ಹಾಂಗ್‌ಕಾಂಗ್, ಸಿಂಗಾಪುರಗಳಲ್ಲಿ ಭಾರತೀಯ ಮಸಾಲೆಗಳಿಗೆ ನಿಷೇಧ | ತಮ್ಮ ಸುರಕ್ಷತೆಯ ಬಗ್ಗೆ ಭಾರತೀಯರಲ್ಲಿ ಆತಂಕ

Update: 2024-04-25 17:14 GMT

ಸಾಂದರ್ಭಿಕ ಚಿತ್ರ

 

ಹೊಸದಿಲ್ಲಿ : ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಹಾಂಗ್ಕಾಂಗ್ ಮತ್ತು ಸಿಂಗಾಪುರಗಳಲ್ಲಿ ಎರಡು ಜನಪ್ರಿಯ ಭಾರತೀಯ ಮಸಾಲೆ ಬ್ರ್ಯಾಂಡ್‌ ಗಳ ನಾಲ್ಕು ಉತ್ಪನ್ನಗಳ ನಿಷೇಧದ ಬಳಿಕ ಹೆಚ್ಚಿನ ಭಾರತೀಯರು ತಮ್ಮ ಸುರಕ್ಷತೆಯ ಬಗ್ಗೆ ಕಳವಳಗೊಂಡಿದ್ದಾರೆ ಎಂದು ಇತ್ತೀಚಿನ ಸಮೀಕ್ಷೆಯು ಬಹಿರಂಗಗೊಳಿಸಿದೆ.

ಆಹಾರ ಸುರಕ್ಷತೆಯನ್ನು ಖಚಿತಪಡಿಸುವಲ್ಲಿ ಭಾರತೀಯ ಆಹಾರ ನಿಯಂತ್ರಣ ಪ್ರಾಧಿಕಾರಗಳ ಕಾರ್ಯಕ್ಷಮತೆಯ ಬಗ್ಗೆ ಜನರ ವಿಶ್ವಾಸವು ಕುಸಿದಿದೆ ಎಂದೂ ಸಮೀಕ್ಷೆಯು ತಿಳಿಸಿದೆ.

ಸ್ತನ ಕ್ಯಾನ್ಸರ್ ಮತ್ತು ಲಿಂಫೋಮಾ (ದುಗ್ಧರಸ ವ್ಯವಸ್ಥೆ) ಕ್ಯಾನ್ಸರ್ಗಳ ಅಪಾಯವನ್ನು ಹೆಚ್ಚಿಸುವ ಕ್ಯಾನ್ಸರ್‌ ಕಾರಕ ಎಥಿಲಿನ್ ಆಕ್ಸೈಡ್ ಇರುವಿಕೆಯನ್ನು ಉಲ್ಲೇಖಿಸಿ ಉಭಯ ದೇಶಗಳು ಎಂಡಿಎಚ್ ಮತ್ತು ಎವರೆಸ್ಟ್ ಮಸಾಲೆಗಳ ನಾಲ್ಕು ಉತ್ಪನ್ನಗಳನ್ನು ನಿಷೇಧಿಸಿವೆ.

ವಿಷಯದ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ನಿಷೇಧದ ಬಳಿಕ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟಗಳ ಪ್ರಾಧಿಕಾರ (ಎಫ್ಎಸ್ಎಸ್ಎಐ)ವು ಸುದ್ದಿಸಂಸ್ಥೆಗೆ ತಿಳಿಸಿದೆ.

ಭಾರತದ ಪ್ರಮುಖ ಸಮುದಾಯ ಸಾಮಾಜಿಕ ಮಾಧ್ಯಮ ವೇದಿಕೆ ಲೋಕಲ್ಸರ್ಕಲ್ಸ್ ನಡೆಸಿರುವ ಸಮೀಕ್ಷೆಯಂತೆ ದೀರ್ಘ ಕಾಲದಿಂದ ಇವರೆಡು ಬ್ರ್ಯಾಂಡ್‌ ಗಳ ಪ್ಯಾಕೇಜ್ಡ್ ಮಸಾಲೆಗಳನ್ನು ಬಳಸುತ್ತಿದ್ದ ಶೇ.72ರಷ್ಟು ಬಳಕೆದಾರರು ಅವುಗಳಲ್ಲಿ ಕ್ಯಾನ್ಸರ್‌ ಕಾರಕ ಅಂಶಗಳು ಪತ್ತೆಯಾದ ಬಳಿಕ ತಾವು ಕಳವಳಗೊಂಡಿರುವುದಾಗಿ ತಿಳಿಸಿದ್ದಾರೆ.

293 ಜಿಲ್ಲೆಗಳಲ್ಲಿಯ 12,361 ಜನರನ್ನು ಸಮೀಕ್ಷೆಗೊಳಪಡಿಸಲಾಗಿದ್ದು,ಶೇ.62ರಷ್ಟು ಜನರು ತಾವು ಈ ಬ್ರ್ಯಾಂಡ್ ಗಳ ಮಸಾಲೆಗಳನ್ನು ಸೇವಿಸುತ್ತಿದ್ದಾಗಿ ಹೇಳಿದ್ದಾರೆ. ಕೇವಲ ಶೇ.10ರಷ್ಟು ಜನರು ತಾವು ಈ ಬ್ರ್ಯಾಂಡ್‌ ಗಳ ಮಸಾಲೆಗಳನ್ನು ಬಳಸುತ್ತಿರಲಿಲ್ಲ ಎಂದು ತಿಳಿಸಿದ್ದಾರೆ. ಆದರೆ ಇತರ ಬ್ರ್ಯಾಂಡ್‌ ಗಳನ್ನು ಬಳಸುತ್ತಿದ್ದು, ಅವುಗಳ ಉತ್ಪನ್ನಗಳು ಸುರಕ್ಷತಾ ಮಾನದಂಡಗಳನ್ನು ಅನುಸರಿಸುತ್ತಿಲ್ಲದಿರಬಹುದು ಮತ್ತು ಇಂತಹುದೇ ಕ್ಯಾನ್ಸರ್‌ ಕಾರಕ ಅಂಶಗಳನ್ನು ಒಳಗೊಂಡಿರಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕರಿಗೆ ಆಹಾರ ಸುರಕ್ಷತೆಯನ್ನು ಖಚಿತಪಡಿಸುವಲ್ಲಿ ಎಫ್ಎಸ್ಎಸ್ಎಐ ಅಥವಾ ರಾಜ್ಯ ಆಹಾರ ನಿಯಂತ್ರಣ ಪ್ರಾಧಿಕಾರಗಳ ಕಾರ್ಯಕ್ಷಮತೆಯ ಬಗ್ಗೆ ತಾವು ಅಂತಹ ವಿಶ್ವಾಸವನ್ನು ಹೊಂದಿಲ್ಲ ಎಂದು ಶೇ.72ರಷ್ಟು ಜನರು ತಿಳಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News