ಲಾಟರಿ ಕಿಂಗ್ ನಿಂದ 509 ಕೋಟಿ ರೂ. ದೇಣಿಗೆ ಪಡೆದ ಡಿಎಂಕೆ!
ಹೊಸದಿಲ್ಲಿ: ಲಾಟರಿ ಕಿಂಗ್ ಸ್ಯಾಂಟಿಗೊ ಮಾರ್ಟಿನ್ ಮಾಲೀಕತ್ವದ ಫ್ಯೂಚರ್ ಗೇಮಿಂಗ್ & ಹೋಟೆಲ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್, 2019-20 ರಿಂದ 2022-23ರ ಅವಧಿಯಲ್ಲಿ ಡಿಎಂಕೆಗೆ 509 ಕೋಟಿ ರೂಪಾಯಿ ದೇಣಿಗೆಯನ್ನು ಚುನಾವಣಾ ಬಾಂಡ್ ಮೂಲಕ ನೀಡಿದ ಅಂಶ ಇದೀಗ ಬಹಿರಂಗವಾಗಿದೆ. ಈ ಅವಧಿಯಲ್ಲಿ ತಮಿಳುನಾಡಿನ ಆಡಳಿತ ಚುಕ್ಕಾಣಿ ಹಿಡಿದ ಡಿಎಂಕೆ ಪಡೆದ ಒಟ್ಟು ದೇಣಿಗೆ 611 ಕೋಟಿ ರೂಪಾಯಿಗಳಾಗಿದ್ದು, ಈ ಪೈಕಿ ಶೇಕಡ 83ರಷ್ಟು ದೇಣಿಗೆ ಲಾಟರಿ ಕಿಂಗ್ ನಿಂದ ಬಂದಿದೆ ಎನ್ನುವುದು ಗಮನಾರ್ಹ. 2019ರಿಂದೀಚೆಗೆ ಮಾರ್ಟಿನ್ ಇ.ಡಿ ಹಾಗೂ ಸಿಬಿಐನಿಂದ ವಿಚಾರಣೆ ಎದುರಿಸುತ್ತಿದ್ದಾರೆ.
ಚುನಾವಣಾ ಆಯೋಗ ಭಾನುವಾರ ಬಿಡುಗಡೆ ಮಾಡಿದ ಹೊಸ ವಿವರಗಳ ಪ್ರಕಾರ, ನಾಲ್ಕು ಕಂತುಗಳಲ್ಲಿ ಫ್ಯೂಚರ್ ಗೇಮಿಂಗ್ ಡಿಎಂಕೆಗೆ ದೊಡ್ಡ ಮೊತ್ತದ ದೇಣಿಗೆ ನೀಡಿದೆ. 2020ರ ಅಕ್ಟೋಬರ್ 23 ರಿಂದ 29ರ ಅವಧಿಯಲ್ಲಿ 60 ಕೋಟಿ, 2021ರ ಏಪ್ರಿಲ್ 5 ರಿಂದ 2022ರ ಜನವರಿ 11ರವರೆಗೆ 249 ಕೋಟಿ, 2022ರ 11 ಮತ್ತು 2022ರ ಅಕ್ಟೋಬರ್ 12ರ ನಡುವೆ 160 ಕೋಟಿ ಹಾಗೂ 2023ರ ಏಪ್ರಿಲ್ 20ರಂದು 40 ಕೋಟಿ ದೇಣಿಗೆಯನ್ನು ಡಿಎಂಕೆಗೆ ನೀಡಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ.
ಡಿಎಂಕೆಗೆ ದೇಣಿಗೆ ನೀಡಿದ ಇತರ ಪ್ರಮುಖ ಕಂಪನಿಗಳೆಂದರೆ, ಮೆಗಾ ಇನ್ಫ್ರಾಸ್ಟ್ರಕ್ಚರ್ (105 ಕೊಟಿ), ಇಂಡಿಯಾ ಸಿಮೆಂಟ್ಸ್ (14 ಕೋಟಿ), ಸನ್ ಟಿವಿ ನೆಟ್ ವರ್ಕ್ (10 ಕೋಟಿ), ತ್ರಿವೇಣಿ (8 ಕೋಟಿ), ರಾಮ್ಕೊ ಸಿಮೆಂಟ್ಸ್ (5 ಕೋಟಿ). ಒಟ್ಟು ಈ ಅವಧಿಯಲ್ಲಿ ಡಿಎಂಕೆ 656.5 ಕೋಟಿ ರೂಪಾಯಿ ದೇಣಿಗೆ ಸ್ವೀಕರಿಸಿದೆ.
2023 ನವೆಂಬರ್ 14 ರಂದು ಡಿಎಂಕೆ ಚುನಾವಣಾ ಆಯೋಗಕ್ಕೆ ಬಾಂಡ್ ವಿವರಗಳನ್ನು ಸಲ್ಲಿಸುವ ವೇಳೆ, "ಚುನಾವಣಾ ಬಾಂಡ್ ಯೋಜನೆಯಡಿ ದಾನಿಗಳ ಹೆಸರುಗಳನ್ನು ಅಧಿಕೃತ ಬ್ಯಾಂಕ್ ಗಳು ಬಹಿರಂಗಪಡಿಸುವಂತಿಲ್ಲ. ದಾನಿಗಳು ಬಾಂಡ್ ಗಳನ್ನು ನಮಗೆ ಹಸ್ತಾಂತರಿಸುವ ವೇಳೆ ಕೂಡಾ ದಾನಿಗಳು ತಮ್ಮ ವಿವರಗಳನ್ನು ನೀಡುವ ಅಗತ್ಯತೆಗೆ ಕಟ್ಟುನಿಟ್ಟಾಗಿ ಬದ್ಧವಾಗಿರಲಿಲ್ಲ" ಎಂದು ಹೇಳಿತ್ತು.
"ಸುಪ್ರೀಂಕೋರ್ಟ್ ನಿರ್ದೇಶನದ ಅನ್ವಯ ನಮ್ಮ ದಾನಿಗಳನ್ನು ನಾವು ಸಂಪರ್ಕಿಸಿ, ಈ ವಿವರಗಳನ್ನು ಪಡೆಯುವುದು ಸಾಧ್ಯವಾಗಿದೆ" ಎಂದು ಸ್ಪಷ್ಟಪಡಿಸಿದೆ.
ಜೆಡಿಎಸ್ ಹಾಗೂ ಮಹಾರಾಷ್ಟ್ರವಾದಿ ಗೋಮಂತಕ ಪಕ್ಷ ಕೂಡಾ ವಿವರಗಳನ್ನು ಬಹಿರಂಗಪಡಿಸಿವೆ. 2018-19 ಮತ್ತು 2023 ಏಪ್ರಿಲ್ 10 ರ ಅವಧಿಯಲ್ಲಿ ಒಟ್ಟು 89.7 ಕೋಟಿ ರೂಪಾಯಿ ದೇಣಿಗೆಯನ್ನು ಚುನಾವಣಾ ಬಾಂಡ್ ಮೂಲಕ ಸ್ವೀಕರಿಸಿದ್ದಾಗಿ ಜೆಡಿಎಸ್ ಹೇಳಿದೆ. ಮೇಘಾ ಎಂಜಿನಿರಿಂಗ್ (50 ಕೋಟಿ), ಎಂಬಸ್ಸಿ ಗ್ರೂಪ್ (22 ಕೋಟಿ), ಜೆಎಸ್ ಡಬ್ಲ್ಯು ಸ್ಟೀಲ್ (5 ಕೋಟಿ), ಇನ್ಫೋಸಿಸ್ (1 ಕೋಟಿ) ಜೆಡಿಎಸ್ ಗೆ ದೇಣಿಗೆ ನೀಡಿದ ಇತರ ಕಂಪನಿಗಳು.