ಇವಿಎಂ ಕುರಿತು ಕಳವಳ ವ್ಯಕ್ತಪಡಿಸಿದ್ದ INDIA ಮೈತ್ರಿಕೂಟಕ್ಕೆ ಎಫ್ಎಕ್ಯೂ ಮೂಲಕ ಚುನಾವಣಾ ಆಯೋಗ ಉತ್ತರ

Update: 2023-12-31 13:27 GMT

ಚುನಾವಣಾ ಆಯೋಗ | Photo: PTI

ಹೊಸದಿಲ್ಲಿ: ವಿದ್ಯುನ್ಮಾನ ಮತ ಯಂತ್ರ ಬಳಕೆಯ ಕುರಿತು ಕಳೆದ ಆಗಸ್ಟ್ ತಿಂಗಳಿನಲ್ಲಿ INDIA ಮೈತ್ರಿಕೂಟದ ಕೆಲವು ಸದಸ್ಯರು ಕಳವಳ ವ್ಯಕ್ತಪಡಿಸಿ ಚುನಾವಣಾ ಆಯೋಗಕ್ಕೆ ಪತ್ರ ಬರೆದ ನಂತರ, ಚುನಾವಣಾ ಆಯೋಗವು ತನ್ನ ಪದೇ ಪದೇ ಕೇಳಲಾಗುವ ಪ್ರಶ್ನೆಗಳ ಪುಟವನ್ನು ಪರಿಷ್ಕರಿಸಿ ಮತ್ತಷ್ಟು ವಿಸ್ತರಿಸಿದೆ. ಅದರಲ್ಲಿ ಭಾರತದ ವಿದ್ಯುನ್ಮಾನ ಮತ ಯಂತ್ರಗಳು ಜರ್ಮನಿಯಲ್ಲಿ ನಿಷೇಧಕ್ಕೊಳಗಾಗಿರುವ ವಿದ್ಯುನ್ಮಾನ ಮತ ಯಂತ್ರಗಳಿಗಿಂತ ಹೇಗೆ ಭಿನ್ನವಾಗಿದೆ; ಒಂದು ವೇಳೆ ವಿವಿಪ್ಯಾಟ್ ಗಳು ತಿದ್ದಬಹುದಾದ ನೆನಪಿನ ಕೋಶ ಹೊಂದಿದ್ದರೆ ಮತ್ತು ಮತ ಯಂತ್ರ ತಯಾರಕರು ತಮ್ಮ ಸಾಫ್ಟ್ ವೇರ್ ಅನ್ನು ವಿದೇಶಿ ಮೈಕ್ರೊಚಿಪ್ ತಯಾರಕರೊಂದಿಗೆ ಹಂಚಿಕೊಂಡಿದ್ದರೆ ಎಂಬ ಸಂಶಯಗಳ ಕುರಿತು ವಿವರಣೆ ನೀಡಿದೆ.

ಡಿಸೆಂಬರ್ 19ರಂದು ಗೊತ್ತುವಳಿಯೊಂದನ್ನು ಅಂಗೀಕರಿಸಿದ್ದ INDIA ಮೈತ್ರಿಕೂಟವು, “ಚುನಾವಣಾ ಆಯೋಗವು INDIA ನಿಯೋಗವನ್ನು ಭೇಟಿ ಮಾಡಲು ಹಿಂಜರಿಕೆ ತೋರುತ್ತಿದೆ” ಎಂದು ಪ್ರತಿಪಾದಿಸಿತ್ತು. ಆದರೆ, ಚುನಾವಣಾ ಆಯೋಗವು ಮೈತ್ರಿಕೂಟದ ಸಂಶಯಕ್ಕೆ ಈಗಾಗಲೇ ಉತ್ತರಿಸಿದೆ ಎಂದು ಮೂಲಗಳು The Sunday Express ಸುದ್ದಿ ಸಂಸ್ಥೆಗೆ ತಿಳಿಸಿವೆ. ವಿದ್ಯುನ್ಮಾನ ಮಂತ್ರ ಯಂತ್ರಗಳ ಕುರಿತು ಪರಿಷ್ಕೃತ ಪದೇ ಪದೇ ಕೇಳಲಾಗುವ ಪ್ರಶ್ನೆಗಳನ್ನು ತನ್ನ ಜಾಲತಾಣದಲ್ಲಿ ಆಗಸ್ಟ್ ತಿಂಗಳಲ್ಲಿ ಅಪ್ಲೋಡ್ ಮಾಡಲಾಗಿದೆ ಎಂದು ಚುನಾವಣಾ ಆಯೋಗವು ಉತ್ತರಿಸಿದೆ.

ಆಗಸ್ಟ್ 23ರಂದು ಅಪ್ಲೋಡ್ ಆಗಿರುವ ಪರಿಷ್ಕೃತ ಪದೇ ಪದೇ ಕೇಳಲಾಗುವ ಪ್ರಶ್ನೆಗಳಲ್ಲಿ 76 ಪ್ರಶ್ನೆಗಳಿಗೆ ಉತ್ತರಿಸಲಾಗಿದೆ. ಇದಕ್ಕೂ ಮುಂಚಿನ ಆವೃತ್ತಿಯಲ್ಲಿ 39 ಪ್ರಶ್ನೆಗಳಿಗೆ ಮಾತ್ರ ಉತ್ತರಿಸಲಾಗಿತ್ತು.

ಪದೇ ಪದೇ ಕೇಳಲಾಗುವ ಪ್ರಶ್ನೆಗಳ ಪುಟದಲ್ಲಿ ಕೇಳಲಾಗಿರುವ ನೂತನ ಪ್ರಶ್ನೆಗಳ ಪೈಕಿ ವಿದ್ಯುನ್ಮಾನ ಮತ ಯಂತ್ರಗಳ ತಯಾರಿಕಾ ಸಂಸ್ಥೆಗಳಾದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಹಾಗೂ ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಏನಾದರೂ ತಮ್ಮ ಗೋಪ್ಯ ಸಾಫ್ಟ್ ವೇರ್ ಪ್ರೋಗ್ರಾಮ್ ಅನ್ನು ವಿದೇಶಿ ಚಿಪ್ ತಯಾರಕರೊಂದಿಗೆ ಅದನ್ನು ವಿದ್ಯುನ್ಮಾನ ಮತ ಯಂತ್ರಗಳಲ್ಲಿ ಬಳಸಲಾಗುವ ಮೈಕ್ರೊಕಂಟ್ರೋಲರ್ಸ್ ಗೆ ನಕಲು ಹಂಚಿಕೊಂಡಿವೆಯೆ ಎಂಬ ಪ್ರಶ‍್ನೆ ಸೇರಿದೆ.

ಅದಕ್ಕೆ ಉತ್ತರಿಸಿರುವ ಚುನಾವಣಾ ಆಯೋಗವು, “ಮೈಕ್ರೊಕಂಟ್ರೋಲರ್ಸ್ ಅನ್ನು ಬಿಇಎಲ್/ಎಸಿಐಎಲ್ ಕಾರ್ಖಾನೆಯೊಳಗೆ ಅತ್ಯುನ್ನತ ಮಟ್ಟದ ಭದ್ರತೆ ಹಾಗೂ ಸುರಕ್ಷತೆಯೊಂದಿಗೆ ಜೋಡಿಸಲಾಗುತ್ತದೆ. ನಾಲ್ಕು ಸುರಕ್ಷಿತ ಉತ್ಪಾದನಾ ಪ್ರಕ್ರಿಯೆಯ ಪೈಕಿ (ಸುರಕ್ಷಿತ ತಯಾರಿಕಾ ಸೌಲಭ್ಯ) ಮೈಕ್ರೊಕಂಟ್ರೋಲರ್ ಗಳನ್ನು ಕೇವಲ ನಿಯೋಜಿತ ತಂತ್ರಜ್ಞರು ಅಕ್ಸೆಸ್ ಕಾರ್ಡ್ ಗಳು ಹಾಗೂ ಬಯೋಮೆಟ್ರಿಕ್ ಸ್ಕ್ಯಾನ್ ಗಳಿಗೆ ಪ್ರವೇಶಿಸಲು ಮಾನ್ಯತೆ ಹೊಂದಿರುತ್ತಾರೆ. ಬೇರಾವುದೇ ಬಾಹ್ಯ ಸ್ವದೇಶಿ ಅಥವಾ ವಿದೇಶಿ ಸಂಸ್ಥೆಗಳು ಮೈಕ್ರೊಕಂಟ್ರೋಲರ್ ನೊಳಗೆ ಫರ್ಮ್ ವೇರ್ ಪ್ರೋಗ್ರಾಂ ಅನ್ನು ಜೋಡಿಸುವ ಕೆಲಸದಲ್ಲಿ ಭಾಗಿಯಾಗಿಲ್ಲ” ಎಂದು ಹೇಳಿದೆ.

ವಿವಿಪ್ಯಾಟ್ ನಲ್ಲಿ ಎರಡು ಬಗೆಯ ನೆನಪಿನ ಕೋಶಗಳಿರುತ್ತವೆ – ಮೈಕ್ರೊಕಂಟ್ರೋಲರ್ ಗಳಿಗೆ ಮೀಸಲಿಟ್ಟಿರುವ ಪ್ರೋಗ್ರಾಂ ನಿರ್ದೇಶನಗಳನ್ನು ಒಂದು ಬಾರಿ ಮಾತ್ರ ಪ್ರೋಗ್ರಾಂ ಮಾಡಲು ಸಾಧ್ಯ ಹಾಗೂ ಮತ್ತೊಂದರಲ್ಲಿ ಗ್ರಾಫಿಕಲ್ ಚಿತ್ರಗಳನ್ನು ಸಂರಕ್ಷಿಸಿಡಲಾಗುತ್ತದೆ. ಇಲ್ಲಿ ಅಭ್ಯರ್ಥಿಗಳು ಅಥವಾ ಅವರ ಪ್ರತಿನಿಧಿಗಳ ಸಮ್ಮುಖದಲ್ಲಿ ಅಭ್ಯರ್ಥಿಗಳ ಚಿಹ್ನೆಗಳನ್ನು ತುಂಬಿಸಲಾಗುತ್ತದೆ ಎಂದು ವಿವಿಪ್ಯಾಟ್ (ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್) ಕುರಿತು ಅನುಮಾನಗಳಿಗೆ ಚುನಾವಣಾ ಆಯೋಗವು ಉತ್ತರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News