2020ರ ಗಲಭೆ ಪ್ರಕರಣದ ದೋಷಾರೋಪ ಪಟ್ಟಿ ವಿಳಂಬಕ್ಕೆ ಜಿ-20 ಕಾರಣ ಎಂದ ದಿಲ್ಲಿ ಪೊಲೀಸರು!

Update: 2023-09-13 12:56 GMT

Photo- PTI

 

ಹೊಸದಿಲ್ಲಿ: 2020ರ ದಿಲ್ಲಿ ಗಲಭೆಗಳ ಸಂಬಂಧ ಪೂರಕ ದೋಷಾರೋಪ ಪಟ್ಟಿಯನ್ನು ಸಲ್ಲಿಸದೆ ಅಪೂರ್ಣ ಕೆಲಸ ಮಾಡಿರುವ ದಿಲ್ಲಿ ಪೊಲೀಸರಿಗೆ ನಗರ ನ್ಯಾಯಾಲಯವೊಂದು ಛೀಮಾರಿ ಹಾಕಿದೆ ಎಂದು newindianexpress.com ವರದಿ ಮಾಡಿದೆ.

ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಕಳೆದವಾರ ಮುಕ್ತಾಯವಾದ ಜಿ-20 ಶೃಂಗಸಭೆ ಸೇರಿದಂತೆ ಹಲವಾರು ಕಾರಣಗಳಿಂದ ವರದಿಯನ್ನು ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ನ್ಯಾಯಾಲಯವನ್ನು ಪೊಲೀಸರು ಕೋರಿದಾಗ ಈ ಘಟನೆಯು ನಡೆದಿದೆ.

ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪುಲಸ್ತ್ಯ ಪ್ರಮಾಚಲ, ಮಾರ್ಚ್ ತಿಂಗಳಿನಿಂದ ಪ್ರಕರಣದ ಕುರಿತಂತೆ ತನಿಖಾ ಸಂಸ್ಥೆಯಿಂದ ನಿರ್ದಿಷ್ಟ ಸ್ಪಷ್ಟೀಕರಣವನ್ನು ಕೇಳುತ್ತಿದ್ದರೂ, ಈ ಕೆಲಸವನ್ನು ಮುಗಿಸದ ಪೊಲೀಸರು ಒಂದಲ್ಲ ಮತ್ತೊಂದು ಸಬೂಬುಗಳನ್ನು ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.

“ಮಾರ್ಚ್ 1, 2023ರಿಂದ ತನಿಖಾ ಸಂಸ್ಥೆಯಿಂದ ಪ್ರಕರಣದ ಕುರಿತು ಕೆಲವು ನಿರ್ದಿಷ್ಟ ಸ್ಪಷ್ಟೀಕರಣಗಳನ್ನು ಈ ನ್ಯಾಯಾಲಯ ಕೇಳುತ್ತಿದೆ. ದಾಖಲೆಯ ಕುರಿತು ಸಲ್ಲಿಸಲಾಗಿರುವ ದೋಷಾರೋಪ ಪಟ್ಟಿಗಳು ಸಂಪೂರ್ಣ ವಾಸ್ತವಿಕ ಮಾಹಿತಿಗಳನ್ನು ಒಳಗೊಂಡಿಲ್ಲ ಎಂದು ಮಾರ್ಚ್ 1, 2023ರಿಂದ ಮೇ 10, 2023ರ ನಡುವಿನ ಆದೇಶದಲ್ಲಿ ಹಲವಾರು ಅಂಶಗಳನ್ನು ಗಮನಿಸಲಾಗಿದೆ. ಸದ್ಯ, ಬಾಕಿಯಿರುವ ಕೆಲಸವನ್ನು ಮುಕ್ತಾಯಗೊಳಿಸುವ ಬದಲು, ಒಂದಲ್ಲ ಮತ್ತೊಂದು ಕಾರಣಗಳನ್ನು ಮುಂದು ಮಾಡಿ ಕಾಲಾವಕಾಶವನ್ನು ಕೋರಲಾಗುತ್ತಿದೆ” ಎಂದು ಆದೇಶದಲ್ಲಿ ಹೇಳಲಾಗಿದೆ.

ಪೂರಕ ದೋಷಾರೋಪ ಪಟ್ಟಿಯನ್ನು ಸಲ್ಲಿಸಲು ಕಾಲಾವಕಾಶ ನೀಡಬೇಕು ಹಾಗೂ ಠಾಣಾಧಿಕಾರಿಗೆ ವಿಚಾರಣೆಗೆ ಹಾಜರಾಗಲು ವಿನಾಯಿತಿ ನೀಡಬೇಕು ಎಂದು ಸಹಾಯಕ ಸಬ್ ಇನ್ಸ್ ಪೆಕ್ಟರ್ ಜಮ್ಷೆಡ್ ಅಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲವು ಈ ವಿಚಾರ ಗಮನಿಸಿದೆ.

ಜುಲೈ 20ರಂದು ನಡೆದಿದ್ದ ಹಿಂದಿನ ವಿಚಾರಣೆಯ ಸಂದರ್ಭದಲ್ಲಿ ಠಾಣಾಧಿಕಾರಿ ಹಾಗೂ ತನಿಖಾಧಿಕಾರಿ ಹೊಸ ಪೂರಕ ದೋಷಾರೋಪ ಪಟ್ಟಿಯನ್ನು ಸಲ್ಲಿಸಲು ಕಾಲಾವಕಾಶ ಕೋರಿದ್ದ ಸಂಗತಿಯನ್ನೂ ನ್ಯಾಯಾಧೀಶರು ಉಲ್ಲೇಖಿಸಿದ್ದಾರೆ

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News