ಬಿಜೆಪಿ ನೇತೃತ್ವದ NDA ಮೈತ್ರಿಕೂಟ 150ರ ಗಡಿ ದಾಟುವುದಿಲ್ಲ: ರಾಹುಲ್ ಗಾಂಧಿ
ಘಾಝಿಯಾಬಾದ್: ಮೊದಲ ಹಂತದ ಲೋಕಸಭಾ ಚುನಾವಣಾ ಪ್ರಚಾರ ಬುಧವಾರ ಅಂತ್ಯಗೊಳ್ಳುತ್ತಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ NDA ಮೈತ್ರಿಕೂಟ ಬಿಜೆಪಿ 150 ಸೀಟುಗಳ ಗಡಿ ದಾಟುವುದಿಲ್ಲ ಎಂದು ಭವಿಷ್ಯ ನುಡಿದರು.
“ನಾನು ಸೀಟುಗಳ ಸಂಖ್ಯೆಯನ್ನು ಅಂದಾಜಿಸಲು ಹೋಗುವುದಿಲ್ಲ. 15-20 ದಿನಗಳ ಹಿಂದೆ ಬಿಜೆಪಿ 180 ಸೀಟುಗಳನ್ನು ಜಯಿಸಬಹುದು ಎಂದು ಯೋಚಿಸುತ್ತಿದ್ದೆ. ಆದರೆ, ಈಗ ಅವರು 150 ಸೀಟುಗಳನ್ನು ಮಾತ್ರ ಗೆಲ್ಲಲಿದ್ದಾರೆ. ನಾವು ಸುಧಾರಿಸುತ್ತಿದ್ದೇವೆ ಎಂಬ ವರದಿ ನಮಗೆ ಎಲ್ಲ ರಾಜ್ಯಗಳಿಂದಲೂ ಬರುತ್ತಿದೆ. ಉತ್ತರ ಪ್ರದೇಶದಲ್ಲಿ ನಮ್ಮ ಬಲಿಷ್ಠ ಮೈತ್ರಿಕೂಟವಿದ್ದು, ನಾವು ಅತ್ಯುತ್ತಮ ಪ್ರದರ್ಶನ ತೋರಲಿದ್ದೇವೆ” ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ನೀವು ಅಮೇಥಿ ಅಥವಾ ರಾಯ್ ಬರೇಲಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದೀರಾ ಎಂಬ ಪ್ರಶ್ನೆಗೆ, “ಇದು ಬಿಜೆಪಿಯ ಪ್ರಶ್ನೆ. ಒಳ್ಳೆಯದು. ನನಗೆ ಏನು ಆದೇಶ ಬರುತ್ತದೊ ಅದನ್ನು ಪಾಲಿಸುತ್ತೇನೆ. ನಮ್ಮ ಪಕ್ಷದಲ್ಲಿ ಅಭ್ಯರ್ಥಿಗಳ ಆಯ್ಕೆ ನಿರ್ಧಾರವನ್ನು ಕೇಂದ್ರ ಚುನಾವಣಾ ಸಮಿತಿ ತೆಗೆದುಕೊಳ್ಳುತ್ತದೆ” ಎಂದು ಅವರು ಉತ್ತರಿಸಿದರು.
ರಾಹುಲ್ ಗಾಂಧಿ ಧಾಟಿಯನ್ನೇ ಅನುಸರಿಸಿದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, “ನಾವಿಂದು ಘಾಝಿಯಾಬಾದ್ ನಲ್ಲಿದ್ದು, ಈ ಬಾರಿ ಘಾಝಿಯಾಬಾದ್ ನಿಂದ ಘಾಝಿಪುರ್ ವರೆಗೂ ಇಂಡಿಯಾ ಮೈತ್ರಿಕೂಟವು ಬಿಜೆಪಿಯನ್ನು ಅಳಿಸಿ ಹಾಕಲಿದೆ. ಬಿಜೆಪಿಯ ಭರವಸೆಗಳೆಲ್ಲ ನಕಲಿಯಾಗಿ ಬದಲಾಗಿರುವುದರಿಂದ ಇಂದು ರೈತರು ಅವರ ಬಗ್ಗೆ ಅಸಮಾಧಾನಗೊಂಡಿದ್ದಾರೆ” ಎಂದು ಹೇಳಿದರು.
“ಚುನಾವಣಾ ಬಾಂಡ್ ಅವರ ತಮಟೆ ಬಾರಿಸಿದೆ. ಬಿಜೆಪಿ ಎಲ್ಲ ಭ್ರಷ್ಟಾಚಾರಿಗಳ ಗೋದಾಮಾಗಿ ಬದಲಾಗಿ ಬಿಟ್ಟಿದೆ” ಎಂದೂ ಅವರು ವ್ಯಂಗ್ಯವಾಡಿದರು.