ನಂಬಿಕೆ ಇರುವವರು ಇಂದೇ ರಾಮಮಂದಿರಕ್ಕೆ ಹೋಗಬಹುದು: ಬಿಜೆಪಿಯ ಪಿತೂರಿಯನ್ನು ಅಲ್ಲಗಳೆದ ಖರ್ಗೆ
ಹೊಸದಿಲ್ಲಿ: ಜನವರಿ 22ರಂದು ನಡೆಯಲಿರುವ ರಾಮಮಂದಿರ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಕಾಂಗ್ರೆಸ್ ಬಹಿಷ್ಕರಿಸಿರುವುದರ ಕುರಿತು ವಿವಾದ ಸೃಷ್ಟಿಸಿರುವುದು ಬಿಜೆಪಿಯ ಪಿತೂರಿಯ ಭಾಗವೆಂದು ಆರೋಪಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಇದು ಧಾರ್ಮಿಕ ಭಾವನೆಗಳಿಗೆ ಘಾಸಿಯನ್ನುಂಟು ಮಾಡುವ ಉದ್ದೇಶ ಹೊಂದಿಲ್ಲ, ಬದಲಿಗೆ ಬಿಜೆಪಿ ಮತ್ತು ಆರೆಸ್ಸೆಸ್ ನ ರಾಜಕೀಯ ಲಾಭ ಪಡೆಯುವ ಉದ್ದೇಶವನ್ನು ಧಿಕ್ಕರಿಸುವುದಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪಕ್ಷ ಈಗಾಗಲೇ ವಿವರಿಸಿದೆ ಎಂದು ಹೇಳಿದ್ದಾರೆ ಎಂದು hindustantimes.com ವರದಿ ಮಾಡಿದೆ.
ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಹಾಗೂ ಅಧೀರ್ ರಂಜನ್ ಚೌಧರಿ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಕಾಂಗ್ರೆಸ್ ಬಿಡುಗಡೆ ಮಾಡಿದ್ದ ಹೇಳಿಕೆಯಿಂದ ಭಾರಿ ವಿವಾದ ಸೃಷ್ಟಿಯಾಗಿದ್ದು, ಕಾಂಗ್ರೆಸ್ ಹಿಂದೂ ವಿರೋಧಿ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ. ಮೊದಲಿಗೆ ಅವರನ್ನು ಕಾರ್ಯಕ್ರಮಕ್ಕೇ ಆಹ್ವಾನಿಸಬಾರದಿತ್ತು ಎಂದು ಕಿಡಿ ಕಾರಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ವಿಸ್ವ ಶರ್ಮ, ಒಂದು ವೇಳೆ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರೆ ಅವರ ಈ ಹಿಂದಿನ ಪಾಪವಾದರೂ ಕಡಿಮೆಯಾಗುತ್ತಿತ್ತು ಎಂದು ಕುಟುಕಿದ್ದಾರೆ. ಮುಂದುವರಿದು, 2005ರಲ್ಲಿ ಕಾಬೂಲ್ ನ ಸಮಾಧಿಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿಯವರ ಫೋಟೊವನ್ನು ಹಂಚಿಕೊಂಡಿರುವ ಶರ್ಮ, ಕಾಂಗ್ರೆಸ್ ನ ದ್ವೇಷವೇನಿದ್ದರೂ ಹಿಂದೂಗಳ ವಿರುದ್ಧ ಎಂದು ಹರಿಹಾಯ್ದಿದ್ದಾರೆ. ಪಕ್ಷದ ನಾಯಕತ್ವವು ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು ಎಂದು ಕೆಲವು ಕಾಂಗ್ರೆಸ್ ನಾಯಕರೂ ಆಕ್ಷೇಪಿಸಿದ್ದಾರೆ.
ಶುಕ್ರವಾರ ವಿಡಿಯೊವೊಂದನ್ನು ಬಿಡುಗಡೆ ಮಾಡಿರುವ ಬಿಜೆಪಿ, ರಾಮನನ್ನು ವಿರೋಧಿಸುವುದೇ ಕಾಂಗ್ರೆಸ್ ಸಂಪ್ರದಾಯವಾಗಿದೆ ಎಂದು ಟೀಕಿಸಿದೆ. ಇದಕ್ಕೆ ಪ್ರತಿಯಾಗಿ, ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲದ ನಾಲ್ವರು ಶಂಕರಾಚಾರ್ಯರನ್ನೇಕೆ ಬಿಜೆಪಿ ಪ್ರಶ್ನಿಸುತ್ತಿಲ್ಲ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.