ನನಗೆ ಹಿಂದಿ ಗೊತ್ತಿಲ್ಲ, ಹೊಸ ಕ್ರಿಮಿನಲ್ ಕಾನೂನುಗಳನ್ನು ಮೂಲ ಹೆಸರುಗಳಿಂದಲೇ ಉಲ್ಲೇಖಿಸುತ್ತೇನೆ: ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶ
ಹೊಸದಿಲ್ಲಿ: ಕ್ರಿಮಿನಲ್ ಕಾನೂನುಗಳ ಹೆಸರುಗಳನ್ನು ಹೊಸ ಹಿಂದಿ ಹೆಸರುಗಳಿಂದ ಬದಲಾಯಿಸಿದರೂ ತನಗೆ ಹಿಂದಿ ಗೊತ್ತಿಲ್ಲದೇ ಇರುವುದರಿಂದ ಹಿಂದಿನ ಹೆಸರುಗಳನ್ನೇ ಉಲ್ಲೇಖಿಸುವುದಾಗಿ ಮದ್ರಾಸ್ ಹೈಕೋರ್ಟಿನ ನ್ಯಾಯಮೂರ್ತಿ ಎನ್ ಆನಂದ್ ವೆಂಕಟೇಶ್ ಹೇಳಿದ್ದಾರೆ.
ಮಂಗಳವಾರ ಪ್ರಕರಣವೊಂದರ ವಿಚಾರಣೆ ವೇಳೆ ಅವರು ಮೇಲಿನಂತೆ ಹೇಳಿದ್ದಾರೆ. “ನಾನು ಐಪಿಸಿ ಅನ್ನು ಐಪಿಸಿ ಎಂದೇ ಉಲ್ಲೇಖಿಸುತ್ತೇನೆ. ಏಕೆಂದರೆ ನನಗೆ ಆ ಭಾಷೆ (ಹಿಂದಿ) ತಿಳಿದಿಲ್ಲ,” ಎಂದು ಅವರು ಹೇಳಿದರು.
ಕ್ರಿಮಿನಲ್ ದಂಡ ಸಂಹಿತೆಗೆ ಮಾಡಲಾದ ಹಲವು ತಿದ್ದುಪಡಿಗಳ ಕುರಿತಂತೆ ವಕೀಲರು ಉಲ್ಲೇಖಿಸಿದಾಗ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಎ ದಾಮೋದರನ್ ಅವರು ಕ್ರಿಮಿನಲ್ ದಂಡ ಸಂಹಿತೆಯ ಸ್ಥಾನದಲ್ಲಿ ಬರಲಿರುವ ಭಾರತೀಯ ನಾಗರಿಕ್ ಸುರಕ್ಷಾ ಸಂಹಿತ 2023 ಉಲ್ಲೇಖಿಸಲು ಬಯಸಿದರೂ ಹೆಸರೆತ್ತದೆ ಹೊಸ ಕಾಯಿದೆಯನ್ನು ಉಲ್ಲೇಖಿಸುವಂತೆ ನ್ಯಾಯಾಧೀಶರಿಗೆ ಹೇಳಿದರು. ಆಗ ಜಸ್ಟಿಸ್ ಆನಂದ್ ವೆಂಕಟೇಶ್ ಲಘು ಧಾಟಿಯಲ್ಲಿ ಹೊಸ ಕಾಯಿದೆಯನ್ನು ಹೆಸರಿಸುವಂತೆ ಹೇಳಿದಾಗ ಪಬ್ಲಿಕ್ ಪ್ರಾಸಿಕ್ಯೂಟರ್ ಅವರಿಗೆ ಕಷ್ಟವಾಯಿತು. “ಅದಕ್ಕೇ ಅವರು ಹೊಸ ಕಾಯಿದೆ ಎಂದಷ್ಟೇ ಹೇಳಲು ಬಯಸಿ ಜಾಣತನ ತೋರಿದರು,” ಎಂದು ಜಸ್ಟಿಸ್ ಆನಂದ್ ವೆಂಕಟೇಶ್ ಹೇಳಿದರು.