ಮತದಾನಕ್ಕೂ ಮುನ್ನ ಪೊಲೀಸರಿಗೆ ಲಂಚ ನೀಡಲು ಪ್ರಯತ್ನಿಸುತ್ತಿದ್ದ ಬಿಜೆಪಿ ಕಾರ್ಯಕರ್ತ!
ಹೊಸದಿಲ್ಲಿ: ಮೇ 7ರಂದು ಉತ್ತರ ಪ್ರದೇಶದ ಸಂಭಾಲ್ ಲೋಕಸಭಾ ಕ್ಷೇತ್ರದಲ್ಲಿ ಮತದಾನ ನಡೆಯುವುದಕ್ಕೂ ಮುನ್ನ, ಬಿಜೆಪಿ ಕಾರ್ಯಕರ್ತ ಭುವನೇಶ್ ಕುಮಾರ್ ವಾರ್ಷ್ಣೆ ಎಂಬಾತ ಪೊಲೀಸರಿಗೆ ಹಾಗೂ ಚುನಾವಣಾಧಿಕಾರಿಗಳಿಗೆ ಲಂಚ ನೀಡಲು ಪ್ರಯತ್ನಿಸುತ್ತಿರುವ ವೀಡಿಯೊವೊಂದನ್ನು ಆಸ್ಟ್ರೇಲಿಯಾ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ ಬಿಡುಗಡೆ ಮಾಡಿದೆ. ಇದರೊಂದಿಗೆ ಈ ವೀಡಿಯೊದ ನೈಜತೆಯನ್ನು ನಾವು ಸ್ವತಂತ್ರವಾಗಿ ಪರಿಶೀಲಿಸಿದ್ದೇವೆ ಎಂದೂ ಆ ಸುದ್ದಿ ವಾಹಿನಿ ಹೇಳಿಕೊಂಡಿದೆ.
ಎಬಿಸಿ ನ್ಯೂಸ್ ಸುದ್ದಿ ವಾಹಿನಿಯ ದಕ್ಷಿಣ ಏಶಿಯಾ ಬ್ಯೂರೊ ಮುಖ್ಯಸ್ಥೆ ಹಾಗೂ ಬಾತ್ಮೀದಾರೆ ಮೇಘನಾ ಬಾಲಿ ಅವರು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ವೀಡಿಯೊ ದೃಶ್ಯಾವಳಿಯಲ್ಲಿ, ಚುನಾವಣಾ ಪ್ರಕ್ರಿಯೆಯನ್ನು ತಿರುಚಲು ಏನೆಲ್ಲ ಮಾಡಬೇಕು ಎಂಬ ಯೋಜನೆಯನ್ನು ವಾರ್ಷ್ಣೆ ಹಂಚಿಕೊಳ್ಳುತ್ತಿರುವುದು ಸೆರೆಯಾಗಿದೆ. ಈ ವೀಡಿಯೊ ದೃಶ್ಯಾವಳಿಗೆ, "ಎಬಿಸಿಯು ಭುವನೇಶ್ ಕುಮಾರ್ ವಾರ್ಷ್ಣೆ ಎಂಬಾತ ಮೇ 7ರಂದು ಉತ್ತರ ಪ್ರದೇಶದ ಸಂಭಾಲ್ ಲೋಕಸಭಾ ಕ್ಷೇತ್ರದಲ್ಲಿ ಪೊಲೀಸರಿಗೆ ಹಾಗೂ ಚುನಾವಣಾಧಿಕಾರಿಗಳಿಗೆ ಲಂಚ ನೀಡಲು ಯೋಜನೆ ರೂಪಿಸುತ್ತಿರುವ ವೀಡಿಯೊವೊಂದು ಲಭ್ಯವಾಗಿದ್ದು, ಅದನ್ನು ಪರಿಶೀಲಿಸಿದ್ದೇವೆ. ಈ ಶೀರ್ಷಿಕೆಯ ಕೆಳಗಿರುವ ಸಂಪೂರ್ಣ ವೀಡಿಯೊವನ್ನು ವೀಕ್ಷಿಸಿ" ಎಂಬ ಶೀರ್ಷಿಕೆ ನೀಡಲಾಗಿದೆ.
ಆ ವೀಡಿಯೊದಲ್ಲಿ, ಹಿಂಸಾಚಾರಕ್ಕೆ ತೊಡಗದೇ ಹೇಗೆ ಮತಗಟ್ಟೆಗಳಲ್ಲಿ ಗೊಂದಲ ಸೃಷ್ಟಿಸಬಹುದು ಎಂದು ವಾರ್ಷ್ಞೆ ಸೂಚನೆ ನೀಡುತ್ತಿರುವುದನ್ನು ಕೇಳಬಹುದಾಗಿದೆ.
The ABC has obtained and verified a video showing a BJP worker named Bhuvnesh Kumar Varshney plotting to bribe police and polling officials in UP's Sambhal constituency before the May 7 poll. Watch the full video below with captions. pic.twitter.com/TWeihzlEDL
— Meghna Bali (@meghnabali) May 24, 2024
ಎಬಿಸಿ ವರದಿಯ ಪ್ರಕಾರ, ಮೇ 7ರ ಚುನಾವಣೆಗೂ ಕೆಲ ದಿನಗಳ ಮುನ್ನವೇ ಉತ್ತರ ಪ್ರದೇಶ ಪೊಲೀಸರು ಶಾಂತಿ ಭಂಗ ತಡೆಯುವ ಉದ್ದೇಶ ಹೊಂದಿರುವ ಕಾನೂನಿನ ಸೆಕ್ಷನ್ ಅಡಿ ವಾರ್ಷ್ಣೆಯನ್ನು ಬಂಧಿಸಿದ್ದರು ಎಂದು ಹೇಳಲಾಗಿದೆ.