಗೆ ಠಾಣೆಗೆ ಬಂದು ದೂರು ನೀಡಲು ಹೇಳಿದ್ದರು. ಆಕೆ ಠಾಣೆಗೆ ಬಂದಿದ್ದರೂ ಅಲ್ಲಿ ಆಕೆಗೆ ಕರೆಯೊಂದು ಬಂದಿತ್ತು ಹಾಗೂ ನಂತರ ಬಂದು ದೂರು ಸಲ್ಲಿಸುವುದಾಗಿ ಹೇಳಿ ಆಕೆ ಮರಳಿದ್ದರು.
ಆಕೆಯ ದೂರನ್ನು “ಬಾಕಿ” ಎಂದು ಗುರುತು ಮಾಡಲಾಗಿದ್ದು ಯಾವುದೇ ಎಫ್‌ಐಆರ್ ದಾಖಲಾಗಿಲ್ಲ ಎಂದು ಹೇಳಲಾಗಿದೆ.