ಮಗನಿಗೆ ಟಿಕೆಟ್ ಕೊಟ್ಟರೂ ಬಿಜೆಪಿಗೆ ಗೆಲ್ಲಲು ಬ್ರಿಜ್ ಭೂಷಣ್ ಅನಿವಾರ್ಯ!

Update: 2024-05-13 15:17 GMT

ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್ | PC : PTI

ಹೊಸದಿಲ್ಲಿ : ಮಹಿಳಾ ಕುಸ್ತಿಪಟುಗಳು ಸಲ್ಲಿಸಿರುವ ದೂರುಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ದಿಲ್ಲಿಯ ನ್ಯಾಯಾಲಯವು ಮೇ 10 ರಂದು ಬಿಜೆಪಿ ಸಂಸದ ಹಾಗೂ ಭಾರತೀಯ ಕುಸ್ತಿ ಒಕ್ಕೂಟ (ಡಬ್ಲ್ಯುಎಫ್ಐ)ದ ಮಾಜಿ ಅಧ್ಯಕ್ಷ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ, ಕ್ರಿಮಿನಲ್ ಬೆದರಿಕೆ ಮತ್ತು ಮಹಿಳೆಯ ಘನತೆಗೆ ಹಾನಿಯನ್ನುಂಟು ಮಾಡಲು ಹಲ್ಲೆ ಆರೋಪಗಳನ್ನು ರೂಪಿಸುವಂತೆ ಆದೇಶಿಸಿದೆ. ಆರು ಮಹಿಳಾ ಕುಸ್ತಿಪಟುಗಳಲ್ಲಿ ಓರ್ವರು ಸಲ್ಲಿಸಿದ ದೂರಿನಲ್ಲಿ ಅವರನ್ನು ಖುಲಾಸೆಗೊಳಿಸಲಾಗಿದೆ. ನ್ಯಾಯಾಲಯದ ಕ್ರಮವನ್ನು ಮಹಿಳಾ ಕುಸ್ತಿಪಟುಗಳು ತಮ್ಮ ಹೋರಾಟದಲ್ಲಿ ಸಣ್ಣ ಗೆಲುವು ಎಂದು ಬಣ್ಣಿಸಿದ್ದಾರೆ.

ಸದ್ಯಕ್ಕೆ ಕಳಂಕಿತ ಸಂಸದ ಬ್ರಿಜ್ ಭೂಷಣ್ ರನ್ನು ವೇದಿಕೆಯಲ್ಲಿ ಬಹಿರಂಗವಾಗಿ ಒಪ್ಪಿಕೊಳ್ಳಲು ಬಿಜೆಪಿ ಹಿಂದೇಟು ಹಾಕುತ್ತಿದ್ದರೂ ಆಂತರಿಕ ಶಾಂತಿಯ ಛಾಯೆ ಕಂಡು ಬರುತ್ತಿದೆ. ಬಿಜೆಪಿ ಮತ್ತು ಬ್ರಿಜ್‌ ಭೂಷಣ್‌ ಈಗ ಹಿಂದೆಂದಿಗಿಂತಲೂ ಹೆಚ್ಚು ಪರಸ್ಪರರಿಗೆ ಅಗತ್ಯವಾಗಿದ್ದಾರೆ.

ನನ್ನ ವಿನಾಶದ ಕಥೆಯನ್ನು ಬರೆಯಲು ಬಯಸುವವರಿಗೆ ದೊಡ್ಡ ಹೊಡೆತವನ್ನು ನೀಡಬೇಕಾಗಿದೆ. ಅದಕ್ಕಾಗಿ ಮೇ 20ರಂದು ವಿದ್ಯುನ್ಮಾನ ಮತದಾನ ಯಂತ್ರದ ಗುಂಡಿಯನ್ನು ಕೋಪದಿಂದ ಬಲವಾಗಿ ಒತ್ತಿ ಮತ್ತು ನನ್ನ ಮಗ ಕರಣ್‌ ಭೂಷಣ್‌ ಸಿಂಗ್ ರನ್ನು ಐದು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ ಎಂದು ಬ್ರಿಜ್‌ ಭೂಷಣ್‌ ಸಿಂಗ್ ಇತ್ತೀಚಿಗೆ ಕೈಸರಗಂಜ್ ಲೋಕಸಭಾ ಕ್ಷೇತ್ರದಲ್ಲಿ ಬಹಿರಂಗ ಸಭೆಯಲ್ಲಿ ಮತದಾರರಿಗೆ ಭಾವನಾತ್ಮಕವಾಗಿ ಮನವಿ ಮಾಡಿಕೊಂಡಿದ್ದಾರೆ.

ಮಹಿಳಾ ಕುಸ್ತಿಪಟುಗಳು ಮಾಡಿರುವ ಲೈಂಗಿಕ ಕಿರುಕುಳದ ಆರೋಪಗಳು ವಿವಾದಾತ್ಮಕ, ಆರು ಬಾರಿಯ ಸಂಸದ ಬ್ರಿಜ್‌ ಭೂಷಣ್‌ ರನ್ನು 2024ರ ಸಾರ್ವತ್ರಿಕ ಚುನಾವಣಾ ಕಣದಿಂದ ಹೊರಕ್ಕೆ ದಬ್ಬಿರಬಹುದು. ಆದರೆ ಇದರಿಂದ ವಿಚಲಿತರಾಗದ ಅವರು ತನ್ನ ಮಗನಿಗಾಗಿ ವ್ಯಾಪಕ ಪ್ರಚಾರ ನಡೆಸುತ್ತಿದ್ದಾರೆ. ಬ್ರಿಜ್‌ ಭೂಷಣ್‌ ಉಪಸ್ಥಿತಿಯು ಎಷ್ಟು ವ್ಯಾಪಕವಾಗಿದೆಯೆಂದರೆ ಅವರು ವೇದಿಕೆಯಲ್ಲಿ ಇಲ್ಲದಿದ್ದರೂ (ರಾಜಕೀಯ ಹಾನಿಯನ್ನು ತಡೆಯಲು ಬ್ರಿಜ್‌ ಭೂಷಣ್‌ ರನ್ನು ಉದ್ದೇಶಪೂರ್ವಕವಾಗಿ ದೂರವಿಡಲಾಗಿದೆ) ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೆ ಮೇ 12ರಂದು ಕೈಸರಗಂಜ್ ಲೋಕಸಭಾ ಕ್ಷೇತ್ರದ ಬಹರೈಚ್ನ ಪಯಾಗಪುರದಲ್ಲಿ ಕರಣ್‌ ಭೂಷಣ್‌ ಪರವಾಗಿ ಪ್ರಚಾರ ಮಾಡುತ್ತಿದ್ದಾಗ ಈ ಕಳಂಕಿತ ಸಂಸದರನ್ನು ತಪ್ಪಿಸಲು ಸಾಧ್ಯವಾಗಲಿಲ್ಲ. ಅವರು ತನ್ನ ಭಾಷಣದಲ್ಲಿ ಒಮ್ಮೆಯೂ ಬ್ರಿಜ್‌ ಭೂಷಣ್‌ ಹೆಸರನ್ನು ಉಲ್ಲೇಖಿಸದಿದ್ದರೂ ಕರಣ್‌ ಭೂಷಣ್‌ರನ್ನು ‘ಖಾನ್ದಾನಿ (ಆನುವಂಶಿಕ) ರಾಮಭಕ್ತ’ ಮತ್ತು ʼಪರಮ ರಾಮಭಕ್ತ’ ಎಂದು ಬಣ್ಣಿಸುವ ಮೂಲಕ ರಾಮ ಜನ್ಮಭೂಮಿ ಆಂದೋಲನದೊಂದಿಗೆ ಅವರ ತಂದೆಯ ಸಂಪರ್ಕವನ್ನು ಸೂಚಿಸಿದರು. ಇಲ್ಲಿಯ ಸಂಸದರು ಬಡ ಕುಟುಂಬಗಳಿಗೆ ತಲಾ ಒಂದು ಎಮ್ಮೆಯನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಹೇಳಿದರು. ವೇದಿಕೆಯಲ್ಲಿ ಅವರ ಹಿಂದಿದ್ದ ಬ್ಯಾನರ್ ನಲ್ಲಿ ಬ್ರಿಜ್ ಭೂಷಭಣ್ ಕಟೌಟ್ ರಾರಾಜಿಸುತ್ತಿತ್ತು. ತನ್ನ ಭಾಷಣದುದ್ದಕ್ಕೂ ಆದಿತ್ಯನಾಥ ಬ್ರಿಜ್‌ ಭೂಷಣ್‌ ಹೆಸರನ್ನೆತ್ತದೆ ಅವರ ಸಾಧನೆಗಳನ್ನು ಪಟ್ಟಿ ಮಾಡಿದರು.

ಅದೇ ದಿನ ಕೈಸರಗಂಜ್ ಲೋಕಸಭಾ ಕ್ಷೇತ್ರದ ಕರ್ನಲ್ ಗಂಜ್ ನಲ್ಲಿ ಬಹಿರಂಗ ಸಭೆಯಲ್ಲಿ ಮಾತನಾಡಿದ ಬ್ರಿಜ್‌ ಭೂಷಣ್‌ ತನ್ನ ಭಾಷಣದುದ್ದಕ್ಕೂ ಮಹಿಳಾ ಕುಸ್ತಿಪಟುಗಳು ತನ್ನ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳನ್ನು ಹೊರಿಸಿರುವುದು ತನ್ನ ರಾಜಕೀಯ ಜೀವನವನ್ನು ಅಂತ್ಯಗೊಳಿಸಲು ನಡೆಸಿರುವ ಪಿತೂರಿಯಾಗಿದೆ ಎಂದು ಬಿಂಬಿಸಲು ಪ್ರಯತ್ನಿಸಿದ್ದರು.

ಬಿಜೆಪಿಗೆ ಬ್ರಿಜ್‌ ಭೂಷಣ್‌ ರ ಹಿಡಿತವಿರುವ ಪ್ರದೇಶಗಳಲ್ಲಿ ಗೆಲುವು ಸಾಧಿಸಲು ಅವರ ಅಗತ್ಯವಿದೆ. ಅದು ವೇದಿಕೆಯಲ್ಲಿ ಬಹಿರಂಗವಾಗಿ ಈ ಕಳಂಕಿತ ಸಂಸದರನ್ನು ಒಪ್ಪಿಕೊಳ್ಳದಿದ್ದರೂ ಆಂತರಿಕವಾಗಿ ಅದರ ನಡೆ ಬೇರೆಯೇ ಆಗಿದೆ ಎನ್ನುವುದಕ್ಕೆ ಆದಿತ್ಯನಾಥ ಅವರಂತಹ ಪ್ರಭಾವಿ ನಾಯಕರೂ ಬ್ರಿಜ್‌ ಭೂಷಣ್‌ ಹೆಸರನ್ನು ಉಲ್ಲೇಖಿಸದಿದ್ದರೂ ಅವರ ಸಾಧನೆಗಳ ಬಗ್ಗೆ ಹೇಳಿಕೊಳ್ಳುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಬ್ರಿಜ್‌ ಭೂಷಣ್‌ ಕೂಡ ತನಗೆ ಟಿಕೆಟ್ ನೀಡದಿದ್ದಕ್ಕೆ ಬಿಜೆಪಿ ವಿರುದ್ಧ ಕೋಪಗೊಳ್ಳಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಪಕ್ಷವು ಅವರ ಪುತ್ರನಿಗೆ ಟಿಕೆಟ್ ನೀಡಿದೆ ಮತ್ತು ಮಗನ ಗೆಲುವಿಗಾಗಿ ಹಾಗೂ ತನ್ನ ವಿರುದ್ಧದ ಪ್ರಕರಣದಿಂದ ಪಾರಾಗಲು ಬ್ರಿಜ್‌ ಭೂಷಣ್‌ ಗೂ ಬಿಜೆಪಿ ಅಗತ್ಯವಾಗಿದೆ.

ಸೌಜನ್ಯ : thewire.in

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News