ಪರ್ವತ ಗಾತ್ರದ ಕಲ್ಲನ್ನು ಎದೆಯಿಂದ ಕೆಳಗಿಳಿಸಿದ ಅನುಭವ: ಸುಪ್ರೀಂ ತೀರ್ಪಿನ ನಂತರ ಬಿಲ್ಕಿಸ್‌ ಬಾನು

Update: 2024-01-11 12:40 GMT

ಬಿಲ್ಕಿಸ್‌ ಬಾನು (PTI)

ಹೊಸದಿಲ್ಲಿ: “ಇಂದು ನನ್ನ ಪಾಲಿಗೆ ನಿಜವಾದ ಹೊಸ ವರ್ಷ. ಸಮಾಧಾನದ ಕಣ್ಣೀರು ಸುರಿಸಿದ್ದೇವೆ. ಒಂದೂವರೆ ವರ್ಷಕ್ಕೂ ಹೆಚ್ಚು ಸಮಯದ ನಂತರ ಮತ್ತೆ ನನ್ನಲ್ಲಿ ನಗು ಮೂಡಿದೆ. ನನ್ನ ಮಕ್ಕಳನ್ನು ಆಲಂಗಿಸಿದೆ. ಪರ್ವತ ಗಾತ್ರದ ಕಲ್ಲೊಂದನ್ನು ನನ್ನ ಎದೆಯಿಂದ ಕೆಳಗಿಳಿಸಿದ ಅನುಭವವಾಗುತ್ತದೆ, ಮತ್ತೆ ಉಸಿರಾಡುವಂತಾಗಿದೆ. ನ್ಯಾಯದಾನವೆಂದರೆ ಹೀಗೆ ಅನಿಸುತ್ತದೆ. ಸರ್ವರಿಗೂ ಸಮಾನ ನ್ಯಾಯ ದೊರಕುತ್ತದೆ ಎಂಬ ಕುರಿತು ನನಗೆ, ನನ್ನ ಮಕ್ಕಳಿಗೆ ಮತ್ತು ಎಲ್ಲಾ ಮಹಿಳೆಯರಿಗೆ ಆಶಾವಾದ ಮೂಡಿಸಿದ ಮಾನ್ಯ ಸುಪ್ರೀಂ ಕೋರ್ಟ್‌ಗೆ ಧನ್ಯವಾದಗಳು,” ಎಂದು ತಮ್ಮ ವಕೀಲರ ಮೂಲಕ ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ಬಿಲ್ಕಿಸ್‌ ಬಾನು ಸೋಮವಾರದ ಸುಪ್ರೀಂ ಕೋರ್ಟ್‌ ತೀರ್ಪಿನ ನಂತರ ಹೇಳಿದ್ದಾರೆ. ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರಗೈದ ಆಕೆಯ ಹಸುಳೆ ಹಾಗೂ ಕುಟುಂಬದ ಸದಸ್ಯರನ್ನು ಹತ್ಯೆಗೈದ ಪ್ರಕರಣದ 11 ಅಪರಾಧಿಗಳನ್ನು ಬಿಡುಗಡೆಗೊಳಿಸಿ ಗುಜರಾತ್‌ ಸರ್ಕಾರ ಹೊರಡಿಸಿದ್ದ ಆದೇಶವನ್ನು ಸುಪ್ರೀಂ ಕೋರ್ಟ್‌ ಸೋಮವಾರ ರದ್ದುಗೊಳಿಸಿದ ನಂತರ ಬಿಲ್ಕಿಸ್‌ ಹೇಳಿಕೆ ಬಿಡುಗಡೆಯಾಗಿದೆ.

2022ರಲ್ಲಿ ಎಲ್ಲಾ ಅಪರಾಧಿಗಳ ಬಿಡುಗಡೆಯಾದಾಗ ತಮ್ಮ ಭಾವನೆಯ ಬಗ್ಗೆ ಹೇಳಿಕೊಂಡ ಬಾನೊ, “ಒಂದೂವರೆ ವರ್ಷಗಳ ಹಿಂದೆ, ಆಗಸ್ಟ್‌ 15, 2022 ರಂದು ನನ್ನ ಕುಟುಂಬವನ್ನು ನಾಶಗೈದವರು ಹಾಗೂ ನನ್ನ ಅಸ್ತಿತ್ವವನ್ನೇ ಬೆದರಿಸಿದವರನ್ನು ಶೀಘ್ರ ಬಿಡುಗಡೆಗೊಳಿಸಿದಾಗ ನಾನು ಕುಸಿದು ಬಿದ್ದೆ. ನನ್ನ ಧೈರ್ಯ ಕಳೆದುಹೋಗಿದೆ ಎಂದು ಅನಿಸಿತ್ತು. ಆದರೆ ದೇಶದ ಸಾವಿರಾರು ಜನರು ಮತ್ತು ಮಹಿಳೆಯರು ನನಗೆ ಬೆಂಬಲ ಸೂಚಿಸಿದರು,” ಎಂದು ಅವರು ಹೇಳಿದ್ದಾರೆ.

"ನಾನು ಇದನ್ನು ಮುಂಚೆ ಹೇಳಿದ್ದೇನೆ, ಈಗ ಮತ್ತೊಮೆ ಹೇಳಲು ಬಯಸುತ್ತೇನೆ. ನನ್ನ ಈ ಪಯಣವನ್ನು ಒಬ್ಬಳೇ ಮಾಡುವುದು ಸಾಧ್ಯವಿರಲಿಲ್ಲ. ನನ್ನ ಗಂಡ ಮತ್ತು ಮಕ್ಕಳು ನನಗೆ ಜೊತೆಯಾಗಿದ್ದರು. ನನ್ನ ಸ್ನೇಹಿತರು ನನಗೆ ಅಂಥ ದ್ವೇಷವನ್ನು ಎದುರಿಸುವ ಸಮಯದಲ್ಲಿ ನನಗೆ ಪ್ರೀತಿಯ ಧಾರೆ ಎರೆದಿದ್ದಾರೆ. ಪ್ರತಿಯೊಂದು ಕಷ್ಟದ ತಿರುವಿನಲ್ಲೂ ಅವರು ನನ್ನ ಕೈಹಿಡಿದಿದ್ದಾರೆ" ಎಂದು ಬಿಲ್ಕಿಸ್‌ ಹೇಳಿದ್ದಾರೆ.

ತಮಗೆ ಸಹಕಾರ ನೀಡಿದ ಎಲ್ಲರನ್ನೂ ಸ್ಮರಿಸಿದ ಆಕೆ ತಮ್ಮೊಂದಿಗೆ 20 ವರ್ಷ ಬೆಂಬಲವಾಗಿ ನಿಂತು ನ್ಯಾಯ ಒದಗಿಸಲು ಸಹಕರಿಸಿದ ವಕೀಲೆ ಶೋಭಾ ಗುಪ್ತಾ ಅವರಿಗೂ ಧನ್ಯವಾದ ತಿಳಿಸಿದರು.

“ಜನರು ನನಗಾಗಿ ಎದ್ದು ನಿಂತು ಮಾತನಾಡಿದರು, ಸುಪ್ರೀಂ ಕೋರ್ಟಿನಲ್ಲಿ ಪಿಐಎಲ್‌ ದಾಖಲಿಸಿದರು, ಸಾವಿರಾರು ಮಂದಿ ಮನವಿ ಸಲ್ಲಿಸಿದರು, 10,000 ಜನರು ಬಹಿರಂಗ ಪತ್ರ ಬರೆದರು, ಕರ್ನಾಟಕದ 29 ಜಿಲ್ಲೆಗಳ 40,000 ಜನ ಬಹಿರಂಗ ಪತ್ರ ಬರೆದರು, ಎಲ್ಲರಿಗೂ ಧನ್ಯವಾದಗಳು ನನ್ನ ಹೋರಾಟಕ್ಕೆ ಬೆಂಬಲ ನೀಡಿದ್ದಕ್ಕಾಗಿ. ನನಗಾಗಿ ನ್ಯಾಯ ಒದಗಿಸಲು ಮತ್ತು ದೇಶದ ಪ್ರತಿಯೊಬ್ಬ ಮಹಿಳೆಗೆ ನ್ಯಾಯ ಒದಗಿಸಲು ಶ್ರಮಿಸಿದ್ದಕ್ಕೆ ಧನ್ಯವಾದ,” ಎಂದು ಬಿಲ್ಕಿಸ್‌ ಹೇಳಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News