ಲೈನ್ ಆಫ್ ಕಂಟ್ರೋಲ್ ಬಳಿ ನೂತನ ಹೆಲಿಪೋರ್ಟ್ ನಿರ್ಮಿಸಿದ ಚೀನಾ ; ಗಡಿ ಭದ್ರತೆಯ ಕುರಿತು ಹೆಚ್ಚಿದ ಕಳವಳ

Update: 2024-09-18 13:28 GMT

Photo: X

ಹೊಸದಿಲ್ಲಿ: ಅರುಣಾಚಲ ಪ್ರದೇಶದ ಬಳಿಯಿರುವ ಮೀನಿನ ಬಾಲ ಎಂದು ಕರೆಯಲಾಗುವ ಅತಿ ಸೂಕ್ಷ್ಮ ಪ್ರಾಂತ್ಯದ ಲೈನ್ ಆಫ್ ಕಂಟ್ರೋಲ್‌ ಬಳಿಯಿಂದ ಸುಮಾರು 20 ಕಿಮೀ ದೂರದಲ್ಲಿ ಚೀನಾ ನೂತನ ಹೆಲಿಪೋರ್ಟ್ ನಿರ್ಮಿಸುತ್ತಿದೆ. ಈ ನಿರ್ಮಾಣದಿಂದ ಕ್ಷಿಪ್ರವಾಗಿ ಸೇನಾ ಸಾಮಗ್ರಿಗಳನ್ನು ಭಾರತ-ಚೀನಾ ಗಡಿನಾಡಿನ ದೂರ ಮತ್ತು ಹಿಂದುಳಿದ ಪ್ರದೇಶದಲ್ಲಿ ನಿಯೋಜಿಸಲು ಚೀನಾಗೆ ಸಹಕಾರಿಯಾಗಲಿದೆ. ಇದರಿಂದ ಈ ಪ್ರಾಂತ್ಯದಲ್ಲಿ ಭಾರತಕ್ಕೆ ಭದ್ರತೆ ಕುರಿತು ಕಳವಳವನ್ನುಂಟು ಮಾಡಲಿದೆ ಎಂದು ವರದಿಯಾಗಿದೆ.

ಈ ಹೆಲಿಪೋರ್ಟ್ ಅನ್ನು ಟಿಬೆಟ್ ನ ಸ್ವಾಯತ್ತ ಪ್ರಾಂತ್ಯದಲ್ಲಿರುವ ನೈಯಿಂಗ್ಚಿ ಆಡಳಿತದ ಗೊಂಗ್ರಿಗಬು ಕು ನದಿ ತಟದಲ್ಲಿ ನಿರ್ಮಿಸಲಾಗುತ್ತಿದೆ ಹಾಗೂ ಇದು ವ್ಯಾಜ್ಯರಹಿತ ಚೀನಾ ಪ್ರಾಂತ್ಯದೊಳಗಿದೆ ಎಂದು ಹೇಳಲಾಗಿದೆ.

ಇಒಎಸ್ ಡಾಟಾ ಅನಾಲಿಟಿಕ್ಸ್ ನ ಸ್ಯಾಟಲೈಟ್ ಚಿತ್ರದ ಪ್ರಕಾರ, ಡಿಸೆಂಬರ್ 1, 2023ರಂದು ಈ ಪ್ರಾಂತ್ಯದಲ್ಲಿ ಯಾವುದೇ ನಿರ್ಮಾಣ ಚಟುವಟಿಕೆ ಕಂಡು ಬಂದಿರಲಿಲ್ಲ. ಆದರೆ, ಸೆಪ್ಟೆಂಬರ್ 16, 2024ರ ವೇಳೆಗೆ ನೆಲವನ್ನು ಸಮತಟ್ಟು ಮಾಡುವ ಕೆಲಸಕ್ಕೆ ಚಾಲನೆ ನೀಡಿರುವುದು ದೃಢಪಟ್ಟಿದೆ ಎನ್ನಲಾಗಿದೆ. ಮ್ಯಾಕ್ಸರ್ ನ ಹೈ ರೆಸಲ್ಯೂಷನ್ ಚಿತ್ರಗಳ ಪ್ರಕಾರ, ಹೆಲಿಪೋರ್ಟ್ ನಿರ್ಮಾಣ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದೆ.

ಜಿಸ್ಪೇಷಿಯಲ್ ಇಂಟಲಿಜಿನ್ಸ್ ಅನಲಿಸ್ಟ್ ಡೇಮಿಯನ್ ಸೈಮನ್ ಸೇರಿದಂತೆ ತಜ್ಞರ ಪ್ರಕಾರ, ಈ ಹಸಿರುಚ್ಛಾದಿತ ಮತ್ತು ದಟ್ಟ ಅರಣ್ಯ ಪ್ರಾಂತ್ಯದಲ್ಲಿ ಪೀಪಲ್ಸ್ ಲಿಬರೇಷನ್ ಆರ್ಮಿಗೆ ಗುಪ್ತಚರ ಮಾಹಿತಿ ಸಂಗ್ರಹಿಸಲು ಹಾಗೂ ನಿಗಾವಣೆ ಇಡಲು ಈ ಹೆಲಿಪೋರ್ಟ್ ನಿಂದ ಇನ್ನೂ ಹೆಚ್ಚು ಅನುಕೂಲವಾಗಲಿದೆ. ಈ ಭೂಪ್ರದೇಶವು ಸೇನಾ ಕಾರ್ಯಾಚರಣೆಗೆ ತೊಡಕನ್ನುಂಟು ಮಾಡುವ ಇತಿಹಾಸ ಹೊಂದಿದ್ದರೂ, ನೂತನ ಹೆಲಿಪೋರ್ಟ್ ನಿಂದಾಗಿ ಈ ದೂರ ಪ್ರದೇಶದಲ್ಲಿ ಸೇನಾಪಡೆಯನ್ನು ಸಾಗಿಸಲು ಹಾಗೂ ಗಸ್ತು ತಿರುಗಲು ಗಮನಾರ್ಹ ಅನುಕೂಲವಾಗಲಿದೆ ಎಂದು ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News