ಆಂಧ್ರದ ಶ್ರೀಹರಿಕೋಟಾದಲ್ಲಿ ಇಸ್ರೋದಿಂದ ಚಂದ್ರಯಾನ-3 ನೌಕೆ ಉಡಾವಣೆ ಯಶಸ್ವಿ
ಶ್ರೀಹರಿಕೋಟ: ಭಾರತದ ಮಹತ್ವಾಕಾಂಕ್ಷೆಯ ಚಂದ್ರನ ಮೇಲ್ಮೈ ಮೇಲೆ ಗಗನ ನೌಕೆ ಇಳಿಸಿ ಅಧ್ಯಯನ ಕೈಗೊಳ್ಳುವ ಉದ್ದೇಶದ ಚಂದ್ರಯಾನ-3 ನೌಕೆ ಉಡಾವಣೆ ಪ್ರಕ್ರಿಯೆ ಆಂಧ್ರಪ್ರದೇಶದ ಶ್ರೀಹರಿಕೋಟದ ಸತೀಶ್ ಧವನ್ ಉಡ್ಡಯನ ಕೇಂದ್ರದಲ್ಲಿ ಶುಕ್ರವಾರ ಮಧ್ಯಾಹ್ನ ಯಶಸ್ವಿಯಾಗಿ ನೆರವೇರಿದೆ.
ಲ್ಯಾಂಡರ್ (ವಿಕ್ರಮ್) ಹಾಗೂ ರೋವರ್ (ಪ್ರಜ್ಞಾನ)ಹೊತ್ತ ಬಾಹುಬಲಿ ಮಾರ್ಕ್ 3 ರಾಕೆಟ್ ಶುಕ್ರವಾರ ಮಧ್ಯಾಹ್ನ 02:35ಕ್ಕೆ ನಭಕ್ಕೆ ಚಿಮ್ಮಿದೆ.
ಚಂದ್ರಯಾನ-3 ನೌಕೆ ನಿಗದಿತ ಕಕ್ಷೆ ಸೇರಿದ್ದು, ಇದಕ್ಕೆ ಇಸ್ರೋ ವಿಜ್ಞಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಚಂದ್ರನ ಅಂಗಳಕ್ಕೆ ಕಾಲಿಡಲು ಲ್ಯಾಂಡರ್, ರೋವರ್ ಯಂತ್ರಗಳನ್ನು ಹೊತ್ತು ಸಾಗಿದ ಉಡ್ಡಯನ ವಾಹನ ಆಕಾಶಕ್ಕೆ ಚಿಮ್ಮಿದ ತಕ್ಷಣ ಇಸ್ರೋ ವಿಜ್ಞಾನಿಗಳ ಮುಖದಲ್ಲಿ ಸಂತಸ ಕಂಡುಬಂತು.
ಪ್ರಯಾಣವು 40 ದಿನಗಳನ್ನು ತೆಗೆದುಕೊಳ್ಳುತ್ತದೆ. ಆಗಸ್ಟ್ 23 ಅಥವಾ 24 ರಂದು ಬಾಹ್ಯಾಕಾಶ ನೌಕೆಯು ಚಂದ್ರನ ಅಂಗಳಕ್ಕೆ ತಲುಪುವ ನಿರೀಕ್ಷೆಯಿದೆ
2019ರಲ್ಲಿ ಕೈಗೊಂಡಿದ್ದ ಚಂದ್ರಯಾನ-2 ಕಾರ್ಯಕ್ರಮ ಕೊನೆ ಗಳಿಗೆಯಲ್ಲಿ ವಿಫಲವಾಗಿತ್ತು. ಹಾಗಾಗಿ ಈ ಬಾರಿ ವಿಜ್ಞಾನಿಗಳು ಸಾಫ್ಟ್ ಲ್ಯಾಂಡಿಂಗ್ ಬಗ್ಗೆ ಗಮನ ಕೇಂದ್ರೀಕರಿಸಲಿದ್ದಾರೆ. ಲ್ಯಾಂಡರ್ ಗೆ ಯಾವುದೇ ರೀತಿಯ ಹಾನಿಯಾಗದಂತೆ ಅದನ್ನು ಚಂದ್ರನ ಮೇಲೆ ಇಳಿಸುವುದನ್ನು ಸಾಫ್ಟ್ ಲ್ಯಾಂಡಿಂಗ್ ಎಂದು ಕರೆಯುತ್ತಾರೆ.
ಭಾರತದ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ 2023ರ ಜುಲೈ 14 ಅನ್ನು ಸುವರ್ಣಾಕ್ಷರಗಳಲ್ಲಿ ದಾಖಲಾಗಲಿದೆ. ನಮ್ಮ ಚಂದ್ರಯಾನದ ಅದ್ಭುತ ಯೋಜನೆಯು ಭಾರತೀಯರ ಭರವಸೆ ಹಾಗೂ ಕನಸುಗಳನ್ನು ಹೊತ್ತು ಸಾಗಲಿದೆ ಎಂದು ಚಂದ್ರಯಾನ-3 ಯೋಜನೆಗಾಗಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಶುಭಾಶಯ ತಿಳಿಸಿದ್ದಾರೆ.