ಹಿಂದೂ-ಮುಸ್ಲಿಂ ವ್ಯಾಪಾರಿಗಳನ್ನು ಪ್ರತ್ಯೇಕಿಸಲು ತಳ್ಳುಗಾಡಿ ಮೇಲೆ ಕೇಸರಿ ಧ್ವಜವಿಟ್ಟ ದಿಲ್ಲಿ ಬಿಜೆಪಿ ನಾಯಕ
ಹೊಸದಿಲ್ಲಿ: ಹಿಂದೂ ಮತ್ತು ಮುಸ್ಲಿಂ ವ್ಯಾಪಾರಿಗಳನ್ನು ಪ್ರತ್ಯೇಕಿಸಲು, ವ್ಯಾಪಾರಿಗಳ ತಳ್ಳು ಗಾಡಿಗಳ ಮೇಲೆ ಕೇಸರಿ ಧ್ವಜವನ್ನು ನೆಡುವ ಮೂಲಕ ಬಿಜೆಪಿಯ ಕೌನ್ಸಿಲರ್ ರವೀಂದರ್ ಸಿಂಗ್ ನೇಗಿ ಮತ್ತೊಮ್ಮೆ ವಿವಾದ ಸೃಷ್ಟಿಸಿದ್ದಾರೆ.
ದಿಲ್ಲಿಯ ಪ್ರತಾಪ್ ಗಂಜ್ ವಿಧಾನಸಭಾ ಕ್ಷೇತ್ರದ ವಿಂದೋರ್ ನಗರ್ ವಾರ್ಡ್ ಅನ್ನು ಪ್ರತಿನಿಧಿಸುತ್ತಿರುವ ನೇಗಿ, ವ್ಯಾಪಾರಿಗಳ ಹಿಂದೆ ಬಿದ್ದು, ಹಿಂದೂ ವ್ಯಾಪಾರಿಗಳ ತಳ್ಳು ಗಾಡಿಗಳ ಮೇಲೆ ಕೇಸರಿ ಧ್ವಜ ನೆಡುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ತಮ್ಮ ಕ್ರಮವನ್ನು ಸಮರ್ಥಿಸಿಕೊಂಡ ನೇಗಿ, “ಕೇಸರಿ ಧ್ವಜಗಳಿಂದ ಗ್ರಾಹಕರು ವ್ಯಾಪಾರಿಗಳನ್ನು ಹಿಂದೂ ಎಂದು ಗುರುತಿಸಲು ಸಾಧ್ಯವಾಗುತ್ತದೆ” ಎಂದು ಹೇಳಿದ್ದು, ಇತರ ಸಮುದಾಯಗಳು ಆಹಾರದ ಮೇಲೆ ಉಗುಳುತ್ತವೆ ಎಂದು ಆರೋಪಿಸಿದರು.
ಇದಲ್ಲದೆ, ನಿನ್ನ ಹೆಸರನ್ನು ಸೂಕ್ತವಾಗಿ ಪ್ರದರ್ಶಿಸಬೇಕು. ಇಲ್ಲದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಮುಸ್ಲಿಂ ವ್ಯಾಪಾರಿಯೊಬ್ಬರಿಗೆ ನೇಗಿ ಬೆದರಿಕೆಯನ್ನೂ ಒಡ್ಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.