ಜನನಿಬಿಡ ಗ್ರಾಮವಾಗಿದ್ದ ಕಣ್ಣೂರಿನ ಚಾತಮಂಗಲಂ ಮೂರು ತಲೆಮಾರಿನ ನಂತರ ನಿರ್ಜನ ಗ್ರಾಮವಾಗಿದ್ದು ಹೇಗೆ?

Update: 2024-04-02 17:41 GMT

Photo: onmanorama.com 

ಕಣ್ಣೂರು : ಕಣ್ಣೂರು ಜಿಲ್ಲೆಯ ಹಲವಾರು ಗಿರಿ ಪ್ರದೇಶದ ಪಂಚಾಯಿತಿಗಳು 38 ಡಿಗ್ರಿ ಸೆಲ್ಸಿಯಸ್ ನ ಬಿರು ಬೇಸಿಗೆಯನ್ನು ಹಾದು ಹೋಗುತ್ತಿದ್ದರೆ, ಸಮುದ್ರ ಮಟ್ಟದಿಂದ 2,500 ಮೀಟರ್ ಎತ್ತರದಲ್ಲಿರುವ ಚಾತಮಂಗಲಂನಲ್ಲಿರುವ ತೇರುವಮಲ ಮಾರ್ಚ್ ಮಂಜನ್ನು ಹೊದ್ದುಕೊಂಡಿತ್ತು. ಪೂರ್ವ ಕೇರಳದಲ್ಲಿ ಕರ್ನಾಟಕದ ಕೊಡಗು ಗಿರಿಶ್ರೇಣಿಗಳ ಬೆಳಗು ಈ ಪ್ರದೇಶವನ್ನು ಆವರಿಸುತ್ತದೆ. ರಾತ್ರಿಗಳು ತಿರುಮೇನಿ, ಉದಯಗಿರಿ ಹಾಗೂ ಅಲಕ್ಕೋಡ್ ಗ್ರಾಮಗಳ ವಿಹಂಗಮ ನೋಟ ನೀಡುತ್ತವೆ. ಅವುಗಳ ಬೀದಿಗಳು ಅಸಂಖ್ಯಾತ ಮನೆಗಳಿಂದ ಹೊರಹೊಮ್ಮುವ ಮಿನುಗುವ ದೀಪಗಳಿಂದ ಬೆಳಗುತ್ತವೆ.

ಆದರೆ, ಬೆಟ್ಟಗಳಿಂದ ಒಂದು ಕಿಮೀ ಕೆಳಗಿರುವ ಚಾತಮಂಗಲಂ ಅನಾಥ ಮನೆಗಳಿಂದ ದೆವ್ವಗಳ ಗ್ರಾಮವಾಗಿ ಬದಲಾಗಿದೆ. ಆ ಮೂಲಕ ಅಲ್ಲಿನ ನಿರ್ಜನ ಸ್ಥಿತಿಯನ್ನು ಅನುಭವಕ್ಕೆ ತರುತ್ತದೆ. ಈ ಗ್ರಾಮದಲ್ಲಿ ಕೇವಲ ಆರು ಕುಟುಂಬಗಳಿವೆ. ಇಲ್ಲಿನ ಅಂಗನವಾಡಿಯಲ್ಲಿ ಕೇವಲ ಮೂರು ಮಕ್ಕಳಿದ್ದು, ಈ ಪೈಕಿ ಓರ್ವ ಮಗು ಶಿಕ್ಷಕಿಯದೇ ಮಗುವಾಗಿದೆ.

ಕಣ್ಣೂರು ನಗರದಿಂದ 60 ಕಿಮೀ ದೂರದಲ್ಲಿರುವ ಚಾತಮಂಗಲಂ ಒಂದು ಕಾಲದಲ್ಲಿ ಸುಮಾರು 160 ಕುಟುಂಬಗಳನ್ನು ಹೊಂದಿದ್ದ ಜನನಿಬಿಡ ಗ್ರಾಮವಾಗಿತ್ತು. ಇಲ್ಲಿ ಎರಡು ರೆಸ್ಟೋರೆಂಟ್ ಗಳು, ಟೀ ಅಂಗಡಿಗಳು, ಎರಡು ದಿನಸಿ ಅಂಗಡಿಗಳು ಹಾಗೂ ರಾತ್ರಿ ಜೀವನಕ್ಕೆ ಕೊಡುಗೆ ನೀಡುತ್ತಿದ್ದ ಎರಡು ಸಾರಾಯಿ ಅಂಗಡಿಗಳು ಇದ್ದವು. ಚಾತಮಂಗಲಂ ನಿವಾಸಿಗಳು ಸತ್ಯಂ ಸ್ಮಾರಕ ಕಲೆ ಮತ್ತು ಕ್ರೀಡಾ ಕ್ಲಬ್ ಅನ್ನು ಹೊಂದಿದ್ದರು. ಈ ಕ್ಲಬ್ ಕಾರಣದಿಂದಾಗಿಯೇ ಚಾತಮಂಗಲಂ ಗ್ರಾಮದಲ್ಲಿ ಪ್ರಾರ್ಥನಾ ಮಂದಿರ ನಿರ್ಮಾಣವಾಗುವುದಕ್ಕೂ ಮುನ್ನ ವೃತ್ತಿಪರ ಕಲಾಕ್ಷೇತ್ರ ಇಲ್ಲಿ ನಿರ್ಮಾಣವಾಗಿತ್ತು. ಇಲ್ಲಿನ ನಿವಾಸಿಗಳು ಪ್ರಾರ್ಥನಾ ಮಂದಿರವನ್ನು ನಿರ್ಮಿಸಿದಾಗ ಅಯ್ಯಪ್ಪ ಭಜನಾ ಮಂದಿರವನ್ನೂ ನಿರ್ಮಿಸಿದ್ದರು.

 

Skaria and Raju, residents of Chathamangalam. Photo: Onmanorama

ಇಂದು ಚಾತಮಂಗಲಂನಲ್ಲಿ ಕೇವಲ ಆರು ಕುಟುಂಬಗಳಿವೆ. ಇಲ್ಲಿ ಕ್ಲಬ್ ಇದ್ದ ಕುರುಹೂ ಇಲ್ಲ. ಭಜನಾ ಮಂದಿರ ಹಾಳು ಕೊಂಪೆಯಾಗಿದ್ದು, ಪ್ರಾರ್ಥನಾ ಮಂದಿರದಲ್ಲಿ ಕೇವಲ ತಿಂಗಳಿಗೊಮ್ಮೆ ಮಾತ್ರ ಸಾಮೂಹಿಕ ಪ್ರಾರ್ಥನೆ ನಡೆಯುತ್ತದೆ. ಸುಮಾರು 40 ವರ್ಷಗಳ ಹಿಂದೆ ಈ ಗ್ರಾಮಕ್ಕೆ ಚೆರುಪುಝದಿಂದ ಪಯ್ಯನ್ನೂರ್ ಗೆ ಸಾರಿಗೆ ಸೇವೆಯಿತ್ತು. ಹೀಗಿದ್ದೂ ಅಲಕ್ಕೋಡ್ ಹಾಗೂ ತಾಲಿಪರಂಬ ಮಾರ್ಗವಾಗಿ ನಿರ್ಮಾಣವಾಗಿರುವ ಡಾಂಬರು ರಸ್ತೆ ಇಲ್ಲಿಯವರೆಗೂ ಚಾತಮಂಗಲಂ ಅನ್ನು ತಲುಪಿಲ್ಲ.

ಈ ಕುರಿತು ಪ್ರತಿಕ್ರಿಯಿಸಿದ 72 ವರ್ಷದ ರಾಜು ಪರಕ್ಕಡವಿಲ್, “1982ರಲ್ಲಿ ಕೆ.ಸಿ.ಜೋಸೆಫ್ ಪ್ರಥಮ ಬಾರಿಗೆ ಇಲ್ಲಿಂದ ಶಾಸಕರಾದಾಗ ಚಾತಮಂಗಲಂನಿಂದ ಅಲಕ್ಕೋಡ್ ಅನ್ನು ಸಂಪರ್ಕಿಸುವ 3.5 ಕಿಮೀ ಪೈಕಿ ಒಂದು ಕಿಮೀ ರಸ್ತೆಯನ್ನು ನಿರ್ಮಿಸಿದರು. ಅವರು 40 ವರ್ಷಗಳ ಕಾಲ ಶಾಸಕರಾಗಿದ್ದರು (2021ರವರೆಗೆ). ಹೀಗಿದ್ದೂ ಅವರು ಈ ಗ್ರಾಮದ ಕುರಿತು ಏನೂ ತಲೆ ಕೆಡಿಸಿಕೊಳ್ಳಲಿಲ್ಲ. ಒಂದು ವೇಳೆ ರಸ್ತೆಗಳಿದ್ದಿದ್ದರೆ, ಜನರು ಗ್ರಾಮವನ್ನು ತೊರೆಯುತ್ತಿರಲಿಲ್ಲ” ಎನ್ನುತ್ತಾರೆ. 1968ರಲ್ಲಿ ರಾಜು ಅವರ ಕುಟುಂಬವು ಕೊಟ್ಟಾಯಂನಿಂದ ಈ ಗ್ರಾಮಕ್ಕೆ ಬಂದಾಗ ಅವರು ಹದಿಹರೆಯದ ಯುವಕರಾಗಿದ್ದರು. “ಚಾತಮಂಗಲಂ ಅನಾಥ ಮಗುವಾಗಿದ್ದರಿಂದ ಎಲ್ಲರೂ ಈ ಗ್ರಾಮವನ್ನು ತೊರೆದರು” ಎನ್ನುತ್ತಾರೆ ಅವರ ಅರವತ್ತು ವರ್ಷದ ಪತ್ನಿ ಎಲಿಕುಟ್ಟಿ ರಾಜು.

ಕಣ್ಣೂರು ಜಿಲ್ಲೆಯ ಮೂರು ಗಿರಿಪ್ರದೇಶ ಪಂಚಾಯಿತಿಗಳಾದ ಅಲಕ್ಕೋಡ್, ಚೆರುಪುಝ ಹಾಗೂ ಉದಯಗಿರಿಯ ಪಕ್ಕದಲ್ಲಿ ಚಾತಮಂಗಲಂ ಪವಡಿಸಿದೆ. ಈ ಪೈಕಿ ಅಲಕ್ಕೋಡ್ ಪಂಚಾಯಿತಿಯು ಕಾಂಗ್ರೆಸ್ ನೇತೃತ್ವದ ಯುಡಿಎಫ್ ತೆಕ್ಕೆಯಲ್ಲಿದ್ದರೆ, ಚೆರುಪುಝ ಹಾಗೂ ಉದಯಗಿರಿ ಪಂಚಾಯಿತಿಗಳು ಸಿಪಿಎಂ ನೇತೃತ್ವದ ಎಲ್ಡಿಎಫ್ ಹಿಡಿತದಲ್ಲಿವೆ. ಈ ಅನಾಥ ಗ್ರಾಮವು ಇರಿಕ್ಕುರ್ (ಕಾಂಗ್ರೆಸ್) ಹಾಗೂ ಪಯ್ಯನ್ನೂರ್ (ಸಿಪಿಎಂ) ವಿಧಾನಸಭಾ ಕ್ಷೇತ್ರಗಳ ನಡುವೆ ಮತ್ತು ಕಾಸರಗೋಡು ಹಾಗೂ ಕಣ್ಣೂರು ಲೋಕಸಭಾ ಕ್ಷೇತ್ರಗಳ ನಡುವೆ ಹಂಚಿಹೋಗಿದೆ. ಕಾಸರಗೋಡು ಹಾಗೂ ಕಣ್ಣೂರು ಲೋಕಸಭಾ ಕ್ಷೇತ್ರಗಳೆರಡೂ ಕಾಂಗ್ರೆಸ್ ತೆಕ್ಕೆಯಲ್ಲಿವೆ. “ಮತ ಯಾಚಿಸಲು ಇಲ್ಲಿಗೆ ಯಾರೂ ಬರುವುದಿಲ್ಲ. ಆದರೆ, ನಾವು ಮಾತ್ರ ಪರಪ್ಪದಲ್ಲಿರುವ ನೆಡುವೊಡೆಯಲ್ಲಲಿನ ಹಿರಿಯ ಸರಕಾರಿ ಪ್ರಾಥಮಿಕ ಶಾಲೆಗೆ 3.5 ಕಿಮೀ ದೂರ ನಡೆದುಕೊಂಡು ಹೋಗಿ ಮತ ಚಲಾಯಿಸುತ್ತೇವೆ. ಅಲಕ್ಕೋಡ್ ಸಮೀಪದ ಮಾರುಕಟ್ಟೆ ಸ್ಥಳವಾಗಿದ್ದರೂ ಅದೊಂದು ಬಾರಿ ಮಾತ್ರ ನಾವು ಅಲ್ಲಿಗೆ ತೆರಳುತ್ತೇವೆ” ಎಂದು ಹೇಳುತ್ತಾರೆ 70 ವರ್ಷದ ಸ್ಕರಿಯ ಪುತ್ತುಪರಂಬಿಲ್. “ನಮ್ಮ ನ್ಯಾಯಬೆಲೆ ಪಡಿತರ ಅಂಗಡಿ ಕೂಡಾ ಅಲಕ್ಕೋಡ್ ನಲ್ಲಿದೆ. ಸಮಾಧಾನಕರ ಸಂಗತಿಯೆಂದರೆ, ನಾವೀಗ ಯಾವ ನ್ಯಾಯಬೆಲೆ ದಿನಸಿ ಅಂಗಡಿಯಲ್ಲಿ ಬೇಕಾದರೂ ಖರೀದಿಸಬಹುದು” ಎಂದೂ ಹೇಳುತ್ತಾರೆ.

 

An abandoned house in Chathamangalam. Photo: Onmanorama

ಚಾತಮಂಗಲಂ ಗ್ರಾಮದಲ್ಲಿರುವ ಆರು ಕುಟುಂಬಗಳೀಗ ಬೆಟ್ಟದ ಕೆಳಗಿರುವ ಚೆರುಪುಝ ಗ್ರಾಮ ಪಂಚಾಯಿತಿಯ ತಿರುಮೇನಿ ಮಾರುಕಟ್ಟೆ ಸ್ಥಳದಲ್ಲಿ ದಿನಸಿಗಳನ್ನು ಖರೀದಿ ಮಾಡುತ್ತಾರೆ. “ತಿರುಮೇನಿಯಿಂದ ಚಾತಮಂಗಲಂ ಅನ್ನು ಸಂಪರ್ಕಿಸುವ ರಸ್ತೆ ನಿರ್ಮಾಣ ಕಾರ್ಯ ಕೇವಲ ಎರಡು ವರ್ಷಗಳ ಹಿಂದಷ್ಟೆ ಮುಕ್ತಾಯಗೊಂಡಿದೆ. ಇಲ್ಲಿಗೆ ಬರಲು ಆಟೋರಿಕ್ಷಾ ಚಾಲಕರು ರೂ. 150 ದರವನ್ನು ವಿಧಿಸುತ್ತಾರೆ” ಎನ್ನುತ್ತಾರೆ ಸ್ಕರಿಯ.

ಉದ್ಯೋಗಕ್ಕಾಗಿ ತೆರಳುವ ದಿನಗೂಲಿಗಳು ಮರಳಿ ಚಾತಮಂಗಲಂಗೆ ಬರಬೇಕಾದರೆ ಪ್ರತಿನಿತ್ಯ ರೂ. 300 ಅನ್ನು ವೆಚ್ಚ ಮಾಡಬೇಕಾಗುತ್ತದೆ. “ಇಲ್ಲಿ ಬದುಕುವುದರಲ್ಲಿ ಇನ್ನು ಅರ್ಥವಿಲ್ಲ. ಇಲ್ಲಿ ಯಾವುದೇ ಉದ್ಯೋಗವಿಲ್ಲ” ಎನ್ನುತ್ತಾರೆ ಜೀವನೋಪಾಯಕ್ಕಾಗಿ ಅಡಿಕೆಯನ್ನು ಕಟಾವು ಮಾಡುವ ಎಲಿಕುಟ್ಟಿ ಹಾಗೂ ರಾಜು ದಂಪತಿಯ 42 ವರ್ಷದ ಪುತ್ರ ಜೋಜಿ ಪರಕ್ಕಡವಿಲ್. ಕೆಲ ವರ್ಷಗಳ ಹಿಂದೆ ಚೆರುಪುಝ ಗ್ರಾಮ ಪಂಚಾಯಿತಿ ವ್ಯಾಪ್ತಿಯ, ಬೆಟ್ಟದಿಂದ 12 ಕಿಮೀ ಕೆಳಗಿರುವ ಮಂಜಕ್ಕಡು ಗ್ರಾಮಕ್ಕೆ ಜೋಜಿ, ಆತನ ಪತ್ನಿ ಹಾಗೂ ಇಬ್ಬರು ಮಕ್ಕಳು ಸ್ಥಳಾಂತರಗೊಂಡಿದ್ದಾರೆ. “ನನ್ನ ಮಕ್ಕಳು ಶಾಲೆಗೆ ನಡೆದುಕೊಂಡು ಹೋಗಬಾರದು ಎಂಬ ಕಾರಣಕ್ಕೆ ನಾವು ಸ್ಥಳಾಂತರಗೊಂಡೆವು” ಎಂದು ಜೋಜಿ ಹೇಳುತ್ತಾರೆ.

ಕೃಷಿ ಭೂಮಿಗಳನ್ನು ಖರೀದಿ ಮಾಡುತ್ತಿರುವ ಗಣಿ ಮಾಲಕರು

ಸಂಪರ್ಕ ಕೊರತೆಯೇ ಪ್ರಮುಖ ಅನನುಕೂಲವಾಗಿದ್ದು, ಜನರು ಚಾತಮಂಗಲಂ ತೊರೆಯಲು ಇದೇ ಕಾರಣವಾಗಿದೆ. ಪದೇ ಪದೇ ಆಗುವ ವನ್ಯಜೀವಿಗಳ ದಾಳಿಯಿಂದ ಈ ಗ್ರಾಮದ ಆರ್ಥಿಕತೆಯು ನಾಶವಾಗಿದೆ. “ಸರಕಾರವು ನಮ್ಮ ಬೆಳೆಗಳು ಹಾಗೂ ನಮ್ಮ ಬದುಕನ್ನು ರಕ್ಷಿಸಲು ಏನನ್ನೂ ಮಾಡದೆ ಹೋದಾಗ, ಗಣಿ ಮಾಲಕರು ನಮ್ಮ ಕೃಷಿ ಭೂಮಿಗಳನ್ನು ಖರೀದಿಸಿದರು” ಎನ್ನುತ್ತಾರೆ ಸ್ಕರಿಯ.

 

Kuriachan, a CPM worker and resident of Chathamangalam. Photo: Onmanorama

ಕಳೆದ 18 ವರ್ಷಗಳಲ್ಲಿ ಸುಮಾರು ನಾಲ್ಕು ಗಣಿ ಮಾಲಕರು ನೂರಾರು ಎಕರೆ ಕೃಷಿ ಭೂಮಿಯನ್ನು ಖರೀದಿಸಿದ್ದಾರೆ. “ಸಣ್ಣ ಮೆಣಸಿನಕಾಯಿ ಬೆಲೆಯೂ ಇಲ್ಲದ ನಮ್ಮ ಕೃಷಿ ಭೂಮಿಗಳಿಗೆ ಅವರು ಉತ್ತಮ ಬೆಲೆ ನೀಡುತ್ತಿದ್ದಾರೆ” ಎಂದು ರಾಜು ಪರಕ್ಕಡವಿಲ್ ಹೇಳುತ್ತಾರೆ. ಅವರಿಗೆ ಒಂದು ಎಕರೆ ಭೂಮಿಯನ್ನು ಖರೀದಿಸಲು ರೂ. 6 ಲಕ್ಷಕ್ಕೆ ಆಸಕ್ತಿ ತೋರಿಸುತ್ತಿದ್ದಾರೆ. “ನಾವೂ ಕೂಡಾ ನಮ್ಮ ಕೃಷಿ ಭೂಮಿಗಳನ್ನು ಮಾರಾಟ ಮಾಡಿ, ಇಲ್ಲಿಂದ ಹೊರಟು ಹೋಗಬಹುದಿತ್ತು. ಆದರೆ, ನವೆಂಬರ್ ನಡುರಾತ್ರಿ ಮೋದಿ ನೋಟು ಅಮಾನ್ಯೀಕರಣ ಮಾಡಿದ್ದರಿಂದ ನಮ್ಮ ಬದುಕುಗಳು ಹಾಳಾದವು” ಎನ್ನುತ್ತಾರೆ ಅವರು. (ಕಪ್ಪು ಹಣ ಮತ್ತು ಭಯೋತ್ಪಾದನೆಯನ್ನು ನಿರ್ಮೂಲನೆ ಹಾಗೂ ನಗದು ಚಲಾವಣೆಯನ್ನು ತಗ್ಗಿಸುವ ವಿಫಲ ಪ್ರಯತ್ನದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ರೂ. 500 ಹಾಗೂ ರೂ. 1,000 ಮುಖಬೆಲೆಯ ನೋಟನ್ನು ಅಮಾನ್ಯೀಕರಣ ಮಾಡಿತ್ತು. ರೂ. 15.41 ಲಕ್ಷ ಕೋಟಿ ಮೌಲ್ಯ ಹೊಂದಿದ್ದ ಈ ನೋಟುಗಳನ್ನು ಅಂದು ರಾತ್ರಿ ಪ್ರಧಾನಿ ನರೇಂದ್ರ ಮೋದಿ ಅಮಾನ್ಯೀಕರಣಗೊಳಿಸಿದ್ದರು. ಈ ಪೈಕಿ ರೂ. 15.31 ಲಕ್ಷ ಕೋಟಿ ಅಥವಾ ಅಮಾನ್ಯೀಕರಣಕ್ಕೊಳಗಾದ ನೋಟುಗಳ ಮೌಲ್ಯದ ಶೇ. 99ರಷ್ಟು ನೋಟುಗಳು ಬ್ಯಾಂಕಿಗೆ ಮರಳಿದ್ದವು)

St Jude Chapel. Photo: Onmanorama

 

ಅನಾಥ ಮನೆ, ಜಮೀನುಗಳಲ್ಲಿ ಆಶ್ರಯ ಪಡೆದ ವನ್ಯ ಜೀವಿಗಳು

ಗಣಿ ಮಾಲಕರಿಗೆ ತಮ್ಮ ಕೃಷಿ ಭೂಮಿಗಳನ್ನು ಮಾರಾಟ ಮಾಡಲು ಸಾಧ್ಯವಾಗದಿದ್ದರೂ, ಹಲವಾರು ಕುಟುಂಬಗಳು ಗ್ರಾಮವನ್ನು ತೊರೆದಿವೆ. ಹಾಳು ಕೊಂಪೆಯಂಥ ಗ್ರಾಮಕ್ಕೆ ಚಾತಮಂಗಲಂ ಗ್ರಾಮದಲ್ಲಿರುವ ಅನಾಥ ಮನೆಗಳು ಸಾಕ್ಷಿ ನುಡಿಯುತ್ತಿವೆ. “ಯಾವುದಾದರೂ ಕುಟುಂಬವು ಗ್ರಾಮವನ್ನು ತೊರೆದರೆ, ಅವರ ಜಾಗವು ವನ್ಯಜೀವಿಗಳ ಪಾಲಿಗೆ ಆವಾಸ ಸ್ಥಾನವಾಗುತ್ತಿದೆ” ಎಂದು ರಾಜು ಹೇಳುತ್ತಾರೆ. ಕಣ್ಮರೆಯಾಗುವುದಕ್ಕೂ ಮುನ್ನ, ರಾಜು ಅವರ ನಿವಾಸದಿಂದ 50 ಮೀಟರ್ ದೂರದಲ್ಲಿ ಮಂಗಗಳ ಗುಂಪೊಂದು ಒಂದು ಗೋಡಂಬಿ ಮರದಿಂದ ಮತ್ತೊಂದು ಗೋಡಂಬಿ ಮರಕ್ಕೆ ಜಿಗಿಯುತ್ತಿದ್ದವು. ರಾಜು ನಿವಾಸದ ಮುಂದಿನ ಮೇಲ್ಚಾವಣಿ ಇಲ್ಲದ ತೆಂಗಿನ ಮರಗಳ ಬಗ್ಗೆ ಅವಕ್ಕೆ ಆಸಕ್ತಿ ಇರಲಿಲ್ಲ.

ಕಾಯಿಲೆ ಹಾಗೂ ವನ್ಯಜೀವಿಗಳ ದಾಳಿಯಿಂದ ನಾಶವಾಗಿರುವ ತಮ್ಮ ತೆಂಗಿನ ತೋಟದಿಂದ ರಾಜು ದಿನವೊಂದಕ್ಕೆ 150ಕ್ಕಿಂತ ಕಡಿಮೆ ತೆಂಗಿನಕಾಯಿಗಳನ್ನು ಪಡೆಯುತ್ತಾರೆ. “ಮಂಗಗಳು ಹಾಗೂ ಕರಡಿಗಳು ನಮಗಾಗಿ ಏನನ್ನೂ ಬಿಡುವುದಿಲ್ಲ” ಎಂದು ಅವರು ತಮ್ಮ ಅಸಹಾಯಕತೆಯನ್ನು ತೋಡಿಕೊಳ್ಳುತ್ತಾರೆ.

ಭೂತಕಾಲದ ನೆನಪುಗಳು

ಚಾತಮಂಗಲಂ ಹಾಗೂ ಉತ್ತರ ಮಲಬಾರ್ ನ ಇನ್ನಿತರ ಗಿರಿ ಗ್ರಾಮಗಳ ನಿವಾಸಿಗಳು 1950ರಲ್ಲಿ ತಮ್ಮ ಗ್ರಾಮಗಳನ್ನು ತೊರೆಯಲು ಪ್ರಾರಂಭಿಸಿದರು. ಕೃಷಿಯ ನಂತರ, ಲಿಂಬೆ ಹುಲ್ಲನ್ನು ಸಂಸ್ಕರಿಸಿ, ಸುಗಂಧ ದ್ರವ್ಯ ಹಾಗೂ ಎಣ್ಣೆಯನ್ನು ತೆಗೆಯುವುದು ಈ ಗಿರಿ ಪ್ರದೇಶಗಳಲ್ಲಿ ಬಹು ದೊಡ್ಡ ಉದ್ಯೋಗವಾಗಿತ್ತು. “ಮಹಿಳೆಯರು ಬೆಳಗಿನ ವೇಳೆ ಹುಲ್ಲನ್ನು ಕಟಾವು ಮಾಡುತ್ತಿದ್ದರು ಹಾಗೂ ಪುರುಷರು ರಾತ್ರಿ ವೇಳೆ ಅದನ್ನು ಸಂಸ್ಕರಿಸುತ್ತಿದ್ದರು” ಎಂದು ರಾಜು ಪರಕ್ಕವಡಿ ಹಾಗೂ ಎಲಿಕುಟ್ಟಿ ದಂಪತಿಗಳ ಮನೆಯ ನೆರಯವರಾದ ಎಲಿಕುಟ್ಟಿ (85) ಹೇಳುತ್ತಾರೆ.

ಚಾತಮಂಗಲಂ ರಾತ್ರಿ ವೇಳೆ ಜನಜಂಗುಳಿಯಿಂದು ತುಂಬಿರುತ್ತಿತ್ತು ಎಂದು ಸ್ಮರಿಸುತ್ತಾರೆ ಎಲಿಕುಟ್ಟಿ. “ಪ್ರತಿ ಸಂಜೆ ಈ ಗ್ರಾಮದಲ್ಲಿ ಎಲ್ಲ ಧರ್ಮದ ಜನರೂ ನೆರೆಯುತ್ತಿದ್ದರು. ಅವರು ಧೂಮಪಾನ ಮಾಡುತ್ತಿದ್ದರು, ಮದ್ಯಪಾನ ಮಾಡುತ್ತಿದ್ದರು, ಇಸ್ಪೀಟ್ ಅಡುತ್ತಿದ್ದರು ಹಾಗೂ ಪರಸ್ಪರ ತಮಾಷೆ ಮಾಡಿಕೊಳ್ಳುತ್ತಿದ್ದರು. ಒಂದೇ ಕಡೆ ಎರಡು ಸಾರಾಯಿ ಅಂಗಡಿಗಳಿದ್ದದ್ದು ತೀರಾ ಅಪರೂಪ” ಎಂದು ಅವರು ಹೇಳುತ್ತಾರೆ. ಅಗತ್ಯ ಬಿದ್ದಾಗ ಎಲ್ಲರೂ ಒಟ್ಟಾಗಿ ಪರಸ್ಪರ ನೆರವು ನೀಡುತ್ತಿದ್ದರೂ ಎಂದೂ ಅವರು ನೆನಪಿಸಿಕೊಳ್ಳುತ್ತಾರೆ. “ಧರ್ಮವು ದೇಶವನ್ನು ವಿಭಜಿಸಲು ಪ್ರಾರಂಭಿಸಿದ ಸಮಯದಲ್ಲಿ ಬಹುತೇಕರು ಚಾತಮಂಗಲಂ ಅನ್ನು ತೊರೆದರು” ಎಂದು ಅವರು ಹೇಳುತ್ತಾರೆ. ಆಕೆ ತಮ್ಮ 4.6 ಎಕರೆ ಜಮೀನನ್ನು ಗಣಿ ಮಾಲಕರೊಬ್ಬರಿಗೆ ಮಾರಾಟ ಮಾಡಿ ಹಲವಾರು ವರ್ಷಗಳ ಹಿಂದೆಯೇ ಚಾತಮಂಗಲಂ ಅನ್ನು ತೊರೆದಿದ್ದಾರೆ.

ಚಾತಮಂಗಲಂ ಪುನರುಜ್ಜೀವನ

ಪ್ರವಾಸೋದ್ಯಮ ಗರಿಗೆದರಿದರೆ ಮಾತ್ರ ಚಾತಮಂಗಲಂ ಅನ್ನು ಮರಳಿ ಜನನಿಬಿಡವಾಗಿಸಬಹುದು ಎಂದು ಅಭಿಪ್ರಾಯ ಪಡುತ್ತಾರೆ ಜೋಜಿ. “ಈ ಗ್ರಾಮವು ಚಾರಣಕ್ಕೆ ಹಾಗೂ ಹೊರವಲಯದ ಶಿಬಿರಕ್ಕೆ ಹೇಳಿ ಮಾಡಿಸಿದ ಸ್ಥಳವಾಗಿದೆ” ಎನ್ನುತ್ತಾರೆ ಅವರು.

ಆದರೆ, ಸರಕಾರವು ಇಲ್ಲಿನ ಸಾರಿಗೆ ಸಂಪರ್ಕವನ್ನು ಸುಧಾರಿಸಬೇಕು ಎನ್ನುತ್ತಾರೆ ಮನೆಗೆ ಬಣ್ಣ ಬಳಿಯುವ ಕೆಲಸ ಮಾಡುವ ಕಣ್ಣೂರಿನವರಾದ ರೇಜಿ. ಚಾರಮಂಗಲಂ ರಸ್ತೆಯಲ್ಲಿ ಮೋಟರ್ ಬೈಕ್ ಓಡಿಸಲು ಸಾಧ್ಯವಿಲ್ಲದೆ ಇರುವುದರಿಂದ ರೇಜಿ ಮತ್ತು ಅವರ ಗೆಳತಿಯು ತಮ್ಮ ಮೋಟರ್ ಬೈಕ್ ಅನ್ನು ಅಲಕ್ಕೋಡ್ ನಲ್ಲಿ ನಿಲ್ಲಿಸಿ, ತೆರುವಮಲಗೆ ನಡೆದುಕೊಂಡೇ ಹೋದರು.

ಈ ಗ್ರಾಮದಲ್ಲಿ ಗಣಿಗಳೂ ತಮ್ಮ ಕಾರ್ಯಾಚರಣೆಯನ್ನು ಪ್ರಾರಂಭಗೊಳಿಸಿದ್ದು, ಇಲ್ಲಿನ ನಿವಾಸಿಗಳಿಗೆ ಕುಡಿಯುವ ನೀರಿನ ಬಿಕ್ಕಟ್ಟು ತಲೆದೋರಬಹುದು ಎಂದು ಆತಂಕ ವ್ಯಕ್ತಪಡಿಸುತ್ತಾರೆ ಜೋಜಿ. “ಈವರೆಗೆ ನಾವು ಬೆಟ್ಟದ ಮೇಲಿರುವ ಜಲಪಾತಗಳನ್ನು ಕುಡಿಯುವ ನೀರಿಗಾಗಿ ಅವಲಂಬಿಸಿದ್ದೇವೆ. ಅಲ್ಲಿ ವರ್ಷಪೂರ್ತಿ ನೀರಿರುತ್ತದೆ. ಗಣಿಗಳು ಆ ಜಲಪಾತಗಳನ್ನು ಬತ್ತಿಸುತ್ತವೆ” ಎಂದು ಅವರು ಅಳಲು ತೋಡಿಕೊಳ್ಳುತ್ತಾರೆ.

ಸೌಜನ್ಯ: onmanorama.com

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News