ಚಂಡಮಾರುತ ಮಿಚೌಂಗ್: ಚೆನ್ನೈ ಸಹಿತ ತಮಿಳುನಾಡಿನ ಹಲವೆಡೆ ಭಾರೀ ಮಳೆ; ಗೋಡೆ ಕುಸಿತದಲ್ಲಿ ಇಬ್ಬರು ಬಲಿ
ಚೆನ್ನೈ: ಚಂಡಮಾರುತ ಮಿಚೌಂಗ್ ಪ್ರಭಾವದಿಂದ ಚೆನ್ನೈ ಸಹಿತ ತಮಿಳುನಾಡಿನ ವಿವಿಧೆಡೆ ಭಾರೀ ಮಳೆಯಾಗುತ್ತಿದೆ. ಇಂದು ನಗರದ ಕಾನತ್ತೂರು ಪ್ರದೇಶದಲ್ಲಿ ಹೊಸತಾಗಿ ನಿರ್ಮಾಣಗೊಂಡ ಗೋಡೆ ಕುಸಿದು ಇಬ್ಬರು ಮೃತಪಟ್ಟಿದ್ದಾರೆ ಹಾಗೂ ಇನ್ನೊಬ್ಬರಿಗೆ ಗಾಯವಾಗಿದೆ.
ಚೆನ್ನೈ ವಿಮಾನ ನಿಲ್ದಾಣದ ರನ್-ವೇಗೆ ನೀರು ನುಗ್ಗಿದ ಪರಿಣಾಮ ವಿಮಾನ ಹಾರಾಟಗಳೂ ಸ್ಥಗಿತಗೊಂಡಿವೆ. ಇಂದು ರಾತ್ರಿ 11 ಗಂಟೆ ತನಕ ಯಾವುದೇ ವಿಮಾನ ಹಾರಾಟ ನಡೆಯುವುದಿಲ್ಲ.
ಚಂಡಮಾರುತ ಮಿಚೌಂಗ್ ತಮಿಳುನಾಡು ಮತ್ತು ಆಂಧ್ರ ಕರಾವಳಿಗೆ ಹತ್ತಿರವಾಗುತ್ತಿದ್ದಂತೆಯೇ ಭಾರೀ ಮಳೆಯಾಗುತ್ತಿದೆ. ಚೆನ್ನೈನ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಒಂದೆಡೆ ರಸ್ತೆಯಲ್ಲಿ ನೀರಿನಲ್ಲಿ ಮೊಸಳೆಯೊಂದೂ ಪತ್ತೆಯಾದ ಘಟನೆ ವರದಿಯಾಗಿದೆ. ಚೆನ್ನೈ ಹೊರತಾಗಿ ಚೆಂಗಲಪಟ್ಟು, ಕಾಂಚೀಪುರಂ, ನಾಗಪಟ್ಟಿಣಂ, ಕುಡ್ಡಲೂರು ಮತ್ತು ತಿರುವಲ್ಲೂರು ಪ್ರದೇಶಗಳಲ್ಲೂ ಮಳೆಯಾಗುತ್ತಿದೆ.
ಚೆನ್ನೈ ಮತ್ತು ಹತ್ತಿರದ ಮೂರು ಜಿಲ್ಲೆಗಳ ಶಾಲಾ ಕಾಲೇಜುಗಳು ಮತ್ತು ಸರಕಾರಿ ಕಚೇರಿಗಳಿಗೆ ಇಂದು ರಜೆ ಘೊಷಿಸಲಾಗಿದೆ. ಖಾಸಗಿ ಸಂಸ್ಥೆಗಳಿಗೆ ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಸೂಚಿಸುವಂತೆ ಸರ್ಕಾರ ಹೇಳಿದೆ.
ಕರಾವಳಿ ಭಾಗಗಳಲ್ಲಿ ಸುಮಾರು 5000 ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದೆ. ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಕಳೆದ ರಾತ್ರಿ ಪರಿಸ್ಥಿತಿಯನ್ನು ಅವಲೋಕಿಸಿ ನಿರಂತರ ನಿಗಾ ಇರಿಸಿದ್ದಾರೆ.