ಅತ್ಯಧಿಕ ಆದಾಯದ ಪಕ್ಷ ಯಾವುದು ಗೊತ್ತೇ? ಅಚ್ಚರಿಯ ಮಾಹಿತಿ...
ಹೊಸದಿಲ್ಲಿ: ಕೆ.ಚಂದ್ರಶೇಖರ ರಾವ್ ಅವರ ಭಾರತ್ ರಾಷ್ಟ್ರೀಯ ಸಮಿತಿ (ಬಿಆರ್ ಎಸ್) 2022-23ನೇ ಹಣಕಾಸು ವರ್ಷದಲ್ಲಿ ಅತ್ಯಧಿಕ ಆದಾಯ ಗಳಿಸಿದ ಪ್ರಾದೇಶಿಕ ಪಕ್ಷ ಪಕ್ಷವಾಗಿ ಹೊರಹೊಮ್ಮಿದೆ. ಈ ಪಕ್ಷದ ಆದಾಯ ಎಲ್ಲ ಪ್ರಾದೇಶಿಕ ಪಕ್ಷಗಳ ಒಟ್ಟು ಆದಾಯದ ಶೇಕಡ 42.3ರಷ್ಟಾಗಿದೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಬಹಿರಂಗಪಡಿಸಿದೆ.
ಬಿಆರ್ಎಸ್ 2022-23ರಲ್ಲಿ ಒಟ್ಟು 735.7 ಕೋಟಿ ರೂಪಾಯಿ ಆದಾಯ ಗಳಿಸಿದೆ. ಅತ್ಯಧಿಕ ವೆಚ್ಚ ಮಾಡಿದ ಪಕ್ಷಗಳಲ್ಲಿ ತೃಣಮೂಲ ಕಾಂಗ್ರೆಸ್ ಅಗ್ರಸ್ಥಾನಿಯಾಗಿದೆ. ಈ ಪಕ್ಷ 181.1 ಕೋಟಿ ರೂಪಾಯಿ ವೆಚ್ಚ ಮಾಡಿದ್ದು, ಇದು ಎಲ್ಲ ಪ್ರಾದೇಶಿಕ ಪಕ್ಷಗಳ ಒಟ್ಟು ಖರ್ಚಿನ ಶೇಕಡ 36.7ರಷ್ಟಾಗಿದೆ. ಜಗನ್ಮೋಹನ ರೆಡ್ಡಿಯವರ ವೈಎಸ್ಆರ್ ಸಿಪಿ 79.3 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿದ್ದು, ಇದು ಒಟ್ಟು ಖರ್ಚಿನ ಶೇಕಡ 16.49ರಷ್ಟಾಗಿದೆ. ಬಿಆರ್ಎಸ್ 57.4 ಕೋಟಿ ರೂಪಾಯಿ (ಶೇ. 11.9) ಖರ್ಚು ಮಾಡಿದ್ದು, ಡಿಎಂಕೆ 52.6 ಕೋಟಿ (10.9%) ಮತ್ತು ಸಮಾಜವಾದಿ ಪಕ್ಷ 31.4 ಕೋಟಿ (6.5%) ನಂತರದ ಸ್ಥಾನದಲ್ಲಿವೆ ಎಂದು ಎಡಿಆರ್ ವಿವರಿಸಿದೆ.
ಎಡಿಆರ್ ಬಿಡುಗಡೆ ಮಾಡಿದ ಪ್ರಾದೇಶಿಕ ಪಕ್ಷಗಳ ಹಣಕಾಸು ಆರೋಗ್ಯ ಕುರಿತ ವರದಿಯಲ್ಲಿ ಈ ಅಂಕಿ ಅಂಶಗಳ ವಿವರಗಳಿವೆ. 57 ಪ್ರಾದೇಶಿಕ ಪಕ್ಷಗಳ ಪೈಕಿ 39 ಪಕ್ಷಗಳ ಆದಾಯ- ಖರ್ಚುಗಳನ್ನು ವಿಶ್ಲೇಷಿಸಲಾಗಿದೆ. ಬಿಆರ್ ಎಸ್ ಬಳಿಕ ಟಿಎಂಸಿ ಅತ್ಯಧಿಕ ಆದಾಯ ಗಳಿಸಿದ ಪಕ್ಷವಾಗಿದ್ದು, 333.45 ಕೋಟಿ (ಶೇಕಡ 19.1) ರೂಪಾಯಿ ಆದಾಯ ಗಳಿಸಿದೆ. 214.3 ಕೋಟಿ (12.3%) ಆದಾಯ ಗಳಿಸಿದ ಡಿಎಂಕೆ ನಂತರದ ಸ್ಥಾನದಲ್ಲಿದೆ ಎಂದು ವರದಿ ಹೇಳಿದೆ.
ಒಟ್ಟು ಅಗ್ರ ಐದು ಪ್ರಾದೇಶಿಕ ಪಕ್ಷಗಳು 1541 ಕೋಟಿ ರೂಪಾಯಿ ಆದಾಯ ಹೊಂದಿದ್ದು, ಇದು 39 ಪಕ್ಷಗಳ ಒಟ್ಟು ಆದಾಯವಾದ 1740.4 ಕೋಟಿ ರೂಪಾಯಿಗಳಲ್ಲಿ ಶೇಕಡ 88.5ರಷ್ಟಾಗಿದೆ. ಚುನಾವಣಾ ಆಯೋಗ ಎಲ್ಲ ರಾಜಕೀಯ ಪಕ್ಷಗಳ ಪರಿಶೋಧಿತ ಲೆಕ್ಕಪತ್ರಗಳನ್ನು ಸಲ್ಲಿಸಲು 2023ರ ಅಕ್ಟೋಬರ್ 31ರ ಗಡುವು ವಿಧಿಸಿತ್ತು.