ಕೋವಿಡ್: ಗುಣಮುಖರಾದವರ ಪೈಕಿ ಶೇ.6.5 ಮಂದಿ ಮರುವರ್ಷ ಸಾವು; ಐಸಿಎಂಆರ್ ಅಧ್ಯಯನ

Update: 2023-08-25 14:05 GMT

ಸಾಂದರ್ಭಿಕ ಚಿತ್ರ (PTI) 



ಹೊಸದಿಲ್ಲಿ: ಕೋವಿಡ್ ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದವರ ಪೈಕಿ ಸುಮಾರು ಶೇ.6.5ರಷ್ಟು ಜನರು ಮರು ವರ್ಷ ಮೃತಪಟ್ಟಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ಯು ಇತ್ತೀಚಿಗೆ ಪ್ರಕಟಿಸಿರುವ ಅಧ್ಯಯನ ವರದಿಯು ತಿಳಿಸಿದೆ. ಇದು ವಿಶ್ವಾದ್ಯಂತದ ದತ್ತಾಂಶಗಳಿಗೆ ತುಲನಾತ್ಮಕವಾಗಿದೆ.

► ಅಧ್ಯಯನದ ಪ್ರಮುಖಾಂಶಗಳು

ಅಧ್ಯಯನವು 31 ಆಸ್ಪತ್ರೆಗಳ 14,419 ರೋಗಿಗಳ ಡೇಟಾವನ್ನು ಆಧರಿಸಿದೆ. ಅಧ್ಯಯನವು 2020 ಸೆಪ್ಟೆಂಬರ್‌ನಿಂದ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಗಳನ್ನು ಒಳಗೊಂಡಿದೆ, ಅಂದರೆ ಸೋಂಕುಗಳು ಮೂಲ, ಡೆಲ್ಟಾ ಅಥವಾ ಒಮೈಕ್ರಾನ್ ಕೊರೋನವೈರಸ್ ರೂಪಾಂತರಿಗಳಿಂದ ಉಂಟಾಗಿದ್ದಿರಬಹುದು. ಅಲ್ಲದೆ ಮಧ್ಯಮದಿಂದ ತೀವ್ರ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದವರಲ್ಲಿಯ ಫಲಿತಾಂಶಗಳನ್ನು ಮಾತ್ರ ಅಧ್ಯಯನವು ಪರಿಶೀಲಿಸಿದೆ.

ಸಮೀಕ್ಷೆಯಲ್ಲಿ ಭಾಗಿಯಾಗಿದ್ದ ಶೇ.17.1ರಷ್ಟು ರೋಗಿಗಳು ಜಡತೆ ಮತ್ತು ಉಸಿರಾಟದ ತೊಂದರೆಯಂತಹ ಕೋವಿಡೋತ್ತರ ಸ್ಥಿತಿಗಳು ಹಾಗೂ ಮಿದುಳಿಗೆ ಮಂಕು ಮತ್ತು ಏಕಾಗ್ರತೆಗೆ ತೊಂದರೆಯಂತಹ ಅರಿವಿನ ಅಸಹಜತೆಗಳನ್ನು ಅನುಭವಿಸಿದ್ದರು ಎನ್ನುವುದನ್ನೂ ಅಧ್ಯಯನವು ಕಂಡುಕೊಂಡಿದೆ. ಕೋವಿಡ್ ನಂತರದ ಈ ಸ್ಥಿತಿಗಳನ್ನು ಅನುಭವಿಸಿದ ಜನರು ಸಾಯುವ ಸಾಧ್ಯತೆ ಸುಮಾರು ಮೂರು ಪಟ್ಟು ಹೆಚ್ಚು ಎಂದೂ ವರದಿಯು ಹೇಳಿದೆ.

ಕೋವಿಡ್ ನಂತರದ ಸ್ಥಿತಿಗಳ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಅಥವಾ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರ (ಸಿಡಿಸಿ)ದ ನಿಖರ ವ್ಯಾಖ್ಯಾನವು ರೋಗಿಗಳ ದಾಖಲಾತಿಯ ಬಳಿಕ ಹೊರಬಿದ್ದಿದ್ದರಿಂದ ಅದನ್ನು ಬಳಸಿಕೊಳ್ಳಲಾಗಿಲ್ಲ ಎಂದು ಅಧ್ಯಯನ ವರದಿಯು ತಿಳಿಸಿದೆ. ಐಸಿಎಂಆರ್ ‘ಕೋವಿಡ್ ನಂತರದ ಸ್ಥಿತಿಗಳನ್ನು ’ ನಿರಂತರವಾಗಿ ಅಥವಾ ಹೊಸದಾಗಿ ಆಯಾಸ, ಉಸಿರಾಟದ ತೊಂದರೆ ಅಥವಾ ಅರಿವಿನ ಅಸಹಜತೆಗಳು ಎಂದು ವ್ಯಾಖ್ಯಾನಿಸಿದೆ.

ಸೋಂಕಿಗೆ ಮುನ್ನ ಲಸಿಕೆಯ ಸಿಂಗಲ್ ಡೋಸ್ ಸಹ ಒಂದು ವರ್ಷದ ಅವಧಿಯಲ್ಲಿ ಸಾವುಗಳ ಸಂಖ್ಯೆಯನ್ನು ಶೇ.60ರಷ್ಟು ತಗ್ಗಿಸಿತ್ತು ಎನ್ನುವುದನ್ನೂ ಅಧ್ಯಯನವು ತೋರಿಸಿದೆ.

► ಯಾರು ಸಾವಿನ ಹೆಚ್ಚಿನ ಅಪಾಯ ಹೊಂದಿದ್ದರು?

ಕೋಮಾರ್ಬಿಡಿಟಿ (ರೋಗಿಯಲ್ಲಿ ಏಕಕಾಲಕ್ಕೆ ಎರಡು ಅಥವಾ ಹೆಚ್ಚಿನ ರೋಗಗಳ ಉಪಸ್ಥಿತಿ),ವಯಸ್ಸು ಮತ್ತು ಲಿಂಗ;ಇವು ಕೋವಿಡ್ ಸೋಂಕಿನ ನಂತರದ ವರ್ಷದಲ್ಲಿ ಸಾವಿನ ಅಪಾಯವನ್ನು ಹೆಚ್ಚಿಸಿದ್ದ ಅಂಶಗಳಾಗಿದ್ದವು. ಒಂದು ಕೋಮಾರ್ಬಿಡ್ ಸ್ಥಿತಿಯನ್ನು ಹೊಂದಿದ್ದ ಜನರು ಸೋಂಕಿನ ನಂತರದ ವರ್ಷದಲ್ಲಿ ಸಾಯುವ ಸಾಧ್ಯತೆ ಒಂಭತ್ತು ಪಟ್ಟಿನಷ್ಟಿತ್ತು ಎನ್ನುವುದು ಅಧ್ಯಯನದಲ್ಲಿ ಬೆಳಕಿಗೆ ಬಂದಿದೆ. ಅಂಕಿಅಂಶಗಳ ಪ್ರಕಾರ ಸಾಯುವ ಸಾಧ್ಯತೆ ಪುರುಷರಲ್ಲಿ 1.3 ಮತ್ತು 60 ವರ್ಷಕ್ಕಿಂತ ಮೇಲಿನವರಲ್ಲಿ 2.6 ಪಟ್ಟು ಹೆಚ್ಚಿತ್ತು.

ಕೋಮಾರ್ಬಿಡಿಟಿ ಸಾವಿನ ಸಾಧ್ಯತೆಯನ್ನು ಹೆಚ್ಚಿಸುತ್ತಿರುವ ಹಿನ್ನೆಲೆಯಲ್ಲಿ ಹಿಂದೆ ಅಧ್ಯಯನದೊಂದಿಗೆ ಗುರುತಿಸಿಕೊಂಡಿದ್ದ ಐಸಿಎಂಆರ್‌ನ ಮಾಜಿ ವಿಜ್ಞಾನಿಯೋರ್ವರು,ಕೋಮಾರ್ಬಿಡಿಟಿಗಳು ಪ್ರಮುಖವಾದ ಅಂಶವಾಗಿದೆ ಎನ್ನುವುದನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ. ಹೀಗಾಗಿ ಲಿವರ್ ಸಿರೋಸಿಸ್ ಮತ್ತು ದೀರ್ಘಕಾಲಿಕ ಮೂತ್ರಪಿಂಡ ಕಾಯಿಲೆಯಂತಹ ಸಮಸ್ಯೆಗಳನ್ನು ಹೊಂದಿರುವವರು ಎಲ್ಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು,ಏಕೆಂದರೆ ಅವರು ತೀವ್ರ ಕಾಯಿಲೆಗಳು ಮತ್ತು ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆಯಿದೆ. ಅವರು ತಮ್ಮ ವೈದ್ಯರೊಂದಿಗೆ ಸಂಪರ್ಕದಲ್ಲಿರಬೇಕು ಮತ್ತು ತಮ್ಮ ದೇಹಸ್ಥಿತಿಯ ಮೇಲೆ ನಿಗಾಯಿರಿಸಬೇಕು ಎಂದು ಹೇಳಿದರು.

► ಸೌಮ್ಯ ರೂಪಾಂತರಿಗಳ ಸೋಂಕಿಗೆ ಒಳಗಾದವರೂ ಲಾಂಗ್ ಕೋವಿಡ್‌ಗೆ ತುತ್ತಾಗಬಹುದೇ?

ಕೋವಿಡ್‌ನಿಂದ ಗುಣಮುಖಗೊಂಡ ಬಳಿಕವೂ ಕೋವಿಡ್ ಲಕ್ಷಣಗಳು ದೀರ್ಘ ಕಾಲ ಮುಂದುವರಿಯುವ ಸ್ಥಿತಿಯನ್ನು ‘ಲಾಂಗ್ ಕೋವಿಡ್ ’ಎನ್ನಲಾಗುತ್ತದೆ. ಈವರೆಗಿನ ಪುರಾವೆಗಳಂತೆ ಸೌಮ್ಯವಾದ ಕೋವಿಡ್ ಹೊಂದಿದ್ದವರಲ್ಲಿಯೂ ಲಾಂಗ್ ಕೋವಿಡ್ ಕಾಣಿಸಬಹುದು. ಚಿಕಿತ್ಸೆ ಮತ್ತು ಮಾತ್ರೆಗಳಿಂದ ಇಂತಹ ಲಕ್ಷಣಗಳು ಕಡಿಮೆಯಾಗುತ್ತವೆ ಎಂದು ಇಂದ್ರಪ್ರಸ್ಥ ಅಪೋಲೊ ಆಸ್ಪತ್ರೆಯ ಡಾ.ಸುರಂಜಿತ್ ಚಟರ್ಜಿ ಹೇಳಿದರು.

ಕೃಪೆ: indianexpress.com

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News