ಸರ್ವಾಧಿಕಾರಗಳು ಹೆಚ್ಚು ದಿನ ಉಳಿಯುವುದಿಲ್ಲ ಎನ್ನುವುದನ್ನು ಬಾಂಗ್ಲಾದೇಶ ತೋರಿಸಿದೆ : ಮೆಹಬೂಬ ಮುಫ್ತಿ

Update: 2024-08-07 16:43 GMT

 ಮೆಹಬೂಬ ಮುಫ್ತಿ | PC : PTI

ಶ್ರೀನಗರ : ಯುವಜನತೆಯನ್ನು ಮೂಲೆಗುಂಪು ಮಾಡಬಾರದು ಮತ್ತು ಸರ್ವಾಧಿಕಾರಗಳು ಹೆಚ್ಚು ದಿನ ಉಳಿಯುವುದಿಲ್ಲ ಎನ್ನುವುದಕ್ಕೆ ಬಾಂಗ್ಲಾದೇಶದಲ್ಲಿಯ ಪರಿಸ್ಥಿತಿಯು ಭಾರತಕ್ಕೆ ಒಂದು ಪಾಠವಾಗಿದೆ ಎಂದು ಪಿಡಿಪಿ ಮುಖ್ಯಸ್ಥೆ ಹಾಗೂ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿಯವರು ಬುಧವಾರ ಇಲ್ಲಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನೀವು ಯುವಜನರನ್ನು ಕಡೆಗಣಿಸಿದಾಗ, ಹೆಚ್ಚುತ್ತಿರುವ ಹಣದುಬ್ಬರ ಮತ್ತು ನಿರುದ್ಯೋಗವನ್ನು ಎದುರಿಸುವಲ್ಲಿ ವೈಫಲ್ಯದಿಂದಾಗಿ ಅವರನ್ನು ನಿರಾಶರನ್ನಾಗಿಸಿದಾಗ ಮತ್ತು ಶಿಕ್ಷಣವನ್ನು ಪಡೆದ ಬಳಿಕವೂ ಅವರಲ್ಲಿ ಅಸಹಾಯಕತೆಯ ಭಾವನೆಯನ್ನು ಮೂಡಿಸಿದಾಗ ಬಾಂಗ್ಲಾದೇಶದಂತಹ ಪರಿಸ್ಥಿತಿ ಉದ್ಭವಿಸಬಹುದು. ಸರ್ವಾಧಿಕಾರವು ಹೆಚ್ಚು ದಿನ ಉಳಿಯುವುದಿಲ್ಲ. ಜನರು ತಮ್ಮ ವಿರುದ್ಧದ ನೀತಿಗಳು ಅಥವಾ ಕಾನೂನುಗಳಿಂದ ಬೇಸತ್ತು ತಾಳ್ಮೆಯನ್ನು ಕಳೆದುಕೊಂಡು ತಿರುಗಿಬಿದ್ದಾಗ ಶೇಕ್ ಹಸೀನಾರಂತಹ ಸ್ಥಿತಿಯನ್ನೇ ನೀವೂ ಎದುರಿಸಬೇಕಾಗುತ್ತದೆ ಮತ್ತು ಅವರಂತೆ ಪಲಾಯನ ಮಾಡಬೇಕಾಗುತ್ತದೆ ಎಂದು ಹೇಳಿದರು.

ಬಾಂಗ್ಲಾದೇಶ ಮತ್ತು ಯುವಜನರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವ ಜಮ್ಮು-ಕಾಶ್ಮೀರದ ಪರಿಸ್ಥಿತಿ ಒಂದೇ ರೀತಿಯಾಗಿದೆ ಎಂದರು.

‘ಯುವಜನರು ಬಾಂಗ್ಲಾದೇಶದಲ್ಲಿಯಂತೆ ಅಸಹಾಯಕತೆಯನ್ನು ಅನುಭವಿಸುತ್ತಿದ್ದಾರೆ. ಇದು ಸಾಲದೆಂಬಂತೆ ಅವರು ದಬ್ಬಾಳಿಕೆ ಮತ್ತು ಬಲಪ್ರಯೋಗ,ಯುಎಪಿಎ ಮತ್ತು ಪಿಎಸ್ಎಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ ನಾವು ಬಾಂಗ್ಲಾದೇಶದ ಬಿಕ್ಕಟ್ಟಿನಿಂದ ಪಾಠ ಕಲಿತುಕೊಳ್ಳಬೇಕು ಮತ್ತು ಯವಜನರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದ ಮುಫ್ತಿ, ಇಂತಹ ಪರಿಸ್ಥಿತಿಗಳು ದೇಶದಲ್ಲಿ ಉದ್ಭವಿಸದಿರಲಿ,ಕಡೆಗಣಿಸಲ್ಪಟ್ಟಾಗ ದುರ್ಬಲ ಜನರೂ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಾರೆ ಎನ್ನುವುದಕ್ಕೆ ಬಾಂಗ್ಲಾದೇಶವು ಉದಾಹರಣೆಯಾಗಿದೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News