ದೆಹಲಿ: ಮೆಟ್ರೋ ರೈಲು ನಿಲ್ದಾಣದ ಆವರಣ ಗೋಡೆ ಕುಸಿದು ಒಬ್ಬ ಮೃತ್ಯು

Update: 2024-02-09 02:34 GMT

Photo: TOI

ಹೊಸದಿಲ್ಲಿ: ಇಲ್ಲಿನ ಗೋಕುಲಪುರಿ ಮೆಟ್ರೋ ನಿಲ್ದಾಣ ಪ್ಲಾಟ್ಫಾರಂನ ಆವರಣ ಗೋಡೆ ಕುಸಿದು ಸಂಭವಿಸಿದ ದುರಂತದಲ್ಲಿ 53 ವರ್ಷ ವಯಸ್ಸಿನ ವ್ಯಕ್ತಿ ಮೃತಪಟ್ಟು ಇತರ ನಾಲ್ವರು ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.

ಘಟನೆ ಹಿನ್ನೆಲೆಯಲ್ಲಿ ಮೆಟ್ರೊ ವ್ಯವಸ್ಥಾಪಕರು ಹಾಗೂ ಕಿರಿಯ ಇಂಜಿನಿಯರ್ ಒಬ್ಬರನ್ನು ಅಮಾನತು ಮಾಡಲಾಗಿದ್ದು, ತನಿಖೆ ಆರಂಭಿಸಲಾಗಿದೆ. ತುರಾತುರಿಯ ಕ್ರಮ ಹಾಗೂ ನಿರ್ಲಕ್ಷ್ಯದ ಕಾರಣದಿಂದ ಉಂಟಾದ ಸಾವಿನ ಪ್ರಕರಣವನ್ನು ಮೆಟ್ರೋ ಗುತ್ತಿಗೆದಾರರ ವಿರುದ್ಧ ಪೊಲೀಸರು ದಾಖಲಿಸಿದ್ದಾರೆ.

ಮೃತ ವಿನೋದ್ ಕುಮಾರ್ ಪಾಂಡೆಯವರು ಕಾರವಲ್ ನಗರ ನಿವಾಸಿಯಾಗಿದ್ದು, ಮೂಲತಃ ಉತ್ತರಪ್ರದೇಶದ ಸುಲ್ತಾನಪುರದವರು. ಅಕ್ಕಿ ಪೂರೈಕೆದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಸಿಸಿಟಿವಿ ದೃಶ್ಯಾವಳಿ ಪ್ರಕಾರ, ಗೋಡೆಯ ಎತ್ತರಿಸಿದ ಭಾಗ ಕುಸಿದಾಗ ಇಬ್ಬರು ರೈಲಿಗೆ ಕಾಯುತ್ತಿದ್ದರು. ಕೂಡಲೇಗಾಯಗೊಂಡ ಇಬ್ಬರನ್ನು ಅವಶೇಷಗಳ ಅಡಿಯಿಂದ ಹೊರತೆಗೆದು ಜಿಟಿಬಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಗ್ನಿಶಾಮಕ ಸಿಬ್ಬಂದಿ ಆಗಮಿಸುವ ಮುನ್ನವೇ ಇಬ್ಬರನ್ನು ಅವಶೇಷಗಳ ಅಡಿಯಿಂದ ಹೊರತೆಗೆಯಲಾಗಿತ್ತು.

ಗೋಡೆ ಕುಸಿದ ಅವಶೇಷಗಳು ರಸ್ತೆಯ ಮೇಲೆ ಬಿದ್ದು, ಸ್ಕೂಟರ್ ಸವಾರರೂ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಕೆಲ ಬೈಕ್ ಗಳಿಗೂ ಹಾನಿಯಾಗಿದೆ ಎಂದು ದೆಹಲಿ ಅಗ್ನಿಶಾಮಕ ಸೇವೆಗಳ ನಿರ್ದೇಶಕ ಅತುಲ್ ಗರ್ಗ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News