ನೋಟು ಅಮಾನ್ಯೀಕರಣ ಕಪ್ಪು ಹಣವನ್ನು ಬಿಳಿಯಾಗಿಸುವ ಮಾರ್ಗವಾಗಿತ್ತು: ನ್ಯಾ. ಬಿ.ವಿ.ನಾಗರತ್ನ

Update: 2024-03-31 06:00 GMT

 ನ್ಯಾ. ಬಿ.ವಿ.ನಾಗರತ್ನ | Photo: X \ @micnewdelhi

ಹೊಸದಿಲ್ಲಿ: ನವೆಂಬರ್ 8, 2016ರಂದು ಮಾಡಲಾದ ಅಧಿಕ ಮುಖಬೆಲೆಯ ನೋಟು ಅಮಾನ್ಯೀಕರಣವು ಕಪ್ಪು ಹಣವನ್ನು ಬಿಳಿಯಾಗಿಸುವ ಮಾರ್ಗವಾಗಿತ್ತು ಎಂದು ಶನಿವಾರ ಸುಪ್ರೀಂ ಕೋರ್ಟ್ ನ್ಯಾ. ಬಿ.ವಿ.ನಾಗರತ್ನ ಅಭಿಪ್ರಾಯಪಟ್ಟಿದ್ದಾರೆ ಎಂದು Bar and Bench ವರದಿ ಮಾಡಿದೆ.

ಹೈದರಾಬಾದ್ ನ ಕಾನೂನು ವಿಶ್ವವಿದ್ಯಾಲಯವೊಂದರಲ್ಲಿ ಆಯೋಜಿಸಲಾಗಿದ್ದ ನ್ಯಾಯಾಲಯಗಳು ಮತ್ತು ಸಂವಿಧಾನ ಎಂಬ ವಾರ್ಷಿಕ ವಿಚಾರಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನ್ಯಾ. ಬಿ.ವಿ.ನಾಗರತ್ನ, “ನವೆಂಬರ್ 8, 2016ರಂದು ನಡೆದ ರೂ. 500 ಹಾಗೂ ರೂ. 1,000 ಮುಖಬೆಲೆಯ ನೋಟು ಅಮಾನ್ಯೀಕರಣದ ಸಂದರ್ಭದಲ್ಲಿ ಏನಾಯಿತು ಎಂದು ನಮಗೆಲ್ಲ ಗೊತ್ತಿದೆ. ಆಸಕ್ತಿದಾಯಕ ಸಂಗತಿಯೆಂದರೆ, ಭಾರತದ ಆರ್ಥಿಕತೆಯು ಆ ಹೊತ್ತಿನಲ್ಲಿ ತನ್ನ ಆರ್ಥಿಕತೆಯ ಶೇ. 86ರಷ್ಟನ್ನು ರೂ. 500 ಹಾಗೂ ರೂ. 1,000 ಮುಖಬೆಲೆಯ ನೋಟುಗಳಲ್ಲಿ ಹೊಂದಿತ್ತು. ಈ ನೋಟುಗಳನ್ನು ಅಮಾನ್ಯೀಕರಣ ಮಾಡುವಾಗ ಕೇಂದ್ರ ಸರಕಾರವು ತನ್ನ ವಿವೇಚನೆಯನ್ನು ಕಳೆದುಕೊಂಡಿತ್ತು” ಎಂದು ಹೇಳಿದ್ದಾರೆ.

ನೋಟು ಅಮಾನ್ಯೀಕರಣಗೊಳ್ಳುವುದಕ್ಕೆ ಒಂದು ದಿನದ ಮುಂಚೆ ತನ್ನ ಕೂಲಿಯನ್ನಾಗಿ ರೂ. 500 ಅಥವಾ ರೂ. 1,000 ಮುಖಬೆಲೆಯ ನೋಟನ್ನು ಪಡೆದಿದ್ದ ದಿನಗೂಲಿಗೆ, ದಿನದ ಕೊನೆಯಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸಲು ತನ್ನ ಬಳಿ ಇರುವ ನೋಟನ್ನು ಬದಲಿಸಿಕೊಳ್ಳಬೇಕು ಎಂದು ಪ್ರಕಟಿಸಲಾಯಿತು ಎಂದು ಬಿ.ವಿ.ನಾಗರತ್ನ ವಿಷಾದಿಸಿದ್ದಾರೆ.

ನೋಟು ಅಮಾನ್ಯೀಕರಣದ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 7, 2016ರ ರಾತ್ರಿ 8 ಗಂಟೆಗೆ ಪ್ರಕಟಿಸಿದ್ದರು ಹಾಗೂ ಈ ನಿರ್ಧಾರವು ಅಂದು ಮಧ್ಯರಾತ್ರಿ ಜಾರಿಗೆ ಬಂದಿತ್ತು. ಈ ಸಂದರ್ಭದಲ್ಲಿ ನೋಟು ಅಮಾನ್ಯೀಕರಣವು ಚಲಾವಣೆಯಲ್ಲಿರುವ ಕಪ್ಪು ಹಣವನ್ನು ನಿರ್ಮೂಲನೆ ಮಾಡುತ್ತದೆ ಎಂದು ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಪ್ರತಿಪಾದಿಸಿತ್ತು.

ಇದಾದ ನಂತರ, ಆಗಸ್ಟ್ 2017ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಅಮಾನ್ಯೀಕರಣಗೊಂಡಿರುವ ಶೇ. 98.96ರಷ್ಟು ನೋಟುಗಳನ್ನು ಬ್ಯಾಂಕುಗಳಿಗೆ ಜಮೆ ಮಾಡಲಾಗಿದೆ ಎಂದು ತನ್ನ ವರದಿಯಲ್ಲಿ ಹೇಳಿತ್ತು. ಈ ಸಂದರ್ಭದಲ್ಲಿ ಕೇಂದ್ರ ಹಣಕಾಸು ಸಚಿವರಾಗಿದ್ದ ಅರುಣ್ ಜೇಟ್ಲಿ, “ಜನರು ತಮ್ಮ ಬಳಿ ಇರುವ ಕಪ್ಪು ಹಣವನ್ನು ಬ್ಯಾಂಕ್ ಗಳಿಗೆ ಜಮೆ ಮಾಡುವ ಅನಿವಾರ್ಯಕ್ಕೆ ಈಡಾಗಿದ್ದು, ಇದು ನೋಟು ಅಮಾನ್ಯೀಕರಣದ ಯಶಸ್ಸಿನ ಉತ್ತಮ ನಿದರ್ಶನವಾಗಿದೆ” ಎಂದು ನೋಟು ಅಮಾನ್ಯೀಕರಣವನ್ನು ಸಮರ್ಥಿಸಿಕೊಂಡಿದ್ದರು.

ಚಲಾವಣೆಯಲ್ಲಿದ್ದ ಶೇ. 98ರಷ್ಟು ನೋಟುಗಳು ಬ್ಯಾಂಕುಗಳಿಗೆ ಮರಳಿ ಬಂದಿರುವಾಗ, ನೋಟು ಅಮಾನ್ಯೀಕರಣದ ಗುರಿಯೇನಾಗಿತ್ತು ಎಂದು ಶನಿವಾರ ನ್ಯಾ. ಬಿ.ವಿ.ನಾಗರತ್ನ ಪ್ರಶ್ನಿಸಿದ್ದಾರೆ.

ನೋಟು ಅಮಾನ್ಯೀಕರಣದ ಕುರಿತು ಜನವರಿ 2023ರಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ 4:1 ಬಹುಮತದ ತೀರ್ಪಿನಲ್ಲಿ, ನೋಟು ಅಮಾನ್ಯೀಕರಣದ ಕುರಿತು ತಮ್ಮ ಭಿನ್ನಮತ ವ್ಯಕ್ತಪಡಿಸಿದ್ದ ಏಕೈಕ ನ್ಯಾಯಾಧೀಶೆ ಬಿ.ವಿ.ನಾಗರತ್ನ ಆಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News