ಸದನದಿಂದ ಬಿಜೆಪಿ ಸಂಸದ ರಮೇಶ್ ಬಿಧುರಿ ಅಮಾನತುಗೊಳಿಸಲು ಕಾಂಗ್ರೆಸ್ ಆಗ್ರಹ
ಹೊಸದಿಲ್ಲಿ: ಲೋಕಸಭೆಯಲ್ಲಿ ಬಿಜೆಪಿ ಸಂಸದ ರಮೇಶ್ ಬಿಧುರಿ ಅವರ ಹೇಳಿಕೆಗೆ ಕಾಂಗ್ರೆಸ್ ಶುಕ್ರವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಅವರನ್ನು ಸದನದಿಂದ ಅಮಾನತುಗೊಳಿಸುವಂತೆ ಒತ್ತಾಯಿಸಿದೆ.
ಈ ಹೇಳಿಕೆಯು ಎಲ್ಲಾ ಸಂಸದರಿಗೆ ಮಾಡಿರುವ ಅವಮಾನ ಎಂದು ಬಣ್ಣಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರು ನೀಡಿದ ಕ್ಷಮೆಯಾಚನೆಯು ಕೇವಲ ಕಣ್ಣೊರೆಸುವ ತಂತ್ರವಾಗಿದ್ದು ಇದು ಸಾಕಾಗುವುದಿಲ್ಲ ಎಂದು ಹೇಳಿದರು.
ಬಿಧುರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಶುಕ್ರವಾರ ಸದನದಲ್ಲಿ ಬಿಧುರಿ ಮಾಡಿದ ಕೆಲವು ಆಕ್ಷೇಪಾರ್ಹ ಹೇಳಿಕೆಗಳನ್ನು "ಗಂಭೀರವಾಗಿ ಗಮನಿಸಿದರು. ಭವಿಷ್ಯದಲ್ಲಿ ಅಂತಹ ನಡವಳಿಕೆಯನ್ನು ಪುನರಾವರ್ತಿಸಿದರೆ "ಕಠಿಣ ಕ್ರಮ" ತೆಗೆದುಕೊಳ್ಲುವೆ ಎಂದು ಎಚ್ಚರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಚಂದ್ರಯಾನ-3ರ ಯಶಸ್ಸಿನ ಕುರಿತ ಚರ್ಚೆಯ ವೇಳೆ ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಸದಸ್ಯ ಕುನ್ವರ್ ದಾನಿಶ್ ಅಲಿ ಅವರನ್ನು ಗುರಿಯಾಗಿಸಿ ಬಿಧುರಿ ನೀಡಿದ ಹೇಳಿಕೆಗಳು ಕೋಲಾಹಲಕ್ಕೆ ಕಾರಣವಾಗಿದ್ದು, ವಿರೋಧ ಪಕ್ಷದ ನಾಯಕರು ಬಿಧುರಿ ವಿರುದ್ಧ ಕಠಿಣ ಕ್ರಮಕ್ಕೆ ಕರೆ ನೀಡಿದ್ದಾರೆ.