ಭಾರತದಲ್ಲಿ ಅತಿ ಹೆಚ್ಚು ದ್ವೇಷ ಭಾಷಣಗಳಲ್ಲಿ ಬಿಜೆಪಿಯ ಪಾಲೇ ಹೆಚ್ಚು; ವರದಿ
ಹೊಸದಿಲ್ಲಿ : ಸೋಮವಾರ ಬಿಡುಗಡೆಯಾದ ಭಾರತದ ದ್ವೇಶ ಭಾಷಣಗಳ ಕುರಿತ ವರದಿಯ ಪ್ರಕಾರ, ವರ್ಷದ ಮೊದಲಾರ್ಧದಲ್ಲಿ ಮುಸ್ಲಿಮರ ವಿರುದ್ಧದ ಹೆಚ್ಚಿನ ದ್ವೇಷ ಭಾಷಣ ಘಟನೆಗಳ ಹಿಂದೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಪಕ್ಷ ಬಿಜೆಪಿ ಮತ್ತು ಸಂಘಪರಿವಾರದ ಪಾಲು ಹೆಚ್ಚಿದೆ ಎಂದು deccanherald.com ವರದಿ ಮಾಡಿದೆ.
ವಾಷಿಂಗ್ಟನ್ ಮೂಲದ ಸಂಶೋಧನಾ ತಂಡ ಹಿಂದುತ್ವ ವಾಚ್ ಭಾರತದಲ್ಲಿ ಮುಸ್ಲಿಮರು ಮತ್ತು ಇತರ ಅಲ್ಪಸಂಖ್ಯಾತರ ವಿರುದ್ಧ ದ್ವೇಷದ ಅಪರಾಧಗಳು ಮತ್ತು ಪ್ರಚೋದನಾಕಾರಿ ಭಾಷಣಗಳ ಮೇಲೆ ಕಣ್ಣಿಡುತ್ತದೆ. ಹಿಂದುತ್ವ ವಾಚ್ ವರದಿಯ ಪ್ರಕಾರ, 255 ದಾಖಲಿತ ದ್ವೇಷ ಭಾಷಣಗಳಲ್ಲಿ ಶೇಕಡಾ 80 ರಷ್ಟು "ಮುಸ್ಲಿಮರನ್ನು ಗುರಿಯಾಗಿಸಿಕೊಂಡು ನಡೆದ ದ್ವೇಷ ಭಾಷಣದ ಸಭೆಗಳು" ಬಿಜೆಪಿ ಆಡಳಿತವಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಂಭವಿಸಿವೆ ಎಂದು ವರದಿಯಾಗಿದೆ.
2014 ರಲ್ಲಿ ಮೋದಿ ಅಧಿಕಾರಕ್ಕೆ ಬಂದ ನಂತರ ಭಾರತದಲ್ಲಿ ಮುಸ್ಲಿಂ ವಿರೋಧಿ ಭಾಷಣ ಮಾಡುವ ಪ್ರವೃತ್ತಿ ಹೆಚ್ಚಿರುವುದನ್ನು ಸಂಶೋಧಕರು ಗಮನಿಸಿದ್ದಾರೆ. ಈ ವರ್ಷ ದಾಖಲಿತ ಘಟನೆಗಳಲ್ಲಿ ಅರ್ಧಕ್ಕಿಂತ ಹೆಚ್ಚು ಪ್ರಕರಣಗಳು ಆಡಳಿತಾರೂಢ ಬಿಜೆಪಿ ಮತ್ತು ಬಜರಂಗ ದಳ ಸೇರಿದಂತೆ ಸಂಘಪರಿವಾರದಿಂದಲೇ ನಡೆದಿರುವುದನ್ನು ವರದಿಯು ಕಂಡುಹಿಡಿದಿದೆ. ವಿಶ್ವ ಹಿಂದೂ ಪರಿಷತ್ ಮತ್ತು ಸಂಘಪರಿವಾರದ ಗುಂಪುಗಳು ಬಿಜೆಪಿಯ ಸೈದ್ಧಾಂತಿಕ ಪೋಷಕರಾದ ಆರೆಸ್ಸೆಸ್ ನೊಂದಿಗೆ ಸಂಬಂಧ ಹೊಂದಿವೆ.
ನವದೆಹಲಿಯ ಬಿಜೆಪಿಯ ಹಿರಿಯ ಸದಸ್ಯ ಅಭಯ್ ವರ್ಮಾ ಅವರು ಸಂದರ್ಶನವೊಂದರಲ್ಲಿ ವರದಿಯನ್ನು "ಸಂಪೂರ್ಣವಾಗಿ ಆಧಾರರಹಿತ" ಎಂದು ಕರೆದಿದ್ದಾರೆ. "ನಾವು ದೇಶ ಮತ್ತು ಜನರನ್ನು ಅವರ ಧರ್ಮಗಳ ಆಧಾರದ ಮೇಲೆ ವಿಭಜಿಸುವುದಿಲ್ಲ" ಎಂದು ಅವರು ಹೇಳಿದ್ದಾರೆ. ದ್ವೇಷ ಭಾಷಣಕ್ಕೆ ಬಿಜೆಪಿಯ ಬೆಂಬಲವಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.
2017 ರಲ್ಲಿ ಭಾರತದ ಕ್ರೈಮ್ ಬ್ಯೂರೋ ದ್ವೇಷದ ಅಪರಾಧಗಳ ಅಂಕಿ ಅಂಶ ಸಂಗ್ರಹಿಸುವುದನ್ನು ನಿಲ್ಲಿಸಿದ ನಂತರ ಮುಸ್ಲಿಮರ ವಿರುದ್ಧ ದ್ವೇಷ ಭಾಷಣವನ್ನು ದಾಖಲಿಸಿದ ವರದಿಯಲ್ಲಿ ಇದು ಮೊದಲನೆಯದು. ಹಿಂದುತ್ವ ವಾಚ್ ಮಾಹಿತಿ ಸಂಗ್ರಹಿಸುವಲ್ಲಿ ಸಾಮಾಜಿಕ ಮಾಧ್ಯಮ ಮತ್ತು ಸುದ್ದಿವಾಹಿನಿಗಳನ್ನು ಅವಲಂಬಿಸಿದೆ. ದ್ವೇಷ ಭಾಷಣದ ಘಟನೆಗಳ ವೀಡಿಯೊಗಳನ್ನು ಪತ್ತೆಹಚ್ಚಲು, ನೈಜತೆ ಪರಿಶೀಲಿಸಲು ಡೇಟಾ ಸ್ಕ್ರ್ಯಾಪಿಂಗ್ ತಂತ್ರಗಳನ್ನು ಬಳಸಿದೆ. ಬಳಿಕ ಪತ್ರಕರ್ತರು ಮತ್ತು ಸಂಶೋಧಕರ ಮೂಲಕ ಘಟನೆಗಳ ಆಳವಾದ ತನಿಖೆಯನ್ನು ನಡೆಸಿದೆ.
ಮಹಾರಾಷ್ಟ್ರ, ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಗುಜರಾತ್‌ನಲ್ಲಿ ಚುನಾವಣಾ ಸಂದರ್ಭ ಹೆಚ್ಚಿನ ದ್ವೇಷ ಭಾಷಣಗಳು ನಡೆದಿವೆ. ಚುನಾವಣಾ ನೆಪದಲ್ಲಿ ಆಯೋಜಿಸಿದ್ದ ಸಭೆಗಳಲ್ಲಿ ಮೂರನೇ ಒಂದು ಭಾಗ ದ್ವೇಷ ಸಭೆಗಳೇ ತುಂಬಿತ್ತು ಎನ್ನುವುದನ್ನು ಸಂಶೋಧನಾ ತಂಡ ಪತ್ತೆ ಹಚ್ಚಿದೆ.
ಹಿಂದುತ್ವ ವಾಚ್ 15 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಚಟುವಟಿಕೆಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ಈ ವರದಿ ತಯಾರಿಸಿದೆ. ಸುಮಾರು 64% ಘಟನೆಗಳು ಮುಸ್ಲಿಂ ವಿರೋಧಿ "ಪಿತೂರಿ ಸಿದ್ಧಾಂತಗಳನ್ನು" ಪ್ರಚಾರ ಮಾಡಿದೆ ಎಂದು ವರದಿ ಮಾಡಿದೆ. ಮುಸ್ಲಿಮರು ಹಿಂದೂ ಮಹಿಳೆಯರನ್ನು ಮತಾಂತರಿಸಲು ಮದುವೆಗೆ ಆಮಿಷ ಒಡ್ಡುತ್ತಿದ್ದಾರೆ ಎಂಬ ಹೇಳಿಕೆಯೂ ಸೇರಿದೆ. ಲವ್ ಜಿಹಾದ್ ಪದ ಹೆಚ್ಚಾಗಿಯೇ ಬಳಕೆಯಾಗಿದೆ.
33% ಘಟನೆಗಳಲ್ಲಿ ಮುಸ್ಲಿಮರ ವಿರುದ್ಧ ಹಿಂಸಾಚಾರಕ್ಕೆ ಕರೆ ನೀಡಿದೆ. 11% ಭಾಷಣಗಳಲ್ಲಿ ಹಿಂದೂಗಳು ಮುಸ್ಲಿಮರನ್ನು ಬಹಿಷ್ಕರಿಸಲು ಕರೆ ಕೊಟ್ಟಿದೆ. ಉಳಿದೆಡೆ ಮುಸ್ಲಿಂ ಮಹಿಳೆಯರನ್ನು ಗುರಿಯಾಗಿಸಿಕೊಂಡು "ದ್ವೇಷ ಕಾರಿದ ಮತ್ತು ಕೀಳಭಿರುಚಿಯ ಲೈಂಗಿಕತೆಯ ಭಾಷಣ" ಒಳಗೊಂಡಿತ್ತು ಎಂದು ವರದಿ ತಿಳಿಸಿದೆ.
"ದ್ವೇಷದ ಭಾಷಣವನ್ನು ನಿಯಂತ್ರಿಸುವ ಬದಲು, ಕಾರ್ಯಾಂಗದಲ್ಲಿರುವ ಸರ್ಕಾರಿ ಅಧಿಕಾರಿಗಳು ತಮ್ಮನ್ನು ತಾವೇ ಅದರಲ್ಲಿ ತೊಡಗಿಸಿಕೊಂಡಿದ್ದಾರೆ" ಎಂದು ವರದಿ ಹೇಳಿದೆ. ಕೆಲವು ಮುಖ್ಯಮಂತ್ರಿಗಳು, ಶಾಸಕರು ಮತ್ತು ಆಡಳಿತಾರೂಢ ಬಿಜೆಪಿಯ ಹಿರಿಯ ನಾಯಕರು ದ್ವೇಷ ಕಾರುವಲ್ಲಿ ತಮ್ಮ ಕೊಡುಗೆ ನೀಡಿದ್ದಾರೆ ಎಂದು ವರದಿ ಒತ್ತಿ ಹೇಳಿದೆ.