“ಹೋರಾಟವಿನ್ನೂ ಅಂತ್ಯಗೊಂಡಿಲ್ಲ”: ಸುಪ್ರೀಂಕೋರ್ಟ್ ತೀರ್ಪಿನ ಕುರಿತು ಬಿಲ್ಕಿಸ್ ಬಾನು ಕುಟುಂಬದ ಹೇಳಿಕೆ
ಹೊಸದಿಲ್ಲಿ: 2002ರ ಬಿಲ್ಕಿಸ್ ಬಾನು ಪ್ರಕರಣದಲ್ಲಿ ಕ್ಷಮಾದಾನ ಪಡೆದು, ಆಗಸ್ಟ್ 15, 2022ರಂದು ಅವಧಿಪೂರ್ವ ಬಿಡುಗಡೆ ಹೊಂದಿದ್ದ 11 ಮಂದಿ ಅಪರಾಧಿಗಳ ಕ್ಷಮಾದಾನ ಹಾಗೂ ಬಿಡುಗಡೆಯನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿರುವ ಬೆನ್ನಿಗೇ, “ಬಿಲ್ಕಿಸ್ ಬಾನು ನಿರಾಳವಾಗಿದ್ದರೂ, ಗೆದ್ದ ಖುಷಿಯಲ್ಲಿಲ್ಲ” ಎಂದು ಅವರ ಕುಟುಂಬದ ನಿಕಟವರ್ತಿ ಮೂಲಗಳು ತಿಳಿಸಿವೆ ಎಂದು The Indian Express ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕ್ಷಮಾದಾನ ನೀಡಿರುವ ಗುಜರಾತ್ ಸರ್ಕಾರದ ವ್ಯಾಪ್ತಿಯನ್ನು ಪ್ರಶ‍್ನಿಸಿ ತಾವು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿರುವ ಕುರಿತು ಬಿಲ್ಕಿಸ್ ಬಾನು ಕುಟುಂಬ ಸಮಾಧಾನ ವ್ಯಕ್ತಪಡಿಸಿದೆ ಎಂದು ಮೂಲಗಳು ತಿಳಿಸಿವೆ.
ಆದರೆ, ನ್ಯಾಯಾಲಯದ ವಿಚಾರಣೆಯು ಇನ್ನೂ ಮುಕ್ತಾಯವಾಗಬೇಕಿರುವುದರಿಂದ ಈ ಕುರಿತು ಮತ್ತಷ್ಟು ಪ್ರತಿಕ್ರಿಯೆ ನೀಡಲು ಬಿಲ್ಕಿಸ್ ಬಾನು ಕುಟುಂಬವು ನಿರಾಕರಿಸಿದೆ.
“ಸುಪ್ರೀಂಕೋರ್ಟ್ ನ್ಯಾಯಾಂಗದ ಬಗೆಗಿನ ನಮ್ಮ ವಿಶ‍್ವಾಸವನ್ನು ಮರಳಿ ಸ್ಥಾಪಿಸಿದೆ ಹಾಗೂ ನ್ಯಾಯವು ಜೀವಂತವಾಗಿದೆ ಎಂಬ ಸಮಾಧಾನವನ್ನು ನಮಗೆ ನೀಡಿದೆ. ಆದರೆ, ಅಪರಾಧಿಗಳು ಬೇರೆ ರಾಜ್ಯದಿಂದ ಕ್ಷಮಾದಾನ ಪಡೆಯಲು ಅರ್ಜಿ ಸಲ್ಲಿಸುವ ಸಿದ್ಧತೆಯಲ್ಲಿರುವುದರಿಂದ ನಾವು ಗೆಲುವಿನ ಖುಷಿ ಅನುಭವಿಸಲು ಸಾಧ್ಯವಿಲ್ಲ. ಅಪರಾಧಿಗಳು ಕ್ಷಮಾದಾನಕ್ಕೆ ಮನವಿ ಸಲ್ಲಿಸುವಾಗ ಅವರು ಜೈಲಿನಿಂದ ಹೊರಗುಳಿಯಲು ನ್ಯಾಯಾಲಯವು ಅನುಮತಿ ನೀಡಲಿದೆಯೆ ಎಂಬ ಬಗ್ಗೆ ನಮಗಿನ್ನೂ ಅನುಮಾನವಿದೆ. ಅವರು ಮರಳಿ ಜೈಲಿಗೆ ಹೋಗುವವರೆಗೂ ನಮ್ಮ ಹೋರಾಟವು ಅಂತಿಮಗೊಂಡಿರುವಂತೆ ಕಾಣುತ್ತಿಲ್ಲ” ಎಂದು ಬಿಲ್ಕಿಸ್ ಬಾನು ಕುಟುಂಬ ತಿಳಿಸಿದೆ.
ಆಗಸ್ಟ್ 2022ರಲ್ಲಿ ಅಪರಾಧಿಗಳಿಗೆ ಕ್ಷಮಾದಾನ ನೀಡಿದಂದಿನಿಂದ ಬಿಲ್ಕಿಸ್ ಬಾನು ಹಾಗೂ ಅವರ ಕುಟುಂಬವು ಗೌಪ್ಯ ಸ್ಥಳದಲ್ಲಿ ವಾಸಿಸುತ್ತಿದೆ ಎಂದೂ ಮೂಲಗಳು ತಿಳಿಸಿವೆ.