Fact Check| ಮನಮೋಹನ್ ಸಿಂಗ್‌ರ 18 ವರ್ಷಗಳ ಹಿಂದಿನ ಭಾಷಣದ ಕುರಿತು ಸುಳ್ಳು ಹೇಳಿದ ಮೋದಿ; ಸತ್ಯಾಂಶ ಇಲ್ಲಿದೆ...

Update: 2024-04-23 07:06 GMT

ಹೊಸದಿಲ್ಲಿ: ರವಿವಾರ ರಾಜಸ್ಥಾನದ ಬನ್ಸವಾಡಾದಲ್ಲಿ ಚುನಾವಣಾ ರ್ಯಾಲಿಯಲ್ಲಿ ಮೋದಿಯವರು ಭಾರತದ ಮುಸ್ಲಿಮರ ವಿರುದ್ಧ ದಾಳಿ ನಡೆಸಿದ್ದರು. ಮುಸ್ಲಿಮರನ್ನು ‘ನುಸುಳುಕೋರರು’ ಎಂದು ಬಿಂಬಿಸಿದ್ದ ಅವರು, ಸಾರ್ವತ್ರಿಕ ಚುನಾವಣೆಯಲ್ಲಿ ಪ್ರತಿಪಕ್ಷವು ಗೆದ್ದರೆ ಜನರ ಭೂಮಿ ಮತ್ತು ಮಂಗಳಸೂತ್ರಗಳನ್ನು ಮುಸ್ಲಿಮರಿಗೆ ಹಂಚಲಿದೆ ಎಂದು ಹೇಳಿದ್ದರು.

ತನ್ನ ಭಾಷಣದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಉಲ್ಲೇಖಿಸಿದ್ದ ಮೋದಿ, ಸಿಂಗ್ ಅಧಿಕಾರದಲ್ಲಿದ್ದಾಗ ದೇಶದ ಆಸ್ತಿಯ ಮೇಲೆ ಮೊದಲ ಹಕ್ಕನ್ನು ಮುಸ್ಲಿಮರು ಹೊಂದಿದ್ದಾರೆ ಎಂದು ಹೇಳಿದ್ದರು ಎಂದ ಪ್ರಧಾನಿ ಮೋದಿ, ಹೆಚ್ಚು ಮಕ್ಕಳನ್ನು ಹೊಂದಿರುವ ಸಮುದಾಯಕ್ಕೆ,‌ ನುಸುಳುಕೋರರಿಗೆ ಅವರು ಈ ಆಸ್ತಿಗಳನ್ನು ಹಂಚಲಿದ್ದಾರೆ ಎಂದು ಹೇಳಿದ್ದರು.

ಮೋದಿಯವರ ಸುಳ್ಳಿನ ಹಿಂದಿನ ಸತ್ಯವಿಲ್ಲಿದೆ. ಅಸಲಿಗೆ ಮನಮೋಹನ್ ಸಿಂಗ್ ಹಾಗೆಂದೂ ಹೇಳಿಯೇ ಇರಲಿಲ್ಲ. 2006ರಲ್ಲಿ ಸಿಂಗ್ ಭಾಷಣದ ಕುರಿತು ಮೋದಿ ಮೊದಲ ಬಾರಿಗೆ ಸುಳ್ಳು ಹೇಳಿದ್ದಾಗಲೇ ಪ್ರಧಾನಿ ಕಚೇರಿ (ಪಿಎಂಒ)ಯು ಅದನ್ನು ನಿರಾಕರಿಸಿತ್ತು. ಇಂತಹ ಟೀಕೆಗಳನ್ನು ಪಿಎಂಒ, ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯ ಸಭೆಯಲ್ಲಿ ಸರಕಾರದ ಹಣಕಾಸು ಆದ್ಯತೆಗಳ ಬಗ್ಗೆ ಪ್ರಧಾನಿ ಸಿಂಗ್ ಹೇಳಿಕೆಯ ಉದ್ದೇಶಪೂರ್ವಕ ಮತ್ತು ಕುಚೇಷ್ಟೆಯ ತಪ್ಪು ವ್ಯಾಖ್ಯಾನ ಎಂದು ಬಣ್ಣಿಸಿತ್ತು. ಅನಗತ್ಯ ವಿವಾದವೊಂದನ್ನು ಸೃಷ್ಟಿಸಲಾಗಿದೆ. ಕೆಲವು ವಿದ್ಯುನ್ಮಾನ ಮಾಧ್ಯಮಗಳೂ ಪ್ರಧಾನಿಯವರ ಅಭಿಪ್ರಾಯಗಳನ್ನು ಸಂದರ್ಭಕ್ಕೆ ಹೊರತಾಗಿ ಉಲ್ಲೇಖಿಸುವ ಮೂಲಕ ಈ ಆಧಾರ ರಹಿತ ವಿವಾದವನ್ನು ಉತ್ತೇಜಿಸಿವೆ ಎಂದೂ ಪಿಎಂಒ ಹೇಳಿತ್ತು ಎಂದು thewire.in ವರದಿ ಮಾಡಿದೆ.

ವಿಷಯವನ್ನು ಸ್ಪಷ್ಟಪಡಿಸಲು ಅಲ್ಪಸಂಖ್ಯಾತರ ಸಬಲೀಕರಣವನ್ನು ಪ್ರಧಾನಿಯವರು ಉಲ್ಲೇಖಿಸಿದ್ದ ಹೇಳಿಕೆಯ ಪೂರ್ಣ ಪಠ್ಯ ಇಲ್ಲಿದೆ;

‘ನಮ್ಮ ಸಾಮೂಹಿಕ ಆದ್ಯತೆಗಳು ಸ್ಪಷ್ಟವಾಗಿವೆ ಎಂದು ನಾನು ನಂಬಿದ್ದೇನೆ;‌ ಕೃಷಿ,ನೀರಾವರಿ ಮತ್ತು ಜಲ ಸಂಪನ್ಮೂಲಗಳು, ಆರೋಗ್ಯ,ಶಿಕ್ಷಣ,ಗ್ರಾಮೀಣ ಮೂಲಸೌಕರ್ಯದಲ್ಲಿ ನಿರ್ಣಾಯಕ ಹೂಡಿಕೆಗಳು ಮತ್ತು ಸಾರ್ವತ್ರಿಕ ಮೂಲಸೌಕರ್ಯಗಳಲ್ಲಿ ಅಗತ್ಯ ಸಾರ್ವಜನಿಕ ಹೂಡಿಕೆಗಳು. ಇವುಗಳ ಜೊತೆಗೆ ಎಸ್‌ಸಿ/ಎಸ್‌ಟಿಗಳು,ಒಬಿಸಿಗಳು, ಅಲ್ಪಸಂಖ್ಯಾತರು,ಮಹಿಳೆಯರು ಮತ್ತು ಮಕ್ಕಳ ಏಳಿಗೆಗಾಗಿ ಕಾರ್ಯಕ್ರಮಗಳು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಘಟಕ ಯೋಜನೆಗಳನ್ನು ಪುನಃಶ್ಚೇತನಗೊಳಿಸಬೇಕಿದೆ. ಅಭಿವೃದ್ಧಿಯ ಫಲಗಳನ್ನು ಅಲ್ಪಸಂಖ್ಯಾತರು,ವಿಶೇಷವಾಗಿ ಮುಸ್ಲಿಮ್ ಅಲ್ಪಸಂಖ್ಯಾತರಿಗೆ ಸಮಾನವಾಗಿ ದೊರೆಯುತ್ತವೆ ಎನ್ನುವುದನ್ನು ಖಚಿತಪಡಿಸಲು ನಾವು ನವೀನ ಯೋಜನೆಗಳನ್ನು ರೂಪಿಸಬೇಕಿದೆ. ಸಂಪನ್ಮೂಲಗಳ ಮೇಲೆ ಅವರು ಮೊದಲ ಹಕ್ಕನ್ನು ಹೊಂದಿರಬೇಕು. ಕೇಂದ್ರವು ಇತರ ಅಸಂಖ್ಯಾತ ಜವಾಬ್ದಾರಿಗಳನ್ನು ಹೊಂದಿದೆ ಮತ್ತು ಅವುಗಳ ಬೇಡಿಕೆಗಳನ್ನು ಒಟ್ಟಾರೆ ಲಭ್ಯವಿರುವ ಸಂಪನ್ಮೂಲಗಳಲ್ಲಿ ಅಳವಡಿಸಬೇಕಾಗುತ್ತದೆ’

ಪ್ರಧಾನಿಯವರ ಹೇಳಿಕೆಯಲ್ಲಿನ ‘ಸಂಪನ್ಮೂಲಗಳ ಮೇಲೆ ಮೊದಲ ಹಕ್ಕು ’ ಎಸ್‌ಸಿ/ಎಸ್‌ಟಿಗಳು ,ಒಬಿಸಿಗಳು ,ಮಹಿಳೆಯರು ಮತ್ತು ಮಕ್ಕಳು ಹಾಗೂ ಅಲ್ಪಸಂಖ್ಯಾತರ ಏಳಿಗೆಗಾಗಿ ಕಾರ್ಯಕ್ರಮಗಳು ಸೇರಿದಂತೆ ಮೇಲೆ ಪಟ್ಟಿ ಮಾಡಲಾಗಿರುವ ಎಲ್ಲ ಆದ್ಯತಾ ಕ್ಷೇತ್ರಗಳನ್ನು ಉಲ್ಲೇಖಿಸುತ್ತದೆ ಎನ್ನುವುದನ್ನು ಇಲ್ಲಿ ನೋಡಬಹುದು ಎಂದು ಪಿಎಂಒ ತನ್ನ ಸ್ಪಷ್ಟೀಕರಣದಲ್ಲಿ ಹೇಳಿತ್ತು.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News