ಅನುಭವವೇ ಇಲ್ಲದ ಅದಾನಿ ಗುಂಪಿಗೆ ಭಾರತಮಾಲಾ ರಾಷ್ಟ್ರೀಯ ಹೆದ್ದಾರಿ ಯೋಜನೆಯ ಗುತ್ತಿಗೆ!
ಹೊಸದಿಲ್ಲಿ: ಕೇಂದ್ರ ಸರಕಾರದ ‘ಭಾರತಮಾಲಾ ಪರಿಯೋಜನಾ’ದ ಮೊದಲ ಹಂತದಡಿ ಅದಾನಿ ಟ್ರಾನ್ಸ್ಪೋರ್ಟ್ ನೇತೃತ್ವದ ಕನಿಷ್ಠ ಒಂದು ಒಕ್ಕೂಟ, ಬಿಜೆಪಿಯೊಂದಿಗೆ ನಂಟು ಹೊಂದಿರುವ ಒಂದು ಕಂಪನಿ ಮತ್ತು ಬಿಜೆಪಿಗೆ ದೇಣಿಗೆಗಳನ್ನು ನೀಡಿರುವ ನಾಲ್ಕು ಕಂಪನಿಗಳಿಗೆ ರಸ್ತೆ ನಿರ್ಮಾಣ ಯೋಜನೆಗಳ ಗುತ್ತಿಗೆಗಳನ್ನು ನೀಡಲಾಗಿದೆ. ಮಹಾಲೇಖಪಾಲ (ಸಿಎಜಿ)ರ ಇತ್ತೀಚಿನ ವರದಿಯು ಈ ಎಲ್ಲ ಕಂಪನಿಗಳಿಗೆ ಗುತ್ತಿಗೆ ನೀಡಿಕೆಗಳಲ್ಲಿಯ ಅಕ್ರಮಗಳನ್ನು ಬಯಲಿಗೆಳೆದಿದೆ.
ಉದಾಹರಣೆಗೆ ಸೂರ್ಯಪೇಟ್ ಖಮ್ಮಮ್ ರೋಡ್ ಪ್ರೈವೇಟ್ ಲಿ. ಅದಾನಿ ಟ್ರಾನ್ಸ್ಪೋರ್ಟ್ ನೇತೃತ್ವದ ಒಕ್ಕೂಟವಾಗಿದ್ದು, ಅದಕ್ಕೆ ತೆಲಂಗಾಣದ ಸೂರ್ಯಪೇಟ್ ಮತ್ತು ಖಮ್ಮಮ್ ನಡುವೆ ಚತುಷ್ಪಥ ರಾ.ಹೆ.ನಿರ್ಮಾಣದ ಗುತ್ತಿಗೆಯನ್ನು ನೀಡಲಾಗಿದೆ. ಹೆದ್ದಾರಿ ಕ್ಷೇತ್ರದಲ್ಲಿ ನಿರ್ಮಾಣ ಕಾಮಗಾರಿಯ ಅನುಭವವನ್ನು ಹೊಂದಿರಬೇಕು ಎಂಬ ಅಗತ್ಯ ಷರತ್ತನ್ನು ಕಂಪನಿಯು ಪೂರೈಸಿಲ್ಲ ಎನ್ನುವುದನ್ನು ಸಿಎಜಿ ವರದಿಯು ಬೆಟ್ಟು ಮಾಡಿದೆ.
ಬಿಜೆಪಿ ನಾಯಕ ನವೀನ ಜೈನ್ ಪ್ರವರ್ತನೆಯ ಪಿಎನ್ಆರ್ ಇನ್ಫೋಟೆಕ್ಗೆ ಆಗಸ್ಟ್ 2019ರಲ್ಲಿ ಲಕ್ನೋ ರಿಂಗ್ ರೋಡ್ ನಿರ್ಮಾಣ ಯೋಜನೆಯ ಪ್ಯಾಕೇಜ್ 1ರ ಗುತ್ತಿಗೆಯನ್ನು ನೀಡಲಾಗಿತ್ತು. ಮೂಲ ಅಂದಾಜಿನ ಶೇ.17.44ರಷ್ಟು ಹೆಚ್ಚಿನ ಮೊತ್ತಕ್ಕೆ ಕಂಪನಿಯು ಈ ಗುತ್ತಿಗೆಯನ್ನು ಪಡೆದುಕೊಂಡಿತ್ತು. ಬಿಡ್ ವೆಚ್ಚವು ಪರಿಷ್ಕೃತ ಅಂದಾಜುಗಳಿಗಿಂತಲೂ ಶೇ.2.02ರಷ್ಟು ಹೆಚ್ಚಾಗಿತ್ತು. ಆ ಸಮಯದಲ್ಲಿ ಜೈನ್ ಆಗ್ರಾದ ಮೇಯರ್ ಆಗಿದ್ದರು.
ಇದೇ ರೀತಿ ಸಿಎಜಿ ವರದಿಯು ಐ ಆರ್ ಬಿ ಇನ್ಫ್ರಾಸ್ಟ್ರಕ್ಚರ್ ಡೆವಲಪರ್ಸ್, ಜೆ.ಕುಮಾರ ಇನ್ಫ್ರಾಪ್ರಾಜೆಕ್ಟ್ಸ್, ಲಾರ್ಸೆನ್ ಆ್ಯಂಡ್ ಟುಬ್ರೋ ಮತ್ತು ಎಂಕೆಸಿ ಇನ್ಫ್ರಾಸ್ಟ್ರಕ್ಚರ್ ಲಿ.ಗೆ ನೀಡಿದ ಗುತ್ತಿಗೆಗಳಲ್ಲಿ ಅಕ್ರಮಗಳನ್ನು ದಾಖಲಿಸಿದೆ. ಈ ನಾಲ್ಕೂ ಕಂಪನಿಗಳು 2013 ಮತ್ತು 2021ರ ನಡುವೆ ಬಿಜೆಪಿಗೆ 77 ಕೋ.ರೂ.ಗೂ ಅಧಿಕ ದೇಣಿಗೆಗಳನ್ನು ನೀಡಿದ್ದವು.
ಸುದ್ದಿ ಜಾಲತಾಣ thenewsminute.com ಸಿಎಜಿ ವರದಿಯನ್ನು ವಿಶ್ಲೇಷಿಸಿ ತನ್ನದೇ ಆದ ತನಿಖಾ ವರದಿಯನ್ನು ಪ್ರಕಟಿಸಿದೆ. ಅದರ ಸಾರಾಂಶವಿಲ್ಲಿದೆ:
ಅದಾನಿ ಟ್ರಾನ್ಸ್ಪೋರ್ಟ್ ಒಕ್ಕೂಟ
ಸಿಎಜಿ ವರದಿಯ ಪ್ರಕಾರ, ಸೂರ್ಯಪೇಟ್ ಖಮ್ಮಮ್ ರೋಡ್ ಪ್ರೈವೇಟ್ ಲಿ.ನ ಲೀಡ್ ಮೆಂಬರ್ (ಅಗ್ರಣಿ ಸದಸ್ಯ) ‘ಬೇರೆ ಕಂಪನಿ’ಯ ಅನುಭವ ಪ್ರಮಾಣಪತ್ರವನ್ನು ಸಲ್ಲಿಸಿದ್ದು, ಈ ‘ಬೇರೆ ಕಂಪನಿ’ಯು ಹೆದ್ದಾರಿ ನಿರ್ಮಾಣ ಕ್ಷೇತ್ರದಲ್ಲಿ ಕೆಲಸವನ್ನೇ ಮಾಡಿರಲಿಲ್ಲ, ಅದು ವಿದ್ಯುತ್ ಕ್ಷೇತ್ರದಲ್ಲಿ ಕೆಲಸ ಮಾಡಿತ್ತು.
ಜೊತೆಗೆ ಅದರ ನಿವ್ವಳ ಮೌಲ್ಯ (ಇದು 304.33 ಕೋ.ರೂ.ಇರುವುದು ಅಗತ್ಯವಾಗಿತ್ತು)ದ ಕುರಿತು ಲೀಡ್ ಮೆಂಬರ್ ನ ಲೆಕ್ಕ ಪರಿಶೋಧಕರ ಪ್ರಮಾಣ ಪತ್ರ ಥರ್ಡ್ ಪಾರ್ಟಿಯ ಹೆಸರಿನಲ್ಲಿತ್ತು.
ಒಕ್ಕೂಟದಲ್ಲಿ ಶೇ.74ರಷ್ಟು ಸಿಂಹಪಾಲನ್ನು ಹೊಂದಿರುವ ಅದಾನಿ ಸಂಸ್ಥೆಯು ಹೆದ್ದಾರಿ ಕ್ಷೇತ್ರದಲ್ಲಿ ನಿರ್ಮಾಣ ಕಾಮಗಾರಿಯ ಐದು ವರ್ಷಗಳ ಅನುಭವಕ್ಕೆ ಸಂಬಂಧಿಸಿದ ರಿಕ್ವೆಸ್ಟ್ ಫಾರ್ ಪ್ರಪೋಸಲ್ ಷರತ್ತನ್ನು ಪೂರೈಸಿರಲಿಲ್ಲ. ಬಿಡ್ ದಾರರು ಸಲ್ಲಿಸಿರುವ ಕಾಮಗಾರಿಗಳ ಪಟ್ಟಿಯಂತೆ ಕಂಪನಿಯು ಎಂದಿಗೂ ನೇರವಾಗಿ ಅಥವಾ ಪರೋಕ್ಷವಾಗಿ ನಿರ್ಮಾಣ ಕಾಮಗಾರಿಗಳನ್ನು ನಿರ್ವಹಿಸಿರಲಿಲ್ಲ. ಆದಾಗ್ಯೂ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ)ವು ದಾಖಲೆಯಲ್ಲಿ ಯಾವುದೇ ಕಾರಣವನ್ನು ತೋರಿಸದೆ 1,566.30 ಕೋಟಿ ರೂ.ವೆಚ್ಚದ ಯೋಜನೆಯ ಗುತ್ತಿಗೆ ಪಡೆಯಲು ಬಿಡ್ ದಾರರು ತಾಂತ್ರಿಕವಾಗಿ ಅರ್ಹರಾಗಿದ್ದಾರೆ ಎಂದು ಘೋಷಿಸಿತ್ತು.
ಸಿಎಜಿ ವರದಿಯಲ್ಲಿನ ಆರೋಪಗಳನ್ನು ಅದಾನಿ ಗ್ರೂಪ್ ನ ವಕ್ತಾರರು ಅಲ್ಲಗಳೆದಿದ್ದಾರೆ.
ಬಿಜೆಪಿ ನಾಯಕನಿಗೆ ಸಂಬಂಧಿಸಿದ ಕಂಪನಿ
2019, ಮಾ.7ರಂದು ಅಂದಾಜು 904.31 ಕೋ.ರೂ.ವೆಚ್ಚದ ಲಕ್ನೋ ರಿಂಗ್ ರೋಡ್ ನ ಪ್ಯಾಕೇಜ್ 1ಕ್ಕಾಗಿ ಟೆಂಡರ್ಗಳನ್ನು ಕರೆಯಲಾಗಿತ್ತು. ವಿಚಿತ್ರವೆಂದರೆ ಪಿಎನ್ಸಿ ಇನ್ಫೋಟೆಕ್ಗೆ 1,062 ಕೋ.ರೂ.ಗೆ,ಮೂಲ ಅಂದಾಜಿಗಿಂತ ಶೇ.17.44ರಷ್ಟು ಅಧಿಕ ಮೊತ್ತಕ್ಕೆ ಯೋಜನೆಯ ಗುತ್ತಿಗೆಯನ್ನು ನೀಡಲಾಗಿತ್ತು. ಎನ್ಎಚ್ಎಐ ಮೂಲ ಅಂದಾಜುಗಳು 2016-17ರ ನಿಗದಿತ ದರಗಳನ್ನು ಆಧರಿಸಿದ್ದವು. 2019ರಲ್ಲಿಯ ದರಗಳ ಆಧಾರದಲ್ಲಿ ಯೋಜನೆಯ ಮೂಲ ಅಂದಾಜನ್ನು ಪರಿಷ್ಕರಿಸಲಾಗಿತ್ತು. ಬಿಜೆಪಿ ನಾಯಕ ನವೀನ ಜೈನರ ಕಂಪನಿಯು ಸಲ್ಲಿಸಿದ್ದ ಬಿಡ್ ಮೊತ್ತವು ಇದಕ್ಕಿಂತಲೂ ಶೇ.2.02ರಷ್ಟು ಅಧಿಕವಾಗಿತ್ತು. ಐಆರ್ಬಿ ಇನ್ಫ್ರಾಸ್ಟ್ರಕ್ಚರ್
ಶೇ.68ರಷ್ಟು ಕಡಿಮೆ ಪ್ರೀಮಿಯಮ್ನಲ್ಲಿ ಹಾಪುರ್ ಬೈಪಾಸ್-ಮೊರಾದಾಬಾದ್ ಹೆದ್ದಾರಿ ಯೋಜನೆಯ ಗುತ್ತಿಗೆಯನ್ನು ಪಡೆದುಕೊಂಡಿದ್ದ ಐಆರ್ಬಿ ಇನ್ಫ್ರಾಸ್ಟ್ರಕ್ಚರ್ ಡೆವಲಪರ್ಸ್ 2013ರಿಂದ ಬಿಜೆಪಿಗೆ 65 ಕೋ.ರೂ.ಗಳ ದೇಣಿಗೆಯನ್ನು ನೀಡಿದೆ.
ಎನ್ಎಚ್ಎಐ 97.77 ಕೋ.ರೂ.ಗಳ ನಿರೀಕ್ಷಿತ ವಾರ್ಷಿಕ ಪ್ರೀಮಿಯಂ ಮತ್ತು 22 ವರ್ಷಗಳ ರಿಯಾಯಿತಿ ಅವಧಿಯೊಂದಿಗೆ ಯೋಜನೆಗೆ ಬಿಡ್ಗಳನ್ನು ಆಹ್ವಾನಿಸಿತ್ತು. ಆದರೆ 2018,ಮಾರ್ಚ್ನಲ್ಲಿ ವಾರ್ಷಿಕ ಕೇವಲ 31.50 ಕೋ.ರೂ.ಗಳ ಪ್ರೀಮಿಯಮ್ನಲ್ಲಿ ಐಆರ್ಬಿ ಇನ್ಫ್ರಾಸ್ಟ್ರಕ್ಚರ್ನ ಬಿಡ್ನ್ನು ಅದು ಒಪ್ಪಿಕೊಂಡಿತ್ತು.
2013ರಿಂದೀಚಿಗೆ ಜೆ.ಕುಮಾರ್ ಇನ್ಫ್ರಾಪ್ರಾಜೆಕ್ಟ್ಸ್6.45 ಕೋ.ರೂ.,ಲಾರ್ಸೆನ್ ಆ್ಯಂಡ್ ಟುಬ್ರೋ ಐದು ಕೋ.ರೂ.,ಎಂಕೆಸಿ ಇನ್ಫ್ರಾಸ್ಟ್ರಕ್ಚರ್ಸ್ 75 ಲ.ರೂ.ಗಳ ದೇಣಿಗೆಗಳನ್ನು ಬಿಜೆಪಿಗೆ ನೀಡಿದ್ದವು. ಈ ಕಂಪನಿಗಳಿಗೆ ನೀಡಿದ ನಿರ್ಮಾಣ ಯೋಜನೆ ಗುತ್ತಿಗೆಗಳಲ್ಲೂ ಅಕ್ರಮಗಳನ್ನು ಸಿಎಜಿ ವರದಿ ಬೆಟ್ಟು ಮಾಡಿದೆ.
ಕೃಪೆ: thenewsminute.com