“ಜಗನ್ನಾಥ ದೇವರು ಮೋದಿಯ ಭಕ್ತ” ಎಂದು ಹೇಳಿ ಪೇಚಿಗೀಡಾದ ಬಿಜೆಪಿ ಅಭ್ಯರ್ಥಿ ಸಂಬಿತ್ ಪಾತ್ರ
ಹೊಸದಿಲ್ಲಿ: “ಜಗನ್ನಾಥ ದೇವರು ಮೋದಿಯ ಭಕ್ತ” ಎಂದು ಬಿಜೆಪಿಯ ಪುರಿ ಕ್ಷೇತ್ರದ ಅಭ್ಯರ್ಥಿ ಸಂಬಿತ್ ಪಾತ್ರ ಸೋಮವಾರ ಸಂದರ್ಶನವೊಂದರಲ್ಲಿ ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ನಂತರ ಸಾವರಿಸಿಕೊಂಡ ಪಾತ್ರ ತಾನೂ ಬಾಯ್ತಪ್ಪಿ ಹೀಗೆ ಹೇಳಿರುವುದಾಗಿ ತಿಳಿಸಿದ್ದಾರೆ.
ಸೋಮವಾರ ಬೆಳಿಗ್ಗೆ ಪ್ರಧಾನಿ ಮೋದಿಯೊಂದಿಗೆ ರೋಡ್ ಶೋದಲ್ಲಿ ಭಾಗವಹಿಸಿದ್ದ ಪಾತ್ರ ನಂತರ ಕನಕ್ ಸುದ್ದಿ ವಾಹಿನಿ ಜೊತೆ ಸಂದರ್ಶನದಲ್ಲಿ ಮಾತನಾಡುತ್ತಾ, “ಜಗನ್ನಾಥ ದೇವರು ಮೋದಿಯ ಭಕ್ತ ಮತ್ತು ನಾವೆಲ್ಲರೂ ಮೋದಿಯ ಪರಿವಾರ. ನನಗೆ ಇಂತಹ ಅದ್ಭುತ ಕ್ಷಣಗಳನ್ನು ನೋಡಿ ಭಾವನೆಗಳನ್ನು ತಡೆಯಲಾಗುತ್ತಿಲ್ಲ. ಇದು ಎಲ್ಲಾ ಒಡಿಯಾ ಜನರಿಗೆ ವಿಶೇಷ ದಿನ,” ಎಂದು ಹೇಳಿದರು.
ಸಂಬಿತ್ ಪಾತ್ರ ಅವರ ಹೇಳಿಕೆಯನ್ನು ಖಂಡಿಸಿದ ಮುಖ್ಯಮಂತ್ರಿ ನವೀನ್ ಪಟ್ನಾಯಕ್. “ಮಹಾಪ್ರಭು (ಜಗನ್ನಾಥ್) ಅವರನ್ನು ಮನುಷ್ಯರೊಬ್ಬರ ಭಕ್ತ ಎನ್ನುವುದು ದೇವರಿಗೆ ಮಾಡಿದ ಅವಮಾನ. ಇದು ಜನರ ಭಾವನೆಗಳಿಗೆ ಹಾಗೂ ಜಗನ್ನಾಥ ದೇವರ ಕೋಟ್ಯಂತರ ಭಕ್ತರಿಗೆ ಮತ್ತು ಜಗತ್ತಿನಾದ್ಯಂತದ ಒಡಿಯಾ ಜನರಿಗೆ ಅವಮಾನ ಉಂಟು ಮಾಡಿದೆ. ಜಗನ್ನಾಥ ದೇವರು ಒಡಿಯಾ ಅಸ್ಮಿತೆಯ ದೊಡ್ಡ ಸಂಕೇತ, ಅವರನ್ನು ಮನುಷ್ಯರೊಬ್ಬರ ಭಕ್ತರೆನ್ನುವುದು ಖಂಡನಾರ್ಹ,” ಎಂದರು.
ಕಾಂಗ್ರೆಸ್ ಪಕ್ಷ ಕೂಡ ಸಂಬಿತ್ ಪಾತ್ರ ಅವರಿಗೆ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಲು ಹೇಳಿದೆಯಲ್ಲದೆ ಅವರು ದೇವರ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದೆ.