ಸಂವಿಧಾನ ಬದಲಾವಣೆ ಬಿಜೆಪಿಯ ಗುಪ್ತ ಗ್ಯಾರಂಟಿಯೆ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
‘ಹೊಸ ಸಂವಿಧಾನ ಹೊಂದಲು ಬಿಜೆಪಿಗೆ ಮೂರನೇ ಎರಡು ಬಹುಮತ ಬೇಕಾಗುತ್ತದೆ’ ಎಂಬ ವಿವಾದಾತ್ಮಕ, ಪ್ರಜಾಸತ್ತೆ ವಿರೋಧಿ ಹೇಳಿಕೆಯನ್ನು ಬಿಜೆಪಿ ಸಂಸದರೊಬ್ಬರು ನೀಡಿದ್ದಾರೆ. ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರವೊಂದರಲ್ಲಿ ಭಾಗವಹಿಸಿದ ಸಂಸದ ಲಲ್ಲು ಸಿಂಗ್ ‘‘ ಲೋಕಸಭೆಯಲ್ಲಿ 272 ಸಂಸದರಿದ್ದರೆ ಸರಕಾರ ರಚಿಸಬಹುದು. ಆದರೆ ಸಂವಿಧಾನ ಬದಲಾಯಿಸಲು ನಮಗೆ ಮೂರನೇ ಎರಡಕ್ಕಿಂತಲೂ ಅಧಿಕ ಬಹುಮತದ ಅಗತ್ಯವಿದೆ’’ ಎಂದು ಹೇಳುವ ವೀಡಿಯೊ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹೇಳಿಕೆಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ, ತಮ್ಮ ಮಾತುಗಳನ್ನು ತಿದ್ದಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ‘‘ನಾನೊಬ್ಬ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರೆಸ್ಸೆಸ್)ದ ಕಾರ್ಯಕರ್ತ. ದೇಶದ ಏಳಿಗೆಯನ್ನು ಗಮನದಲ್ಲಿಟ್ಟುಕೊಂಡು ಇಂತಹ ಮಾತುಗಳನ್ನು ಆಡಿ ನನಗೆ ಅಭ್ಯಾಸವಾಗಿದೆ. ಬಾಯ್ತಪ್ಪಿನಿಂದ ಹೇಳಿಕೆ ನೀಡಿದ್ದೇನೆ’’ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗಷ್ಟೇ ಪ್ರಧಾನಿ ಮೋದಿಯವರು ‘‘ಅಧಿಕಾರಕ್ಕೆ ಮರಳಿದರೆ ಸಂವಿಧಾನವನ್ನು ಬದಲಿಸಲಾಗುತ್ತದೆ ಎಂಬ ಸುಳ್ಳನ್ನು ಪ್ರತಿಪಕ್ಷ ಹರಡುತ್ತಿದೆ. ಸ್ವತಃ ಅಂಬೇಡ್ಕರ್ ಮರಳಿ ಬಂದರೂ ಸಂವಿಧಾನವನ್ನು ಬದಲಿಸಲು ಸಾಧ್ಯವಿಲ್ಲ’’ ಎಂದು ಹೇಳಿದ್ದರು. ಅದರ ಬೆನ್ನಿಗೇ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಸಂಸದ ಲಲ್ಲು ಸಿಂಗ್ ಸಂವಿಧಾನ ಬದಲಿಸುವ ಮಾತುಗಳನ್ನು ಆಡಿದ್ದಾರೆ.
ಬಿಜೆಪಿಯೊಳಗಿಂದ ಸಂವಿಧಾನ ಬದಲಿಸುವ ಮಾತುಗಳು ಬರುತ್ತಿರುವುದು ಇದೇ ಮೊದಲೇನೂ ಅಲ್ಲ. ಕರ್ನಾಟಕದ ಸಂಸದ ಅನಂತಕುಮಾರ್ ಹೆಗಡೆ ಅವರು ‘ಸಂವಿಧಾನ ಬದಲಿಸುವ’ ಬಗ್ಗೆ ಮಾತನಾಡಿ ಅದನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದರು. ಬಿಜೆಪಿ ಮುಖಂಡ ಈಶ್ವರಪ್ಪ ಕೂಡ ಇದೇ ಧ್ವನಿಯಲ್ಲಿ ಹಲವು ವೇದಿಕೆಗಳಲ್ಲಿ ಹೇಳಿಕೆಗಳನ್ನು ನೀಡಿದ್ದರು. ಬಿಜೆಪಿಯೊಳಗಿರುವ ಹತ್ತು ಹಲವು ನಾಯಕರು ಸಾರ್ವಜನಿಕ ವೇದಿಕೆಗಳಲ್ಲೇ ‘ಹಿಂದೂ ರಾಷ್ಟ್ರ’ವನ್ನು ಬೆಂಬಲಿಸಿ ಮಾತನಾಡಿದ್ದಾರೆ. ಹಿಂದೂ ರಾಷ್ಟ್ರ ಮತ್ತು ಭಾರತದ ಸಂವಿಧಾನ ಜೊತೆ ಜೊತೆಯಾಗಿ ಸಾಗಲು ಸಾಧ್ಯವಿಲ್ಲ . ದೇಶವನ್ನು ಹಿಂದೂರಾಷ್ಟ್ರವಾಗಿಸುವುದು ಎಂದರೆ ಈ ದೇಶದ ಸಂವಿಧಾನವನ್ನು ಬದಲಿಸುವುದು ಮತ್ತು ಆ ಜಾಗಕ್ಕೆ ಮನುಸಂವಿಧಾನವನ್ನು ತಂದು ಕೂರಿಸುವುದು ಎಂದೇ ಅರ್ಥ. ಇಷ್ಟಕ್ಕೂ ಆರೆಸ್ಸೆಸ್ನ ಗುರಿ ಸಂವಿಧಾನ ಬದಲಿಸುವುದಾಗಿದೆ ಎನ್ನುವುದು ಸಂಸದ ಲಲ್ಲು ಸಿಂಗ್ ಅವರ ಹೇಳಿಕೆಯಿಂದ ವ್ಯಕ್ತವಾಗುತ್ತದೆ. ‘ಆರೆಸ್ಸೆಸ್ ಕಾರ್ಯಕರ್ತನಾಗಿರುವುದರಿಂದ ಸಂವಿಧಾನ ಬದಲಾವಣೆಯ ಮಾತು ಬಾಯ್ತಪ್ಪಿ ಬಂದು ಬಿಟ್ಟಿದೆ’ ಎಂದಿರುವ ಲಲ್ಲು ಸಿಂಗ್, ಆರೆಸ್ಸೆಸ್ ಸಂವಿಧಾನ ಬದಲಿಸಲು ಹೊಂಚಿ ಹಾಕಿ ಕೂತಿದೆ ಎನ್ನುವುದನ್ನು ಈ ಮೂಲಕ ದೇಶಕ್ಕೆ ತಿಳಿಸಿದ್ದಾರೆ. ಆರೆಸ್ಸೆಸ್-ಬಿಜೆಪಿ ನಡುವೆ
ತಾಯಿ-ಮಗನ ಸಂಬಂಧವಿದೆ. ಸ್ವತಃ ಪ್ರಧಾನಿ ಮೋದಿಯವರೇ ತಮ್ಮನ್ನು
‘ಆರೆಸ್ಸೆಸ್ ಕಾರ್ಯಕರ್ತ’ ಎಂದು ಹಿಂದೆ ಹಲವು ಹೇಳಿಕೆಗಳಲ್ಲಿ ಕರೆದುಕೊಂಡಿದ್ದಾರೆ. ಆರೆಸ್ಸೆಸ್ ಕಾರ್ಯಕ್ರಮದಲ್ಲಿ, ಬೈಠಕ್ಗಳಲ್ಲಿ ಬಿಜೆಪಿ ನಾಯಕರು ಕಡ್ಡಾಯವಾಗಿ ಪಾಲುಗೊಳ್ಳುತ್ತಾರೆ ಮಾತ್ರವಲ್ಲ, ‘ನಾವು ಆರೆಸ್ಸೆಸ್ ಹಿನ್ನೆಲೆಯಿಂದ ಬಂದವರು’ ಎನ್ನುವುದನ್ನು ಹೆಗ್ಗಳಿಕೆಯಾಗಿ ಹೇಳಿಕೊಳ್ಳುತ್ತಾರೆ. ಆರೆಸ್ಸೆಸ್ನ ರಾಜಕೀಯ ಮುಖವೇ ಬಿಜೆಪಿಯಾಗಿದೆ. ಆರೆಸ್ಸೆಸ್ನಲ್ಲಿ ಸಂವಿಧಾನ ಬದಲಾವಣೆಯ ಬಗ್ಗೆ ಮಾತನಾಡುವುದು ಸಾಮಾನ್ಯವಾದರೆ, ಅದು ಪರೋಕ್ಷವಾಗಿ ಬಿಜೆಪಿಯ ಧೋರಣೆಯೂ ಹೌದು ಎನ್ನುವುದರಲ್ಲಿ ಎರಡುಮಾತಿಲ್ಲ.
ಸಂವಿಧಾನದ ಬಗ್ಗೆ ಮೊತ್ತ ಮೊದಲು ಆರೆಸ್ಸೆಸ್ ತನ್ನ ನಿಲುವನ್ನು ದೇಶಕ್ಕೆ ಸ್ಪಷ್ಟಪಡಿಸಬೇಕು. ರಾಷ್ಟ್ರಧ್ವಜದ ಬಗ್ಗೆ ಇತ್ತೀಚಿನವರೆಗೂ ಆರೆಸ್ಸೆಸ್ ಭಿನ್ನಮತವನ್ನು ಹೊಂದಿತ್ತು. 2001 ಜನವರಿ 26ರಂದು ರಾಷ್ಟ್ರಪ್ರೇಮಿ ಯುವದಳದ ಕಾರ್ಯಕರ್ತರೆಂದು ಕರೆಸಿಕೊಂಡ ಮೂವರು ಯುವಕರು ನಾಗಪುರ ಕಚೇರಿಗೆ ತೆರಳಿ, ಅಲ್ಲಿ ಬಲವಂತದಿಂದ ರಾಷ್ಟ್ರಧ್ವಜವನ್ನು ಹಾರಿಸಿದರು. ಅದಕ್ಕಾಗಿ ಅವರ ಮೇಲೆ ಆರೆಸ್ಸೆಸ್ ಮೊಕದ್ದಮೆಯನ್ನು ದಾಖಲಿಸಿತು. 2013ರಲ್ಲಿ ಈ ಪ್ರಕರಣದಿಂದ ಆರೋಪಿಗಳನ್ನು ದೋಷಮುಕ್ತಗೊಳಿಸಲಾಯಿತು. ರಾಷ್ಟ್ರಧ್ವಜದ ಮೇಲೆ ತನಗೆ ಯಾಕೆ ಅಸಹನೆಯಿದೆ ಮತ್ತು ಅದು ರಾಷ್ಟ್ರಧ್ವಜದ ಬದಲಿಗೆ ಏನನ್ನು ಹಾರಿಸಲು ಬಯಸುತ್ತಿದೆ ಎನ್ನುವುದನ್ನು ಆರೆಸ್ಸೆಸ್ ಗುಟ್ಟಾಗಿಯೇನೂ
ಇಟ್ಟಿಲ್ಲ. ಸಂದರ್ಭ ಬಂದಾಗಲೆಲ್ಲ ಅದು ತನ್ನ ಮನದಿಂಗಿತವನ್ನು ವ್ಯಕ್ತಪಡಿಸುತ್ತಲೇ ಬಂದಿದೆ. ಸಂವಿಧಾನದ ಬಗ್ಗೆ ನೇರವಾಗಿ ಮಾತನಾಡಲು ಧೈರ್ಯವಿಲ್ಲದ ಕಾರಣದಿಂದ, ಹಿಂದೂ ರಾಷ್ಟ್ರದ ಬಗ್ಗೆ ತನ್ನ ಒಲವನ್ನು ಹಂಚಿಕೊಳ್ಳುತ್ತಾ ಬಂದಿದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದಾಗ, ಆರೆಸ್ಸೆಸ್ನ ಹಿರಿಯರು ಸಂವಿಧಾನದ ಕುರಿತಂತೆ, ರಾಷ್ಟ್ರಧ್ವಜದ ಬಗ್ಗೆ ಎಷ್ಟು ಕೀಳಾಗಿ ಮಾತನಾಡಿದ್ದರು ಎನ್ನುವುದು ಹಲವು ಕೃತಿಗಳಲ್ಲಿ ದಾಖಲಾಗಿವೆ. ಆರೆಸ್ಸೆಸ್ನ ಹಿರಿಯರು ಈ ದೇಶದ ಜಾತಿ ಅಸಮಾನತೆಯನ್ನು ಸಮರ್ಥಿಸಿ ಮಾತನಾಡಿದ್ದಾರೆ. ಅದನ್ನು ಹಿಂದೂ ಧರ್ಮದ ಹೆಗ್ಗಳಿಕೆಯೆಂದು ಘೋಷಿಸಿದ್ದಾರೆ. ಮನು ಮಹರ್ಷಿಯ ನೀತಿ ಸಂಹಿತೆಗಳನ್ನು ಆರೆಸ್ಸೆಸ್ ಅಳವಡಿಸಿಕೊಂಡಿದೆ. ಆದುದರಿಂದಲೇ, ಆರೆಸ್ಸೆಸ್ನ ಸಂಚಾಲಕರಾಗಿ ದಲಿತರು, ತಳಸ್ತರದ ಶೂದ್ರ ನಾಯಕರು ಆಯ್ಕೆಯಾಗುವುದಿಲ್ಲ. ಅವರ ಸಂವಿಧಾನದಲ್ಲಿ ಅದಕ್ಕೆ ಅವಕಾಶವಿಲ್ಲ. ಇಂದಿಗೂ ಬಿಜೆಪಿಯ ಸಾಂಸ್ಕೃತಿಕ ನೀತಿಗಳನ್ನು ನಿಯಂತ್ರಿಸುವುದು ಆರೆಸ್ಸೆಸ್. ಎಲ್ಲಿಯವರೆಗೆ ಆರೆಸ್ಸೆಸ್ ಸಂವಿಧಾನವನ್ನು ಗೌರವಿಸುವುದಿಲ್ಲವೋ, ಅಲ್ಲಿಯವರೆಗೆ ಬಿಜೆಪಿಯೊಳಗಿರುವ ಯಾವುದೇ ವ್ಯಕ್ತಿ ಸಂವಿಧಾನದ ಬಗ್ಗೆ ಆಳದಲ್ಲಿ ಗೌರವವನ್ನು ಹೊಂದಿರುತ್ತಾನೆ ಎಂದು ನಂಬುವುದು ಕಷ್ಟ. ಒಳಗೆ ಬಚ್ಚಿಟ್ಟುಕೊಂಡ ಸಂವಿಧಾನ ಬದಲಾವಣೆಯ ಆಸೆ, ಆಗಾಗ ಲಲ್ಲುಸಿಂಗ್ರಂತಹ ನಾಯಕರಿಂದ ‘ಬಾಯ್ತಪ್ಪಿ’ ಹೊರಬೀಳುತ್ತದೆ.
ಈ ದೇಶದಲ್ಲಿ ಸಂವಿಧಾನ ಬದಲಾವಣೆಗೆ ಬೇಕಾದಷ್ಟು ಜನಬೆಂಬಲ ದೊರಕಿದ್ದೇ ಆದರೆ ಆರೆಸ್ಸೆಸ್ ಖಂಡಿತವಾಗಿಯೂ ಬಿಜೆಪಿಯ ಮೂಲಕ ಸಂವಿಧಾನವನ್ನು ಬದಲಿಸುತ್ತದೆ. ಸಂವಿಧಾನ ಈ ದೇಶದ ದಲಿತರಿಗೆ, ಶೂದ್ರರಿಗೆ ವಿದ್ಯೆಯ ಹಕ್ಕನ್ನು ಕೊಟ್ಟಿದೆ. ಅವರನ್ನು ಸಾಮಾಜಿಕವಾಗಿ ಮೇಲೆತ್ತುವುದಕ್ಕಾಗಿ ಮೀಸಲಾತಿಯನ್ನು ಕೂಡ ನೀಡಿರುವುದು ಸಂವಿಧಾನ. ಆದರೆ ಇಂದು ಅಡ್ಡದಾರಿಯಲ್ಲಿ ಸಂವಿಧಾನ ನೀಡಿರುವ ಒಂದೊಂದೇ ಹಕ್ಕುಗಳನ್ನು ಬಿಜೆಪಿ ನೇತೃತ್ವದ ಸರಕಾರ ಕಿತ್ತುಕೊಳ್ಳುತ್ತಿದೆ. ಶೋಷಿತ ಸಮುದಾಯವನ್ನು ಸಾಮಾಜಿಕವಾಗಿ ಮೇಲೆತ್ತುವುದಕ್ಕಾಗಿ ನೀಡಿದ ಮೀಸಲಾತಿಯನ್ನು, ಮೇಲ್ಜಾತಿಗಳಿಗೂ ಹಂಚಿ ಅದರ ಉದ್ದೇಶವನ್ನೇ ಬುಡಮೇಲುಗೊಳಿಸಲಾಗಿದೆ. ಸಂವಿಧಾನವನ್ನು ಬದಲಾಯಿಸಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕಾಗಿಯೇ ಸರಕಾರಿ ಶಾಲೆಗಳನ್ನು ಬೇರೆ ಬೇರೆ ನೆಪಗಳನ್ನು ಒಡ್ಡಿ ಮುಚ್ಚಿ ಆ ಮೂಲಕ ಬಡವರಿಗೆ ಶಿಕ್ಷಣದ ಹಕ್ಕನ್ನು ನಿರಾಕರಿಸಲಾಗುತ್ತಿದೆ. ಸರಕಾರಿ ಆಸ್ಪತ್ರೆಗಳನ್ನು
ಖಾಸಗಿಯವರಿಗೆ ಕೊಟ್ಟು ಆರೋಗ್ಯದ ಹಕ್ಕುಗಳನ್ನು ನಿರಾಕರಿಸಲಾಗುತ್ತಿದೆ.
ಬಾಬಾ ರಾಮ್ದೇವ್ನಂತಹ ಕಾವಿಧಾರಿಗೆ ಆರೋಗ್ಯದ ಹೆಸರಿನಲ್ಲಿ ಹಣವನ್ನು ಸುರಿಯಲಾಗುತ್ತಿದೆ. ಅಷ್ಟೇ ಏಕೆ, ರಾಜಸ್ಥಾನದಲ್ಲಿ ಹೈಕೋರ್ಟ್ ಆವರಣದಲ್ಲೇ ಮನು ಮಹರ್ಷಿಯ ಪ್ರತಿಮೆಯನ್ನು ನಿಲ್ಲಿಸಲಾಗಿದೆ. ನ್ಯಾಯಾಲಯದ ಒಳಗೆ ತನ್ನ ನೀತಿಸಂಹಿತೆಗಳ ಜೊತೆಗೆ ನುಗ್ಗಲು ಸಮಯ, ಸಂದರ್ಭವನ್ನು ಕಾಯುತ್ತಿರುವಂತೆ ನಿಂತಿದೆ ಆ ಪ್ರತಿಮೆ. ಸಂಸತ್ನಲ್ಲಿ ವೈದಿಕ ಆಚರಣೆಗಳನ್ನು ಮಾಡಿ ಸಂವಿಧಾನವನ್ನು ಅವಮಾನಿಸಲಾಗುತ್ತಿದೆ. ಇವೆೆಲ್ಲವೂ ಸಂವಿಧಾನವನ್ನು ಬದಲಾಯಿಸಲು ಸಾಧ್ಯವಾಗದ ಕಾರಣಕ್ಕೆ ಬಿಜೆಪಿ ಮಾಡುತ್ತಿರುವ ಹತಾಶೆಯ ಕೃತ್ಯಗಳು.
ಅಂಬೇಡ್ಕರ್ ಬಂದು ಹೇಳಿದರೂ ಸಂವಿಧಾನವನ್ನು ಬದಲಾಯಿಸುವುದಿಲ್ಲ ಎನ್ನುವ ಪ್ರಧಾನಿ ಮೋದಿಯವರ ಹೇಳಿಕೆಯಲ್ಲೇ ವ್ಯಂಗ್ಯವಿದೆ. ಅಂಬೇಡ್ಕರ್ ಬಂದು
ಸಂವಿಧಾನವನ್ನು ಬದಲಾಯಿಸಿ ಎಂದು ಯಾವತ್ತೂ ಹೇಳಲಾರರು ಎನ್ನುವುದು ಅವರಿಗೆ ಗೊತ್ತಿದೆ. ಆದರೆ ಆರೆಸ್ಸೆಸ್ ಸಂವಿಧಾನ ಬದಲಾವಣೆಯ ಬಗ್ಗೆ ಹೇಳುತ್ತಲೇ ಇದೆ.
ಸೂಕ್ತ ಬೆಂಬಲ ದೊರಕಿದಾಗ ಅದು ಸಂವಿಧಾನವನ್ನು ಬದಲಾಯಿಸಲು ಸರಕಾರ ದೊಳಗಿರುವವರಿಗೆ ನಿರ್ದೇಶವನ್ನೂ ನೀಡಲಿದೆ. ಆದುದರಿಂದ ಪ್ರಧಾನಿ ಮೋದಿಯವರು ‘‘ಆರೆಸ್ಸೆಸ್ ಹೇಳಿದರೂ ಸಂವಿಧಾನವನ್ನು ಬದಲಾಯಿಸಲು ಸಾಧ್ಯವಿಲ್ಲ’’ ಎಂದು ಘಂಟಾಘೋಷವಾಗಿ ಹೇಳಿ, ಸಂವಿಧಾನದ ಮೇಲಿರುವ ಗೌರವವನ್ನು ದೇಶಕ್ಕೆ ಸಾಬೀತು ಮಾಡಬೇಕಾಗಿದೆ ಮತ್ತು ಆ ಮೂಲಕ, ಬಿಜೆಪಿಯೊಳಗಿರುವ ಎಲ್ಲ ನಾಯಕರಿಗೂ ಸಂವಿಧಾನದ ವಿರುದ್ಧ ಮಾತನಾಡಿದರೆ ಸುಮ್ಮನಿರುವುದಿಲ್ಲ ಎನ್ನುವ ಎಚ್ಚರಿಕೆಯನ್ನು ನೀಡಬೇಕು.