ಸಾಲದ ಬಡ್ಡಿ ನೀಡದ್ದಕ್ಕೆ ದಲಿತ ಮಹಿಳೆ ಮೇಲೆ ಮೂತ್ರ ವಿಸರ್ಜನೆ!

Update: 2023-09-25 18:19 GMT

ಪಾಟ್ನಾ: ಗ್ರಾಮದ ಪ್ರಭಾವಿಯಿಂದ ತನ್ನ ಪತಿ ಪಡೆದ ಸಾಲಕ್ಕೆ ಹೆಚ್ಚುವರಿ ಬಡ್ಡಿ ನೀಡಲು ನಿರಾಕರಿಸಿದ ಕಾರಣಕ್ಕೆ ಬಿಹಾರದಲ್ಲಿ ದಲಿತ ಮಹಿಳೆಯೊಬ್ಬಳ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ಬಟ್ಟೆ ಬಿಚ್ಚಿದ ಘಟನೆ ನಡೆದಿದೆ.

ಸಾಲ ನೀಡಿದಾತನ ಮಗನೂ ದೌರ್ಜನ್ಯದಲ್ಲಿ ಭಾಗಿಯಾಗಿದ್ದು, ಆತ ಸಂತ್ರಸ್ತ ಮಹಿಳೆಯ ಬಾಯಿಗೆ ಮೂತ್ರ ವಿಸರ್ಜನೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆಯ ಪತಿ ಪಾಟ್ನಾ ಜಿಲ್ಲೆಯ ಮೋಸಿಂಪುರ ಗ್ರಾಮದ ಪ್ರಮೋದ್ ಸಿಂಗ್ ಎಂಬಾತನಿಂದ ₹ 1,500 ಸಾಲ ಪಡೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ದಂಪತಿ ಸಂಪೂರ್ಣ ಹಣವನ್ನು ಮರುಪಾವತಿಸಿದ್ದರು, ಆದರೆ, ಪ್ರಮೋದ್ ಸಿಂಗ್ ಹೆಚ್ಚುವರಿ ಬಡ್ಡಿಗೆ ಬೇಡಿಕೆ ಇಟ್ಟಿದ್ದನು. ಇದನ್ನು ನೀಡಲು ದಂಪತಿ ನಿರಾಕರಿಸಿದಾಗ, ಪ್ರಮೋದ್ ಸಿಂಗ್, ಆತನ ಮಗ ಮತ್ತು ಸಹಚರರು ಸೇರಿ ಆಕೆಯ ಮೇಲೆ ಹಲ್ಲೆ ನಡೆಸಿ ವಿವಸ್ತ್ರಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಶನಿವಾರ ರಾತ್ರಿ ಕೈಪಂಪ್‌ನಿಂದ ನೀರು ತರಲು ಮನೆಯ ಹೊರಗೆ ಹೋಗಿದ್ದ ವೇಳೆ ಪ್ರಮೋದ್, ಆತನ ಮಗ ಅಂಶು ಮತ್ತು ಇತರ ನಾಲ್ವರು ಪುರುಷರು ತಮ್ಮೊಂದಿಗೆ ಬರುವಂತೆ ಒತ್ತಾಯಿಸಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ. ಬಳಿಕ ಆಕೆಯ ಮೇಲೆ ಅವರು ದೊಣ್ಣೆಗಳಿಂದ ಥಳಿಸಿದ್ದು, ಗ್ರಾಮದ ಪ್ರತ್ಯೇಕ ಸ್ಥಳದಲ್ಲಿ ಆಕೆಯನ್ನು ವಿವಸ್ತ್ರಗೊಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಕೆ ಕಾಣದಾದಾಗ ಆಕೆಯನ್ನು ಹುಡುಕಿಕೊಂಡು ಹೊರಟ ಆಕೆಯ ಕುಟುಂಬಸ್ಥರಿಗೆ ಆತ ವಿವಸ್ತ್ರವಾಗಿ ಪತ್ತೆಯಾಗಿದ್ದಾಳೆ ಎಂದು ಆಕೆಯ ಕುಟುಂಬಸ್ಥರು ತಿಳಿಸಿದ್ದಾರೆ.

ಮಹಿಳೆಯ ತಲೆಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದೂರು ದಾಖಲಾಗಿದ್ದು, ಆರು ಮಂದಿಯನ್ನು ಬಂಧಿಸಲು ಶೋಧ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News