Fact Check: ʼಜಾವೇದ್ ಹುಸೇನ್ʼ ಹೆಸರಿನಲ್ಲಿ ಹಿಂದೂ, ಬ್ರಾಹ್ಮಣರನ್ನು ನಿಂದಿಸಿದ ʼದಿಲೀಪ್ ಬಾಘೆಲ್ʼ!
ಹರಿದ್ವಾರ: ಹಿಂದೂಗಳ ಪವಿತ್ರ ಕ್ಷೇತ್ರ ಹರಿದ್ವಾರದಲ್ಲಿ ಸಾಧುವಿನಂತೆ ನಟಿಸಿ ಜಾವೇದ್ ಹುಸೇನ್ ಎಂಬಾತ ಹಿಂದೂಗಳ ಹಾಗೂ ಬ್ರಾಹ್ಮಣರ ವಿರುದ್ಧ ನಿಂದನೀಯ ಪದಗಳಲ್ಲಿ ಟೀಕಿಸಿದ್ದಾನೆ ಎಂದು ಆರೋಪಿಸಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಡಿಯೋಗೆ ತಿರುವು ಸಿಕ್ಕಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಉತ್ತರಾಖಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆತ ಜಾವೇದ್ ಹುಸೇನ್ ಅಲ್ಲ, ಆತ ಭಗವತಿ ಪ್ರಸಾದ್ ಬಾಘೆಲ್ ಎಂಬವರ ಪುತ್ರ ದಿಲೀಪ್ ಬಾಘೆಲ್ ಎಂದು ತಿಳಿದು ಬಂದಿದೆ ಎಂದು ಆಲ್ಟ್‌ನ್ಯೂಸ್ ಸಹಸ್ಥಾಪಕ ಮುಹಮ್ಮದ್ ಝುಬೇರ್ ತಿಳಿಸಿದ್ದಾರೆ.
ಈ ಬಗ್ಗೆ ಉತ್ತರಾಖಂಡ್ ಪೊಲೀಸರು ಟ್ವಿಟರ್‌ನಲ್ಲಿ ಪೋಸ್ಟ್ ಹಾಕಿದ್ದು, “ಟ್ವಿಟರ್‌ನಲ್ಲಿ ವೈರಲ್ ಆಗಿರುವ ವೀಡಿಯೊವನ್ನು ಅರಿತುಕೊಂಡು, ಹರಿದ್ವಾರ ಪೊಲೀಸರು ತನಿಖೆ ನಡೆಸಿದಾಗ, ವ್ಯಕ್ತಿಯೊಬ್ಬ ಸಾಧುಗೆ ಅಮಲು ಪದಾರ್ಥವನ್ನು ನೀಡಿದ್ದಾನೆ ಮತ್ತು ಹಿಂದೂ ಸಮುದಾಯದ ವಿರುದ್ಧ ನಿಂದನೀಯ ಭಾಷೆ ಬಳಸಿ ವೀಡಿಯೊವನ್ನು ಪ್ರಸಾರ ಮಾಡಿದ್ದಾನೆ ಎಂದು ಕಂಡುಬಂದಿದೆ. ಆರೋಪಿ ಸಾಧು ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಆತನ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತಿದೆ” ಎಂದು ತಿಳಿಸಿದ್ದಾರೆ.
ಜಾವೇದ್ ಹುಸೇನ್ ಎಂಬಾತ ಹಿಂದೂ ಸಾಧು ವೇಷ ಧರಿಸಿ ಹರಿದ್ವಾರದಲ್ಲಿ ಹಿಂದೂಗಳಿಗೆ ಬೆದರಿಕೆ ಹಾಕುತ್ತಿದ್ದಾನೆ, ಬ್ರಾಹ್ಮಣರು ಮತ್ತು ಹಿಂದೂಗಳ ಬಗ್ಗೆ ನಿಂದನೆ ಮಾಡಿದ್ದಾನೆ. ಹರಿದ್ವಾರದಲ್ಲಿ ಪ್ರತಿ ಹತ್ತು ವರ್ಷಗಳಿಗೊಮ್ಮೆ ಮುಸ್ಲಿಂ ಜನಸಂಖ್ಯೆಯಲ್ಲಿ 40% ಹೆಚ್ಚಳವಾಗುತ್ತಿದೆ. ಇನ್ನು ಹರಿದ್ವಾರವನ್ನು ದೇವರೇ ಕಾಪಾಡಬೇಕು ಎಂದು ದಿಲೀಪ್ ಬಾಘೆಲ್ ಹಿಂದೂಗಳಿಗೆ ನಿಂದಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು.