ಕೋಲ್ಕತ್ತಾ ವೈದ್ಯೆಯ ಹತ್ಯೆ: ಲೈಂಗಿಕ ದೌರ್ಜನ್ಯದಿಂದ ಸಾವು ಎಂದ ಮರಣೋತ್ತರ ಪರೀಕ್ಷಾ ವರದಿ

Update: 2024-08-10 13:15 GMT

ವೈದ್ಯರ ಪ್ರತಿಭಟನೆ (Photo:telegraphindia.com)

ಕೋಲ್ಕತ್ತಾ: ಕೋಲ್ಕತ್ತಾದ ಆರ್ಜಿಧ ಕರ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಸ್ನಾತಕೋತ್ತರ ತರಬೇತಿ ನಿರತ ವೈದ್ಯೆಯ ಪ್ರಾಥಮಿಕ ಮರಣೋತ್ತರ ಪರೀಕ್ಷಾ ವರದಿ ಬಹಿರಂಗಗೊಂಡಿದ್ದು, ಆಕೆಯನ್ನು ಹತ್ಯೆಗೈಯ್ಯುವುದಕ್ಕೂ ಮುನ್ನ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಈ ಸರಕಾರಿ ಆಸ್ಪತ್ರೆಯ ಕಿರಿಯ ವೈದ್ಯರ ಪ್ರತಿಭಟನೆ ಹಾಗೂ ರಾಜ್ಯದಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಬಿಜೆಪಿ ಆರೋಪದ ನಡುವೆಯೇ ಈ ಪ್ರಕರಣದ ಸಂಬಂಧ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿಗೆ ಆಸ್ಪತ್ರೆಯ ಹಲವಾರು ವಿಭಾಗಗಳಿಗೆ ಮುಕ್ತ ಪ್ರವೇಶವಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಪರಾಮರ್ಶೆ ನಡೆಸಿದ ನಂತರ ಓರ್ವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು PTI ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿಯೊಬ್ಬರು, “ಹೊರಗಿನ ಓರ್ವ ವ್ಯಕ್ತಿಯನ್ನು ನಾವು ಬಂಧಿಸಿದ್ದೇವೆ. ಆತನ ಚಟುವಟಿಕೆಗಳು ಸಾಕಷ್ಟು ಸಂಶಯಾಸ್ಪದವಾಗಿದ್ದು, ಆತ ಈ ಅಪರಾಧ ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿರುವಂತೆ ಕಂಡು ಬರುತ್ತಿದೆ” ಎಂದು ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಈ ಪ್ರಕರಣವನ್ನು ತ್ವರಿತ ನ್ಯಾಯಾಲಯಕ್ಕೆ ವರ್ಗಾಯಿಸಬೇಕು ಹಾಗೂ ಅಗತ್ಯ ಬಿದ್ದರೆ ಆರೋಪಿಯನ್ನು ನೇಣಿಗೇರಿಸಬೇಕು ಎಂದು ನಾನು ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.

ಈ ಪ್ರಕರಣದ ಸಂಬಂಧ, ಇಬ್ಬರು ಸಹಾಯಕ ವೈದ್ಯರನ್ನೂ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News