ಸಂದೀಪ್ ಘೋಷ್ ಆಪ್ತ ಉದ್ಯಮಿಯಿಂದ 800 ಕೋಟಿ ರೂ. ಮೌಲ್ಯದ ಚಿನ್ನ ವಶ

Update: 2024-09-08 04:07 GMT

PC: ANI 

ಕೋಲ್ಕತ್ತಾ : ವಿವಾದದ ಕೇಂದ್ರಬಿಂದುವಾಗಿರುವ ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಚಾರ್ಯ ಡಾ.ಸಂದೀಪ್ ಘೋಷ್‍ಗೆ ಆಪ್ತವಾಗಿದ್ದ ಉದ್ಯಮಿಯೊಬ್ಬರಿಂದ ಕಾನೂನು ಜಾರಿ ನಿರ್ದೇಶನಾಲಯ(ಈಡಿ) ಶನಿವಾರ 800 ಕೋಟಿ ರೂಪಾಯಿ ಮೌಲ್ಯದ ಚಿನ್ನ ವಶಪಡಿಸಿಕೊಂಡಿದೆ.

ಘೋಷ್ ಪ್ರಸ್ತುತ ಸಿಬಿಐ ವಶದಲ್ಲಿದ್ದು, ಡಾ.ಘೋಷ್ ಆಸ್ಪತ್ರೆಯಲ್ಲಿ ಹಲವು ಹಣಕಾಸು ಅವ್ಯವಹಾರಗಳನ್ನು ನಡೆಸಿದ್ದಾರೆ ಎಂದು ಈಡಿ ಆರೋಪಿಸಿದೆ.

ಸಾಲ್ಟ್ ಲೇಕ್ ನಲ್ಲಿರುವ ಮನೆಯಿಂದ ಉದ್ಯಮಿಯನ್ನು ವಶಕ್ಕೆ ಪಡೆಯಲಾಗಿದ್ದು, ಘೋಷ್ ತಮ್ಮ ವೈದ್ಯಕೀಯ ಹಗರಣಗಳಿಂದ ಬಂದ ಅಕ್ರಮ ಹಣವನ್ನು ಬಳಸಿರುವ ಇತರ ಸಂಪರ್ಕಗಳನ್ನು ಕೂಡಾ ಪತ್ತೆ ಮಾಡಲಾಗುತ್ತಿದೆ ಎಂದು ಈಡಿ ಮೂಲಗಳು ಹೇಳಿವೆ.

ಶುಕ್ರವಾರ ಈಡಿ ತನ್ನ ತನಿಖೆಯ ಭಾಗವಾಗಿ ಘೋಷ್ ನ ಸಹಚರರನ್ನು ಕೆಲ ಆಸ್ತಿಗಳಿರುವ ಪ್ರದೇಶಗಳಿಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿತ್ತು. ಇದೇ ದಿನ ನಿರ್ದೇಶನಾಲಯ ಘೋಷ್‍ಗೆ ಸೇರಿದ ಮತ್ತು ಆತನ ಹಲವು ಮಂದಿ ಸಹಚರರ ಮನೆಗಳ ಮೇಲೂ ದಾಳಿ ನಡೆಸಿತ್ತು ಎಂದು ತಿಳಿದು ಬಂದಿದೆ.

ಈ ದಾಳಿಯ ಬಳಿಕ ಡಾ.ಘೋಷ್‍ನ ನಿಕಟವರ್ತಿ ಪ್ರಸೂನ್ ಚಟರ್ಜಿ ಎಂಬಾತನನ್ನು ಬಂಧಿಸಿತ್ತು. ಈತ ನ್ಯಾಷನಲ್ ಮೆಡಿಕಲ್ ಕಾಲೇಜಿನಲ್ಲಿ ಡಾಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ. ಪಶ್ಚಿಮ ಬಂಗಾಳದ ಕ್ಯಾನಿಂಗ್‍ಟೌನ್‍ನಲ್ಲಿದ್ದ ಘೋಷ್ ಗೇ ಸೇರಿದ ಆಸ್ತಿ ಇರುವ ಪ್ರದೇಶಕ್ಕೆ ಈತನನ್ನು ಕರೆದೊಯ್ಯಲಾಗಿದೆ ಎನ್ನಲಾಗಿದೆ.

ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಈಡಿ ಸೆಪ್ಟೆಂಬರ್ 2ರಂದು ಘೋಷ್ ಹಾಗೂ ಇತರ ಮೂವರನ್ನು ಬಂಧಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News