ಪಿ ವಿ ನರಸಿಂಹ ರಾವ್, ಚೌಧುರಿ ಚರಣ್ ಸಿಂಗ್, ಎಂ ಎಸ್ ಸ್ವಾಮಿನಾಥನ್ ಅವರಿಗೆ ಭಾರತ ರತ್ನ ಪ್ರಶಸ್ತಿ ಘೋಷಣೆ
ಹೊಸದಿಲ್ಲಿ : ಮಾಜಿ ಪ್ರಧಾನಿಗಳಾದ ಪಿ.ವಿ.ನರಸಿಂಹರಾವ್ ಮತ್ತು ಚೌಧರಿ ಚರಣ್ ಸಿಂಗ್ ಹಾಗೂ ಕೃಷಿ ವಿಜ್ಞಾನಿ ಎಂ.ಎಸ್.ಸ್ವಾಮಿನಾಥನ್ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನವನ್ನು ಮರಣೋತ್ತರವಾಗಿ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಪ್ರಕಟಿಸಿದರು.
ರಾವ್ 2004ರಲ್ಲಿ,ಚರಣ್ ಸಿಂಗ್ 1987ರಲ್ಲಿ ಮತ್ತು ಸ್ವಾಮಿನಾಥನ್ 2023, ಸೆಪ್ಟಂಬರ್ ನಲ್ಲಿ ನಿಧನರಾಗಿದ್ದಾರೆ.
ರಾವ್ ಅವರನ್ನು ಖ್ಯಾತ ವಿದ್ವಾಂಸ ಮತ್ತು ರಾಜನೀತಿಜ್ಞ ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್ ನಲ್ಲಿ ಬಣ್ಣಿಸಿರುವ ಮೋದಿ, ‘ಅವರ ದೂರದೃಷ್ಟಿಯ ನಾಯಕತ್ವವು ಭಾರತವನ್ನು ಆರ್ಥಿಕವಾಗಿ ಮುನ್ನಡೆಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿತ್ತು. ಪ್ರಧಾನ ಮಂತ್ರಿಯಾಗಿ ನರಸಿಂಹರಾವ್ ಅವರ ಅಧಿಕಾರಾವಧಿಯು ಭಾರತವನ್ನು ಜಾಗತಿಕ ಮಾರುಕಟ್ಟೆಗಳಿಗೆ ಮುಕ್ತಗೊಳಿಸಿದ, ಆರ್ಥಿಕ ಅಭಿವೃದ್ಧಿಯ ಹೊಸ ಯುಗವನ್ನು ಬೆಳೆಸಿದ ಮಹತ್ವಪೂರ್ಣ ಕ್ರಮಗಳೊಂದಿಗೆ ಗುರುತಿಸಲ್ಪಟ್ಟಿದೆ’ ಎಂದು ಬರೆದಿದ್ದಾರೆ.
ರಾವ್ 1991ರಿಂದ 1996ರವರೆಗೆ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರವನ್ನು ಮುನ್ನಡೆಸಿದ್ದರು.
ಭಾರತದ ಐದನೇ ಪ್ರಧಾನಿ ಮತ್ತು ಜನತಾ ಪಾರ್ಟಿಯ ನಾಯಕ ಚರಣ್ ಸಿಂಗ್ ಕುರಿತಂತೆ ಮೋದಿ, ‘ಭಾರತ ರತ್ನ ಪ್ರಶಸ್ತಿಯು ದೇಶಕ್ಕೆ ಅವರ ಅನುಪಮ ಕೊಡುಗೆಗೆ ಸಮರ್ಪಿತವಾಗಿದೆ. ಅವರು ತನ್ನ ಇಡೀ ಜೀವನವನ್ನು ರೈತರ ಹಕ್ಕುಗಳು ಮತ್ತು ಕಲ್ಯಾಣಕ್ಕಾಗಿ ಮುಡಿಪಾಗಿಟ್ಟಿದ್ದರು. ತುರ್ತು ಪರಿಸ್ಥಿತಿಯ ವಿರುದ್ಧವೂ ಅವರು ದೃಢವಾಗಿ ನಿಂತಿದ್ದರು. ನಮ್ಮ ರೈತ ಸೋದರರು ಮತ್ತು ಸೋದರಿಯರಿಗೆ ಅವರ ಸಮರ್ಪಣೆ ಮತ್ತು ತುರ್ತು ಪರಿಸ್ಥಿತಿ ಸಂದರ್ಭ ಪ್ರಜಾಪ್ರಭುತ್ವಕ್ಕೆ ಅವರ ಬದ್ಧತೆ ಇಡೀ ರಾಷ್ಟ್ರಕ್ಕೆ ಸ್ಫೂರ್ತಿದಾಯಕವಾಗಿದೆ ’ ಎಂದು ಹೇಳಿದ್ದಾರೆ.
ಚರಣ್ ಸಿಂಗ್ 1979ರಲ್ಲಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ಉತ್ತರ ಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿಯು ರಾಷ್ಟ್ರೀಯ ಲೋಕದಳದೊಂದಿಗೆ ಮೈತ್ರಿಯನ್ನು ಮಾಡಿಕೊಳ್ಳಲು ನೋಡುತ್ತಿದೆ ಎಂಬ ಮಾಧ್ಯಮ ವರದಿಗಳ ನಡುವೆಯೇ ಸಿಂಗ್ ಅವರಿಗೆ ಪ್ರಶಸ್ತಿ ಘೋಷಣೆಯು ಹೊರಬಿದ್ದಿದೆ. ರಾಷ್ಟ್ರೀಯ ಲೋಕದಳವನ್ನು ಸಿಂಗ್ ಅವರ ಪುತ್ರ ಅಜಿತ ಸಿಂಗ್ ಸ್ಥಾಪಿಸಿದ್ದು,ಈಗ ಅವರ ಮೊಮ್ಮಗ ಜಯಂತ ಸಿಂಗ್ ಪಕ್ಷವನ್ನು ಮುನ್ನಡೆಸುತ್ತಿದ್ದಾರೆ.
ಮೋದಿಯವರ ಭಾರತ ರತ್ನ ಪ್ರಕಟಣೆಯ ಬೆನ್ನಲ್ಲೇ ಜಯಂತ ಸಿಂಗ್ ‘ದಿಲ್ ಜೀತ್ ಲಿಯಾ(ಹೃದಯವನ್ನು ಗೆದ್ದಿದ್ದೀರಿ)’ ಎಂದು ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ.
ಸ್ವಾಮಿನಾಥನ್ ಅವರಿಗೆ ಭಾರತ ರತ್ನ ಪ್ರಶಸ್ತಿ ಕುರಿತಂತೆ ಮೋದಿ,‘ಅದು ಕೃಷಿಯಲ್ಲಿ ಮತ್ತು ರೈತರ ಕಲ್ಯಾಣದಲ್ಲಿ ನಮ್ಮ ದೇಶಕ್ಕೆ ಅವರು ನೀಡಿರುವ ಮಹತ್ವದ ಕೊಡುಗೆಗಳಿಗೆ ಗೌರವವಾಗಿದೆ. ಓರ್ವ ಆವಿಷ್ಕಾರಿಯಾಗಿ, ಮಾರ್ಗದರ್ಶಿಯಾಗಿ ಹಾಗೂ ಹಲವಾರು ವಿದ್ಯಾರ್ಥಿಗಳಲ್ಲಿ ಕಲಿಕೆ ಮತ್ತು ಸಂಶೋಧನೆಯನ್ನು ಉತ್ತೇಜಿಸುವುದರಲ್ಲಿ ಅವರ ಅಮೂಲ್ಯ ಕಾರ್ಯವನ್ನು ನಾವು ಗೌರವಿಸುತ್ತೇವೆ ’ ಎಂದು ಬರೆದಿದ್ದಾರೆ.
‘ಡಾ.ಸ್ವಾಮಿನಾಥನ್ ಅವರ ದೂರದೃಷ್ಟಿಯ ನಾಯಕತ್ವವು ಭಾರತೀಯ ಕೃಷಿಯನ್ನು ಪರಿವರ್ತಿಸಿದ್ದು ಮಾತ್ರವಲ್ಲ,ದೇಶದ ಆಹಾರ ಭದ್ರತೆ ಮತ್ತು ಸಮೃದ್ಧಿಯನ್ನೂ ಖಚಿತಪಡಿಸಿದೆ. ಅವರು ನಾನು ನಿಕಟವಾಗಿ ತಿಳಿದಿದ್ದ ವ್ಯಕ್ತಿಯಾಗಿದ್ದರು. ಅವರ ಒಳನೋಟಗಳು ಮತ್ತು ಸಲಹೆಗಳನ್ನು ನಾನು ಯಾವಾಗಲೂ ಗೌರವಿಸಿದ್ದೇನೆ. ಕೃಷಿಯಲ್ಲಿ ಭಾರತವು ಸ್ವಾವಲಂಬನೆಯನ್ನು ಸಾಧಿಸಲು ನೆರವಾಗುವುದರಲ್ಲಿ ಅವರು ಪ್ರಮುಖ ಪಾತ್ರವನ್ನು ವಹಿಸಿದ್ದರು ’ಎಂದೂ ಮೋದಿ ಹೇಳಿದ್ದಾರೆ.
ಕೇಂದ್ರವು ಈ ವರ್ಷ ಭಾರತ ರತ್ನ ಪ್ರಶಸ್ತಿಗಾಗಿ ಐವರನ್ನು ಹೆಸರಿಸಿದೆ.
ಗಣರಾಜ್ಯೋತ್ಸವ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಮಾಜವಾದಿ ನಾಯಕ ಹಾಗೂ ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ಮರಣೋತ್ತರವಾಗಿ ಪ್ರದಾನಿಸಿದ್ದರು.
ಫೆ.3ರಂದು ಮೋದಿಯವರು ಹಿರಿಯ ಬಿಜೆಪಿ ನಾಯಕ ಹಾಗೂ ಮಾಜಿ ಉಪಪ್ರಧಾನಿ ಎಲ್.ಕೆ.ಅಡ್ವಾಣಿ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ಪ್ರಕಟಿಸಿದ್ದರು.