"ಚುನಾವಣಾ ಬಾಂಡ್ ರದ್ದತಿ ಪ್ರಜಾಪ್ರಭುತ್ವಕ್ಕೆ ದೊಡ್ಡ ವರದಾನ": ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್‌ವೈ ಖುರೈಶಿ

Update: 2024-02-15 13:08 GMT

Photo: twitter.com/DrSYQuraishi

ಹೊಸದಿಲ್ಲಿ: ಚುನಾವಣಾ ಬಾಂಡ್ಗಳ ಯೋಜನೆಯನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ತೀರ್ಪು "ಪ್ರಜಾಪ್ರಭುತ್ವಕ್ಕೆ ಒಂದು ದೊಡ್ಡ ವರವಾಗಿದೆ" ಎಂದು ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್‌ವೈ ಖುರೈಶಿ ಗುರುವಾರ ಹೇಳಿದ್ದಾರೆ.

ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಉನ್ನತ ನ್ಯಾಯಾಲಯದ ಪೀಠ, ಚುನಾವಣಾ ಬಾಂಡ್ ಯೋಜನೆಯು ಮಾಹಿತಿ ಹಕ್ಕು ಮತ್ತು ಸಂವಿಧಾನದ ಅಡಿಯಲ್ಲಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ ಎಂದು ಹೇಳಿದೆ. ರಾಜಕೀಯ ನಿಧಿಗಾಗಿ ಆರು ವರ್ಷಗಳ ಹಿಂದಿನ ಯೋಜನೆಗೆ ಕೊಡುಗೆ ನೀಡಿದವರ ಹೆಸರನ್ನು ಚುನಾವಣಾ ಆಯೋಗಕ್ಕೆ ಬಹಿರಂಗಪಡಿಸುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಆದೇಶಿಸಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

"ಇದು ಪ್ರಜಾಪ್ರಭುತ್ವದ ಮೇಲಿನ ಜನರ ನಂಬಿಕೆಯನ್ನು ಮರುಸ್ಥಾಪಿಸುತ್ತದೆ. ಇದೊಂದು ಬಹುದೊಡ್ಡ ಬೆಳವಣಿಗೆ. ಕಳೆದ ಐದು-ಏಳು ವರ್ಷಗಳಲ್ಲಿ ಸುಪ್ರೀಂ ಕೋರ್ಟ್ನಿಂದ ದೊರೆತ ಅತ್ಯಂತ ಐತಿಹಾಸಿಕ ತೀರ್ಪು. ಇದು ಪ್ರಜಾಪ್ರಭುತ್ವಕ್ಕೆ ದೊಡ್ಡ ವರವಾಗಿದೆ" ಎಂದು ಖುರೈಶಿ ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

"ಚುನಾವಣಾ ಬಾಂಡ್ ವಿಚಾರದಲ್ಲಿ ನಾವೆಲ್ಲರೂ ಕಳೆದ ಹಲವು ವರ್ಷಗಳಿಂದ ಚಿಂತಿತರಾಗಿದ್ದೆವು. ಪ್ರಜಾಪ್ರಭುತ್ವವನ್ನು ಪ್ರೀತಿಸುವ ಪ್ರತಿಯೊಬ್ಬರೂ ಅದರ ಬಗ್ಗೆ ಪ್ರತಿಭಟಿಸುತ್ತಿದ್ದರು. ನಾನೇ ಹಲವಾರು ಲೇಖನಗಳನ್ನು ಬರೆದಿದ್ದೇನೆ, ಅನೇಕ ಬಾರಿ ಮಾಧ್ಯಮಗಳೊಂದಿಗೆ ಮಾತನಾಡಿದ್ದೇನೆ ಮತ್ತು ನಾವು ಎತ್ತಿದ ಪ್ರತಿಯೊಂದು ಸಮಸ್ಯೆಯನ್ನು ತೀರ್ಪಿನಲ್ಲಿ ಪರಿಹರಿಸಲಾಗಿದೆ" ಎಂದು ಅವರು ಹೇಳಿದರು.

ಈ ಕುರಿತು ಅವರು ಸಾಮಾಜಿಕ ಜಾಲತಾಣ x ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ತೀರ್ಪಿಗಾಗಿ ಸುಪ್ರೀಂ ಕೋರ್ಟ್ ಅನ್ನು ಶ್ಲಾಘಿಸಿದ್ದಾರೆ. "ಸುಪ್ರೀಂ ಕೋರ್ಟ್ನಿಂದ ಚುನಾವಣಾ ಬಾಂಡ್ಗಳು ಅಸಂವಿಧಾನಿಕವೆಂದು ಘೋಷಿಸಲಾಗಿದೆ. ಎಸ್ಸಿಗೆ ಚೀರ್ಸ್!" ಎಂದು ಪೋಸ್ಟ್ ಮಾಡಿದ್ದಾರೆ.

2018ರಲ್ಲಿ ಕೇಂದ್ರ ಸರಕಾರದ ಅಧಿಸೂಚನೆಯಂತೆ ಚುನಾವಣಾ ಬಾಂಡ್ ಯೋಜನೆ ಜಾರಿಗೆ ಬಂದಿತ್ತು.

"ಕಳೆದ ಎರಡು-ಮೂರು ವರ್ಷಗಳಲ್ಲಿ ಸ್ವೀಕರಿಸಿದ ಎಲ್ಲಾ ದೇಣಿಗೆಗಳನ್ನು ಮರುಪಾವತಿಸಲಾಗುವುದು ಮತ್ತು ಅವುಗಳನ್ನು ಬಹಿರಂಗಪಡಿಸಬೇಕು ಎಂದು ನ್ಯಾಯಾಲಯವು ಆದೇಶಿಸಿದೆ. ಈ ತೀರ್ಪಿನಿಂದ ಬಹಳಷ್ಟು ವಿಷಯಗಳು ಹೊರಬರುತ್ತವೆ. ಒಂದೇ ಪದದಲ್ಲಿ, ಇದು 'ಐತಿಹಾಸಿಕ' ತೀರ್ಪು," ಖುರೈಶಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News