ಬಿಜೆಪಿ ಶೇ.60ರಷ್ಟು ಜನಸಂಖ್ಯೆಯನ್ನು ಪ್ರತಿನಿಧಿಸುವ ನಾಯಕನನ್ನು ಕಡೆಗಣಿಸಿದೆ

Update: 2023-09-08 17:58 GMT

ರಾಹುಲ್ ಗಾಂಧಿ| Photo: PTI 

ಹೊಸದಿಲ್ಲಿ: ರಾಜ್ಯಸಭಾದ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಜಿ20 ಔತಣಕೂಟಕ್ಕೆ ಆಹ್ವಾನ ನೀಡದೆ ಇರುವ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು, ‘‘ಬಿಜೆಪಿಯು ಭಾರತದ ಶೇ.60ರಷ್ಟು ಜನಸಂಖ್ಯೆಯ ನಾಯಕನಿಗೆ ಬೆಲೆಕೊಡುತ್ತಿಲ್ಲ’’ ಎಂದು ಟೀಕಿಸಿದ್ದಾರೆ.

‘‘ ಇದಕ್ಕಿಂತ ವ್ಯತಿರಿಕ್ತತೆ ಇನ್ನೇನಿದೆ? ಪ್ರತಿಪಕ್ಷ ನಾಯಕನನ್ನು ಅವರು (ಬಿಜೆಪಿ ಸರಕಾರ) ಆಹ್ವಾನಿಸದಿರಲು ಅವರು ನಿರ್ಧರಿಸಿದ್ದಾರೆ. ಇದು ನಿಮಗೆ ಬೇರೇನೊ ಸಂದೇಶವನ್ನು ನೀಡುತ್ತಿದೆ. ಅವರು ದೇಶದ ಶೇ.60ರಷ್ಟು ಜನಸಂಖ್ಯೆಯನ್ನು ಗಣನೆಗೆ ತೆಗೆದುಕೊಂಡಿಲ್ಲವೆಂಬುದನ್ನು ಇದು ಹೇಳುತ್ತದೆ. ಖರ್ಗೆ ಅವರಿಗೆ ಔತಣಕೂಟಕ್ಕೆ ಆಹ್ವಾನಿಸದೆ ಇರುವ ಹಿಂದೆ ಯಾವ ಯೋಚನೆಯಿದೆ ಎಂಬುದನ್ನು ಜನತೆ ಚಿಂತಿಸಬೇಕಾಗಿದೆ’’ ಎಂದು ರಾಹುಲ್ ಅವರು ಹೇಳಿದರು.

ಅವರು ಬೆಲ್ಜಿಯಂ ರಾಜಧಾನಿ ಬ್ರುಸೆಲ್ಸ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ರಶ್ಯ ಹಾಗೂ ಉಕ್ರೇನ್ ಕುರಿತ ಕೇಂದ್ರ ಸರಕಾರದ ನಿಲುವನ್ನು ಭಾರತದ ಪ್ರತಿಪಕ್ಷಗಳು ಬಹುತೇಕವಾಗಿ ಒಪ್ಪಿಕೊಂಡಿವೆ ಎಂದು ಅವರು ಹೇಳಿದರು.

ಪಾಶ್ಚಾತ್ಯ ದೇಶಗಳ ನಿರ್ಬಂಧದ ನಡುವೆಯೂ ರಶ್ಯದಿಂದ ತೈಲದ ಖರೀದಿಯನ್ನು ಭಾರತವು ಮುಂದುವರಿಸಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ರಾಹುಲ್ ಹೀಗೆ ಉತ್ತರಿಸಿದರು.

ರಶ್ಯ-ಉಕ್ರೇನ್ ಯುದ್ಧದ ಕುರಿತು ಮೋದಿ ಸರಕಾರದ ನಿಲುವನ್ನು ಮಾಜಿ ಪ್ರಧಾನಿ ಮನಮೋಹನ್‌ಸಿಂಗ್ ಬೆಂಬಲಿಸಿರುವ ಬೆನ್ನಲ್ಲೇ ರಾಹುಲ್ ಈ ಹೇಳಿಕೆ ನೀಡಿದ್ದಾರೆ̤

‘‘ ರಶ್ಯ-ಉಕ್ರೇನ್ ಯುದ್ಧದದಲ್ಲಿ ಶಾಂತಿಗಾಗಿ ಮನವಿ ಮಾಡುವ ಜೊತೆಜೊತೆಗೆ ನಮ್ಮ ಸಾರ್ವಭೌಮತೆ ಹಾಗೂ ಆರ್ಥಿಕ ಹಿತಾಸಕ್ತಿಗಳಿಗೆ ಆದ್ಯತೆ ನೀಡುವ ಮೂಲಕ ಭಾರತದ ಸರಿಯಾದ ಕೆಲಸವನ್ನೇ ಮಾಡಿದೆ’’ ಎಂದು ಮನಮೋಹನ್‌ಸಿಂಗ್ ಅವರು ಇತ್ತೀಚೆಗೆ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದರು.

ಚೀನಾದ ಬಗ್ಗೆ ಅಭಿಪ್ರಾಯಿಸಿದ ರಾಹುಲ್ ಅವರು ಬಲವಂತದ ವಾತಾವರಣದಲ್ಲಿ ಉತ್ಪಾದನಾ ಕ್ಷೇತ್ರದಲ್ಲಿ ಉತ್ಕೃಷ್ಟತೆಯನ್ನು ಸಾಧಿಸುವ ಒಂದು ನಿರ್ದಿಷ್ಟ ದೃಷ್ಟಿಕೋನವನ್ನು ಆ ದೇಶವು ಪ್ರತಿಪಾದಿಸುತ್ತದೆ. ಆದರೆ ಜನತೆಗೆ ಆರ್ಥಿಕ ಹಾಗೂ ರಾಜಕೀಯ ಸ್ವಾತಂತ್ರ್ಯವನ್ನು ನೀಡುವ ಮೂಲಕ ಪ್ರಜಾತಾಂತ್ರಿಕ ಸಂರಚನೆಯಲ್ಲಿ ಅಧಿಕ ಉತ್ಪಾದನೆಯನ್ನು ಖಾತರಿಪಡಿಸುವ ಮೂಲಕ ನಾವು ಚೀನಾಗೆ ಸವಾಲೊಡ್ಡಬೇಕಾಗಿದೆ. ಈ ನಿಟ್ಟಿನಲ್ಲಿ ಭಾರತ ಹಾಗೂಯುರೋಪ್ ನಡುವೆ ಸಾಕಷ್ಟು ಸಹಯೋಗವನ್ನು ಏರ್ಪಡಿಸಿಕೊಳ್ಳಲು ಸಾಧ್ಯವಿದೆ’’ ಎಂದು ರಾಹುಲ್‌ಗಾಂಧಿ ತಿಳಿಸಿದರು.

ಬ್ರುಸೆಲ್ಸ್‌ನಲ್ಲಿ ರಾಹುಲ್ ಅವರು ಯುರೋಪ್ ಸಂಸತ್‌ನ ಕೆಲವು ಸದಸ್ಯರ ಜೊತೆ ಆಂತರಿಕ ಮಾತುಕತೆಗಳನ್ನು ನಡೆಸಿದರು.

ತನ್ನ ತ್ರಿರಾಷ್ಟ್ರ ಯುರೋಪ್ ಪ್ರವಾಸದಲ್ಲಿ ವಿವಿಧ ಸಂತ್ ಸದಸ್ಯರು ಹಾಗೂ ಶಾಸನಸಭೆಗಳ ಪ್ರತಿನಿಧಿಗಳನ್ನು ಭೇಟಿಯಾಗಲಿದ್ದಾರೆ. ಬೆಲ್ಜಿಯಂ ಪ್ರವಾಸದ ಬಳಿಕ ರಾಹುಲ್ ಅವರು ಫ್ರಾನ್ಸ್ ಹಾಗೂ ನಾರ್ವೆ ದೇಶಗಳಿಗೆ ಭೇಟಿ ನೀಡಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News