ರಾಜ್ಯಸಭಾ ಚುನಾವಣೆ: ಟಿಎಂಸಿಯ ಆರು ಅಭ್ಯರ್ಥಿಗಳ ಪೈಕಿ ಡೆರೆಕ್ ಒ'ಬ್ರಿಯನ್, ಸಾಕೇತ್ ಗೋಖಲೆಗೂ ಟಿಕೆಟ್
ಹೊಸದಿಲ್ಲಿ: ಈ ತಿಂಗಳ ಕೊನೆಯಲ್ಲಿ ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ತೃಣಮೂಲ ಕಾಂಗ್ರೆಸ್ ಪಕ್ಷವು ಆರು ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ ಎಂದು ndtv.com ವರದಿ ಮಾಡಿದೆ.
ಈ ಆರು ಅಭ್ಯರ್ಥಿಗಳ ಪೈಕಿ ಡೆರೆಕ್ ಒ'ಬ್ರಿಯನ್, ಸುಖೇಂದು ಶೇಖರ್ ರೇ ಹಾಗೂ ಡೋಲಾ ಸೇನಾ ಕೂಡಾ ಸೇರಿದ್ದಾರೆ. ಒ'ಬ್ರಿಯನ್ 2011ರಿಂದ ರಾಜ್ಯಸಭಾ ಸದಸ್ಯರಾಗಿದ್ದು, ರಾಜ್ಯಸಭೆಯಲ್ಲಿ ಅವರು ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕರೂ ಆಗಿದ್ದಾರೆ. 2012ರಲ್ಲಿ ಮೊದಲ ಬಾರಿಗೆ ರಾಜ್ಯಸಭಾ ಸದಸ್ಯರಾಗಿದ್ದ ರೇ ತೃಣಮೂಲ ಕಾಂಗ್ರೆಸ್ ಪಕ್ಷದ ಉಪ ಮುಖ್ಯ ಸಚೇತಕರಾಗಿದ್ದರೆ, ಹಿರಿಯ ನಾಯಕ ಹಾಗೂ ಕಾರ್ಮಿಕ ಸಂಘಟನೆಕಾರ ಸೇನ್ 2017ರಲ್ಲಿ ಮೊದಲ ಬಾರಿಗೆ ರಾಜ್ಯಸಭಾ ಸದಸ್ಯರಾಗಿದ್ದರು.
ಹೊಸ ಅಭ್ಯರ್ಥಿಗಳ ಪೈಕಿ ಬಾಂಗ್ಲಾ ಸಂಸ್ಕೃತಿ ಮಂಚ ಅಧ್ಯಕ್ಷ ಸಮೀರುಲ್ ಇಸ್ಲಾಂ, ಅಲಿಪುರ್ದೂರ್ ಜಿಲ್ಲೆಯ ಟಿಎಂಸಿ ಅಧ್ಯಕ್ಷ ಪ್ರಕಾಶ್ ಚಿಕ್ ಬರೈಕ್ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತ ಮತ್ತು ಟಿಎಂಸಿಯ ವಕ್ತಾರ ಸಾಕೇತ್ ಗೋಖಲೆಯ ಹೆಸರುಗಳು ಸೇರಿವೆ.
ಒ'ಬ್ರಿಯನ್, ರೇ ಮತ್ತು ಸೇನ್ ಅವರ ಅವಧಿ ಮಾತ್ರವಲ್ಲದೆ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಪ್ರದೀಪ್ ಭಟ್ಟಾಚಾರ್ಯ, ಅಸ್ಸಾಂ ರಾಜ್ಯದ ಟಿಎಂಸಿ ನಾಯಕ ಸುಶ್ಮಿತಾ ದೇವ್ ಹಾಗೂ ಆ ಪಕ್ಷದ ಡಾರ್ಜಿಲಿಂಗ್ ನಾಯಕ ಶಾಂತ ಚೆಟ್ರಿಯವರ ಅವಧಿಯೂ ಕೊನೆಗೊಳ್ಳುತ್ತಿದ್ದು, ಇದರಿಂದ ಈ ಆರು ಸ್ಥಾನಗಳು ತೆರವುಗೊಳ್ಳುತ್ತಿವೆ.
ಗೋವಾದ ಮಾಜಿ ಮುಖ್ಯಮಂತ್ರಿ ಲೂಝಿನ್ಹೊ ಫೆಲಿರೊ ತಮ್ಮ ಟಿಎಂಸಿ ರಾಜ್ಯಸಭಾ ಸ್ಥಾನಕ್ಕೆ ಕಳೆದ ಎಪ್ರಿಲ್ ತಿಂಗಳಲ್ಲಿ ರಾಜಿನಾಮೆ ಸಲ್ಲಿಸಿದ್ದರಿಂದ ಪಶ್ಚಿಮ ಬಂಗಾಳದ ಏಳನೆ ರಾಜ್ಯಸಭಾ ಸ್ಥಾನವೂ ಖಾಲಿಯಾಗಿದೆ. ಜುಲೈ 24ರಂದು ಆರು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯ ಸಂದರ್ಭದಲ್ಲೇ ಈ ಸ್ಥಾನಕ್ಕಾಗಿ ಉಪ ಚುನಾವಣೆಯೂ ನಡೆಯಲಿದೆ.