ಲೋಕಸಭಾ ಚುನಾವಣೆ | 5 ಅಭ್ಯರ್ಥಿಗಳ ಮತ್ತೊಂದು ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್
ಹೊಸದಿಲ್ಲಿ : ಲೋಕಸಭಾ ಚುನಾವಣೆಗೆ 5 ಅಭ್ಯರ್ಥಿಗಳ ಮತ್ತೊಂದು ಪಟ್ಟಿಯನ್ನು ಕಾಂಗ್ರೆಸ್ ಪಕ್ಷವು ಶುಕ್ರವಾರ ಬಿಡುಗಡೆ ಮಾಡಿದೆ.
ಕರ್ನಾಟಕ ಮತ್ತು ರಾಜಸ್ತಾನದ 5 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಸಲಾಗಿದೆ.
ರಾಜಸ್ತಾನದ ರಾಜ್ ಸಮಂದ್ ನಿಂದ ಡಾ. ದಾಮೋದರ್ ಗುರ್ಜರ್ ಹಾಗೂ ಬಿಲ್ವಾರದಿಂದ ಡಾ. ಸಿ.ಪಿ ಜೋಶಿ ಕಣಕ್ಕಿಳಿಯಲಿದ್ದಾರೆ.
ಕರ್ನಾಟಕದಿಂದ ಯಾರ‍್ಯಾರಿಗೆ ಟಿಕೆಟ್
ಚಾಮರಾಜನಗರ
ಸಮಾಜ ಕಲ್ಯಾಣ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ ಅವರ ಪುತ್ರ ಟಿ.ನರಸೀಪುರ ಆಶ್ರಯ ಸಮಿತಿ ಅಧ್ಯಕ್ಷ ಸುನೀಲ್ ಬೋಸ್ ಅವರು ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ.
ಯುವ ನಾಯಕನಾಗಿ ಪಕ್ಷ ಸಂಘಟನೆಯ ಜೊತೆಗೆ ಟಿ.ನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ತಂದೆಯ ಬೆಂಬಲಕ್ಕೆ ನಿಂತು ಅವರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
2008ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ತಂದೆ ಪರ ಚುನಾವಣೆಯಲ್ಲಿ ಗುರುತಿಸಿಕೊಂಡ ಇವರು 2013 ರಿಂದೀಚೆಗೆ ಸಕ್ರಿಯ ರಾಜಕಾರಣದಲ್ಲಿ ಗುರುತಿಸಿಕೊಂಡರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ನಂಜನಗೂಡು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಲು ಪ್ರಯತ್ನಿಸಿದ್ದರು. ಆದರೆ ಪಕ್ಷ ಅವರಿಗೆ ಅವಕಾಶ ನೀಡಲಿಲ್ಲ.
ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ನಿಧನದಿಂದ ರಾಜಕೀಯದಲ್ಲಿ ಬದಲಾವಣೆಗಳಾದ ಹಿನ್ನಲೆಯಲ್ಲಿ ಆಗಲೂ ಅವರಿಗೆ ಅವಕಾಶ ಸಿಗಲಿಲ್ಲ. ಇದೀಗ ಪಕ್ಷದ ಹೈಕಮಾಂಡ್ ಮತ್ತು ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸುನಿಲ್ ಭೋಸ್ ಅವರನ್ನು ಕಣಕ್ಕಿಳಿಸಿದ್ದಾರೆ.
ಬಳ್ಳಾರಿ
ಸಂಡೂರ್ ವಿಧಾನಸಭಾ ಕ್ಷೇತ್ರದ ಶಾಸಕ ಎರೆಗಾರ್ ತುಕಾರಾಂ ಅವರನ್ನು ಬಳ್ಳಾರಿ ಲೋಕಸಭಾ ಕೇತ್ರದ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಿದೆ.
ಬಿಜೆಪಿ ಅಭ್ಯರ್ಥಿ ಮಾಜಿ ಸಚಿವ ಬಿ.ಶ್ರೀರಾಮುಲು ಅವರ ವಿರುದ್ಧ ಇ.ತುಕಾರಂ ಕಣಕ್ಕಿಲಿಯಲ್ಲಿದ್ದಾರೆ. ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರಕಾರದಲ್ಲಿ ತುಕಾರಾಂ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದರು.
ತುಕಾರಂ ಸ್ಪರ್ಧೆಯಿಂದ ಬಳ್ಳಾರಿ ಚುನಾವಣಾ ಕಣ ರಂಗೇರಿದ್ದು, ಮಾಜಿ ಸಚಿವ ಬಿ.ಶ್ರೀರಾಮು ಅವರಿಗೆ ಕಠಿಣ ಸವಾಲು ಎದುರಾಗಿದೆ.
ಚಿಕ್ಕಬಳ್ಳಾಪುರ
ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯರೂ ಆದ ಎಂ.ಆರ್.ಸೀತಾರಾಂ ಅವರ ಪುತ್ರ ರಕ್ಷಾ ರಾಮಯ್ಯ ಅವರನ್ನು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಕಾಂಗ್ರೆಸ್ ಹೈಕಮಾಂಡ್ ಘೋಷಣೆ ಮಾಡಿದೆ.
ಬಲಿಜ ಸಮುದಾಯಕ್ಕೆ ಸೇರಿದ ರಕ್ಷಾ ರಾಮಯ್ಯ ಅವರು, ಕರ್ನಾಟಕ ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಅವರು ಅಖಿಲ ಭಾರತ ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಚಿಕ್ಕಬಳ್ಳಾಪುರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ರಕ್ಷಾ ರಾಮಯ್ಯ, ಬಿಜೆಪಿಯ ಸುಧಾಕರ್ ವಿರುದ್ಧ ಕಣಕ್ಕಿಲಿಯಲಿದ್ದಾರೆ.
ರಾಜ್ಯದ ಬಹುತೇಕ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಹೆಸರು ಘೋ಼ಣೆಯಾಗಿದ್ದು, ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಮಾತ್ರ ಕಗ್ಗಂಟಾಗಿ ಉಳಿದಿದೆ.