ಬ್ರಿಜ್ ಭೂಷಣ್ ತಪ್ಪಿತಸ್ಥ ಎಂದು ಸಾಬೀತಾಗಿಲ್ಲ, ಅವರ ಪುತ್ರನಿಗೆ ಲೋಕಸಭಾ ಟಿಕೆಟ್ ನೀಡಿದ್ದನ್ನು ಪ್ರಶ್ನಿಸುವಂತಿಲ್ಲ: ನಿರ್ಮಲಾ ಸೀತಾರಾಮನ್
ಹೊಸದಿಲ್ಲಿ: ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಬಿಜೆಪಿ ಸಂಸದ ಬ್ರಿಜ್‍ಭೂಷಣ್ ಕರಣ್ ಸಿಂಗ್ ಅವರ ಪುತ್ರ ಕರಣ್ ಸಿಂಗ್ ಅವರಿಗೆ ಕೇಸರ್‍ಗಂಜ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡಿರುವ ಪಕ್ಷದ ಕ್ರಮವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಮರ್ಥಿಸಿಕೊಂಡಿದ್ದಾರೆ.
"ಎಷ್ಟು ಮಂದಿಯ ತಂದೆ, ತಾಯಿ ಅಥವಾ ಸಂಬಂಧಿಕರು ಗಂಭೀರ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳಾಗಿಲ್ಲ? ಆದರೂ ಅವರು ಟಿಕೆಟ್ ಪಡೆದಿಲ್ಲವೇ? ಎಲ್ಲ ಪಕ್ಷಗಳೂ ಇದನ್ನು ಮಾಡುತ್ತವೆ. ಶಿಕ್ಷೆಗೆ ಗುರಿಯಾಗಿರುವವರ ಮಕ್ಕಳು ಟಿಕೆಟ್ ಪಡೆದಿದ್ದಾರೆ. ಆದರೆ ಬ್ರಿಜ್‍ಭೂಷಣ್ ವಿರುದ್ಧ ಯಾವ ಆರೋಪವೂ ಸಾಬೀತಾಗಿಲ್ಲ. ಆಗಿದ್ದರೆ, ಏಕೆ ಟಿಕೆಟ್ ನೀಡಿದ್ದೀರಿ ಎಂದು ನೀವು ನಮ್ಮನ್ನು ಕೇಳಬಹುದಿತ್ತು. ನಾವೇ ಸ್ವತಃ ಅವರನ್ನು ದೋಷಿ ಎಂದು ಹೇಗೆ ನಿರ್ಣಯಿಸುವುದು? ಎಂದು ಅವರು ಪುಣೆಯಲ್ಲಿ ಶನಿವಾರ ಪ್ರಶ್ನಿಸಿದರು.
ಕರಣ್ ಸಿಂಗ್ ಅವರನ್ನು ಕಣಕ್ಕೆ ಇಳಿಸಿದ ಬಿಜೆಪಿ ಕ್ರಮವನ್ನು ಒಲಿಂಪಿಕ್ ಪದಕ ವಿಜೇತೆ ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪೂನಿಯಾ ಕಟುವಾಗಿ ಟೀಕಿಸಿದ್ದರು. ವಿನೇಶ್ ಪೊಗಟ್ ಅವರ ಜತೆಗೆ ಈ ಇಬ್ಬರು ಬ್ರಿಜ್‍ಭೂಷಣ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು.
ಬ್ರಿಜ್‍ಭೂಷಣ್ ಅವರ ಹಿರಿಯ ಮಗ ಪ್ರತೀಕ್ ಭೂಷಣ್ ಸಿಂಗ್ ಉತ್ತರ ಪ್ರದೇಶ ಶಾಸಕ. ಬ್ರಿಜ್‍ಭೂಷಣ್ ವಿರುದ್ಧ 15 ಲೈಂಗಿಕ ಕಿರುಕುಳ ಆರೋಪಗಳಿವೆ.