ಪತ್ರಕರ್ತ ನಿಖಿಲ್‌ ವಾಗ್ಲೆ ಕಾರಿನ ಮೇಲೆ ದಾಳಿ: ಬಿಜೆಪಿ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು

Update: 2024-02-10 19:16 IST
ಪತ್ರಕರ್ತ ನಿಖಿಲ್‌ ವಾಗ್ಲೆ ಕಾರಿನ ಮೇಲೆ ದಾಳಿ:  ಬಿಜೆಪಿ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು

 PHOTO: India Today

  • whatsapp icon

ಪುಣೆ: ಹಿರಿಯ ಪತ್ರಕರ್ತ ನಿಖಿಲ್‌ ವಾಗ್ಲೆ ಆವರ ಕಾರಿನ ಮೇಲೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆ ಪೊಲೀಸರು ಬಿಜೆಪಿ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ನಿಷೇಧಾಜ್ಞೆ ಉಲ್ಲಂಘಿಸಿದ್ದಾರೆಂದು ಆರೋಪಿಸಿ ವಾಗ್ಲೆ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.

ಹಿರಿಯ ಬಿಜೆಪಿ ನಾಯಕ ಎಲ್‌ ಕೆ ಅಡ್ವಾಣಿ ಅವರಿಗೆ ಭಾರತ ರತ್ನ ಘೋಷಿಸಿದ ಬೆನ್ನಿಗೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಡ್ವಾಣಿ ಕುರಿತಂತೆ ವಾಗ್ಲೆ ಮಾಡಿದ್ದಾರೆನ್ನಲಾದ ನಿಂದನಾತ್ಮಕ ಪೋಸ್ಟ್‌ ಅನ್ನು ವಿರೋಧಿಸಿ ಪ್ರತಿಭಟಿಸಿದ ಬಿಜೆಪಿ ಕಾರ್ಯಕರ್ತರು, ವಾಗ್ಲೆ ಹಾಗೂ ಅಸೀಮ್‌ ಸರೋಡೆ ಮತ್ತು ವಿಶ್ವಂಭರ್‌ ಚೌಧುರಿ ಪೊಲೀಸ್ ರಕ್ಷಣೆಯಲ್ಲಿ ನಿರ್ಭಯ್ ಬನೋ ಕಾರ್ಯಕ್ರಮದ ಸ್ಥಳಕ್ಕೆ ತೆರಳುತ್ತಿದ್ದಾಗ ಕಾರಿಗೆ ಶಾಯಿ ಎಸೆದಿದ್ದರು. ಈ ಕಾರ್ಯಕ್ರಮವನ್ನು ನಗರದ ಸಿಂಘಡ್‌ ರಸ್ತೆ ಪ್ರದೇಶದಲ್ಲಿ ರಾಷ್ಟ್ರೀಯ ಸೇವಾ ದಳ ಆಯೋಜಿಸಿತ್ತು.

ಮಹಿಳೆಯೊಬ್ಬರು ದಾಖಲಿಸಿದ ದೂರಿನ ಆಧಾರದಲ್ಲಿ ಆರೋಪಿಗಳ ವಿರುದ್ಧ ಸೆಕ್ಷನ್‌ 147, 336 ಮತ್ತು ಇತರ ನಿಬಂಧನೆಗಳ ಅನ್ವಯ ಪ್ರಕರಣ ದಾಖಲಿಸಲಾಗಿದೆ. ದೂರುದಾರೆ ಮತ್ತು ಇತರ ಕೆಲ ಮಂದಿ ವಾಗ್ಲೆ ಅವರ ಕಾರಿಗೆ ರಕ್ಷಣೆ ನೀಡುತ್ತಿದ್ದರೂ ಕೆಲ ಬಿಜೆಪಿ ಕಾರ್ಯಕರ್ತರು ವಾಹನದತ್ತ ಕಲ್ಲೆಸೆದಿದ್ದರು ಎಂದು ಆರೋಪಿಸಲಾಗಿದೆ.

ನಿಷೇಧಾಜ್ಞೆ ಉಲ್ಲಂಘಿಸಿದ್ದಕ್ಕಾಗಿ ವಾಗ್ಲೆ, ಬಿಜೆಪಿ, ಶಿವಸೇನೆ (ಉದ್ಧವ್‌ ಠಾಕ್ರೆ) ಮತ್ತು ಕಾಂಗ್ರೆಸ್‌ನ ನಗರ ಘಟಕ ಅಧ್ಯಕ್ಷರುಗಳ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.ಪೊಲೀಸ್‌ ಅನುಮತಿಯಿಲ್ಲದೆ ಶುಕ್ರವಾರದ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಪ್ರಧಾನಿ ಮತ್ತು ಅಡ್ವಾಣಿ ವಿರುದ್ಧ ನಿಂದನಾತ್ಮಕ ಪೋಸ್ಟ್‌ ಮಾಡಿದ್ದಕ್ಕಾಗಿ ಈ ಹಿಂದೆ ವಾಗ್ಲೆ ವಿರುದ್ಧ ಪ್ರಕರಣ ದಾಖಲಾಗಿತ್ತು. ಹಿರಿಯ ಬಿಜೆಪಿ ನಾಯಕ ಸುನೀಲ್‌ ದಿಯೋಧರ್‌ ಅವರು ನೀಡಿದ್ದ ದೂರಿನ ಆಧಾರದಲ್ಲಿ ಈ ಪ್ರಕರಣ ದಾಖಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News