ಸಿಎಎ ಜಾರಿಯಿಂದ ಭಾರತದಲ್ಲಿನ ಮುಸ್ಲಿಮರ ಮೇಲಾಗುವ ಪರಿಣಾಮದ ಬಗ್ಗೆ ತೀವ್ರ ಕಳವಳಗೊಂಡಿದ್ದೇನೆ: ಅಮೆರಿಕಾ ಸೆನೆಟರ್

Update: 2024-03-20 17:02 GMT

Photo: NDTV 

ವಾಷಿಂಗ್ಟನ್: ಅಮೆರಿಕಾ-ಭಾರತ ನಡುವಿನ ಸಂಬಂಧವು ಗಾಢವಾಗುತ್ತಿದ್ದು, ಧರ್ಮಾತೀತವಾಗಿ ಎಲ್ಲರ ಮಾನವ ಹಕ್ಕುಗಳನ್ನು ರಕ್ಷಿಸುವ ಮೌಲ್ಯಗಳಲ್ಲಿ ಸಹಕಾರ ಹಂಚಿಕೆ ಪ್ರಮುಖವಾಗಿದೆ ಎಂದು ಅಭಿಪ್ರಾಯ ಪಟ್ಟಿರುವ ಅಮೆರಿಕಾ ಸೆನೆಟರ್ ಒಬ್ಬರು, ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಭಾರತ ಸರಕಾರವು ನಿಯಮಗಳನ್ನು ಪ್ರಕಟಿಸಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಭಾರತವು ಪೌರತ್ವ ತಿದ್ದುಪಡಿ ಕಾಯ್ದೆ, 2019 ಅನ್ನು ಕಳೆದ ವಾರ ಜಾರಿಗೊಳಿಸಿದ್ದು, ಇದರಿಂದ ಡಿಸೆಂಬರ್ 31, 2014ಕ್ಕೂ ಮುನ್ನ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಭಾರತವನ್ನು ಪ್ರವೇಶಿಸಿರುವ ದಾಖಲೆ ರಹಿತ ಮುಸ್ಲಿಮೇತರ ವಲಸಿಗರಿಗೆ ಪೌರತ್ವ ಪಡೆಯಲು ದಾರಿ ಸುಗಮವಾಗಲಿದೆ.

ಇದೇ ವೇಳೆ ಪತ್ರಿಕಾ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿರುವ ಕೇಂದ್ರ ಸರಕಾರವು, ಪೌರತ್ವ ತಿದ್ದುಪಡಿ ಕಾಯ್ದೆಯು ಭಾರತದಲ್ಲಿನ ಮುಸ್ಲಿಮರ ಮೇಲೆ ಯಾವುದೇ ಪರಿಣಾಮ ಬೀರದೆ ಇರುವುದರಿಂದ ಹಾಗೂ ಹಿಂದೂಗಳಷ್ಟೆ ಮುಸ್ಲಿಮ್ ಸಮುದಾಯವೂ ಸಮಾನ ಹಕ್ಕನ್ನು ಅನುಭವಿಸುವುದರಿಂದ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಅಭಯ ನೀಡಿತ್ತು.

ಈ ಕುರಿತು ಪ್ರತಿಕ್ರಿಯಿಸಿರುವ ಅಮೆರಿಕಾ ಸೆನೆಟರ್ ಹಾಗೂ ಬಲಿಷ್ಠ ಸೆನೆಟ್ ವಿದೇಶಿ ಸಂಬಂಧಗಳ ಸಮಿತಿಯ ಅಧ್ಯಕ್ಷರಾಗಿರುವ ಬೆನ್ ಕಾರ್ಡಿನ್, “ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸುವ ಭಾರತೀಯ ಸರಕಾರದ ನಿರ್ಧಾರದ ಬಗ್ಗೆ ನಾನು ತೀವ್ರ ಕಳವಳಗೊಂಡಿದ್ದೇನೆ, ನಿರ್ದಿಷ್ಟವಾಗಿ ಭಾರತದ ಮುಸ್ಲಿಮರ ಮೇಲೆ ಪ್ರತಿಕೂಲ ಪರಿಣಾಮ ಬೀರಲಿರುವ ಕಾನೂನಿನ ಕುರಿತು. ಈ ಕಾನೂನನ್ನು ಪವಿತ್ರ ರಮದಾನ್ ಮಾಸದಲ್ಲಿ ಜಾರಿಗೊಳಿಸಿರುವುದು ಈ ವಿಷಯವನ್ನು ಮತ್ತಷ್ಟು ಹದಗೆಡಿಸಿದೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

“ಅಮೆರಿಕಾ-ಭಾರತ ನಡುವಿನ ಸಂಬಂಧವು ಆಳವಾಗುತ್ತಿದ್ದು, ಇಂಥ ಸಂದರ್ಭದಲ್ಲಿ ಧರ್ಮಾತೀತವಾಗಿ ಎಲ್ಲ ವ್ಯಕ್ತಿಗಳ ಮಾನವ ಹಕ್ಕುಗಳನ್ನು ರಕ್ಷಿಸುವ ಮೌಲ್ಯಗಳನ್ನು ಆಧರಿಸಿ ನಮ್ಮ ಸಹಕಾರವನ್ನು ಹಂಚಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ” ಎಂದೂ ಅವರು ಹೇಳಿದ್ದಾರೆ.

ಕಳೆದ ವಾರ, ಪೌರತ್ವ ತಿದ್ದುಪಡಿ ಕಾಯ್ದೆ ಅಧಿಸೂಚನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಅಮೆರಿಕಾ ರಾಜ್ಯ ಇಲಾಖೆಯು, ಎಲ್ಲ ಧಾರ್ಮಿಕ ಸ್ವಾತಂತ್ರ್ಯಗಳ ಬಗ್ಗೆ ಗೌರವ ಹಾಗೂ ಕಾನೂನಿನಡಿ ಎಲ್ಲ ಸಮುದಾಯಗಳನ್ನು ಸಮಾನ ರೀತಿಯಲ್ಲಿ ನಡೆಸಿಕೊಳ್ಳುವುದು ಮೂಲಭೂತ ಪ್ರಜಾಸತ್ತಾತ್ಮಕ ತತ್ವಗಳಾಗಿವೆ ಎಂದು ಹೇಳಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News