“ಒಂದು ದೇಶ, ಒಂದು ಚುನಾವಣೆ” ಪ್ರಸ್ತಾವನೆ ಅಧ್ಯಯನಕ್ಕೆ ಮಾಜಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ನೇತೃತ್ವದ ಸಮಿತಿ ರಚಿಸಿದ ಕೇಂದ್ರ

Update: 2023-09-01 05:34 GMT

ಹೊಸದಿಲ್ಲಿ: “ಒಂದು ದೇಶ ಒಂದು ಚುನಾವಣೆ” ಪ್ರಸ್ತಾವನೆಯನ್ನು ಮುಂದಕ್ಕೊಯ್ಯುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟಿರುವ ಕೇಂದ್ರ ಸರ್ಕಾರ ಈ ವಿಚಾರದ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸಲು ಮಾಜಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದೆ.

ಸೆಪ್ಟೆಂಬರ್‌ 18ರಿಂದ 22ರ ತನಕ ಸಂಸತ್ತಿನ ವಿಶೇಷ ಅಧಿವೇಶನ ನಡೆಯಲಿದೆ ಎಂದು ಕೇಂದ್ರ ಸರ್ಕಾರ ಗುರುವಾರ ಘೋಷಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಈ ಅಧಿವೇಶನವನ್ನು “ಒಂದು ದೇಶ, ಒಂದು ಚುನಾವಣೆ” ಗೆ ಸಂಬಂಧಿಸಿದ ಮಸೂದೆ ಮಂಡನೆಯ ಉದ್ದೇಶದಿಂದ ಕರೆಯಲಾಗಿದೆ ಎಂಬ ಊಹಾಪೋಹಗಳು ದಟ್ಟವಾಗಿದ್ದರೂ ಇನ್ನೂ ಅಧಿಕೃತವಾಗಿ ಯಾವುದೇ ದೃಢೀಕರಣ ಲಭ್ಯವಾಗಿಲ್ಲ.

“ಒಂದು ದೇಶ, ಒಂದು ಚುನಾವಣೆ” ಭಾಗವಾಗಿ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳನ್ನು ದೇಶಾದ್ಯಂತ ಒಟ್ಟಿಗೆ ನಡೆಸುವ ಉದ್ದೇಶವಿದೆ. ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಈ ವಿಚಾರವನ್ನು ಹಲವಾರು ಬಾರಿ ಪ್ರಸ್ತಾಪಿಸಿದ್ದಾರೆ ಹಾಗೂ 2014 ಲೋಕಸಭಾ ಚುನಾವಣೆಯ ಬಿಜೆಪಿ ಪ್ರಣಾಳಿಕೆಯಲ್ಲೂ ಇದು ಉಲ್ಲೇಖವಾಗಿತ್ತು.

1967 ತನಕ ಭಾರತದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಒಟ್ಟಿಗೆ ನಡೆದಿತ್ತು ಹಾಗೂ ಒಟ್ಟು ನಾಲ್ಕು ಚುನಾವಣೆಗಳು ಈ ರೀತಿ ನಡೆದಿತ್ತು. ಆದರೆ 1968-69ರಲ್ಲಿ ಕೆಲ ರಾಜ್ಯಗಳ ವಿಧಾನಸಭೆಗಳು ಅವಧಿಪೂರ್ವ ವಿಸರ್ಜನೆಗೊಂಡ ನಂತರ ಈ ಕ್ರಮವನ್ನು ನಿಲ್ಲಿಸಲಾಗಿತ್ತು. ಲೋಕಸಭೆ ಕೂಡ ಮೊದಲ ಬಾರಿಗೆ 1971ರಲ್ಲಿ ಅವಧಿಗಿಂತ ಒಂದು ವರ್ಷ ಮುನ್ನವೇ ವಿಸರ್ಜಿಸಲ್ಪಟ್ಟಿದ್ದರಿಂದ ಮಧ್ಯಾವಧಿ ಚುನಾವಣೆ ನಡೆದಿತ್ತು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News