Fact Check: ಕಾಸರಗೋಡು ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆಗೆ ಕೋಮು ಆಯಾಮ ನೀಡಿದ ಬಲಪಂಥಿಯರು
ಕಾಸರಗೋಡು: ಸೀರೆ ತೊಟ್ಟಿರುವ ಮಹಿಳೆಯೊಬ್ಬರೊಂದಿಗೆ ಬುರ್ಖಾಧಾರಿ ಮುಸ್ಲಿಂ ಮಹಿಳೆಯರ ಗುಂಪೊಂದು ನಡೆಸಿರುವ ಮಾತಿನ ಚಕಮಕಿಯ ವಿಡಿಯೋವೊಂದು ಮುಸ್ಲಿಂ ಮಹಿಳೆಯರು ಹಿಂದೂ ಮಹಿಳೆಯ ಮೇಲೆ ತಮ್ಮ ಧರ್ಮವನ್ನು ಹೇರುತ್ತಿದ್ದಾರೆ ಎಂಬ ಪ್ರತಿಪಾದನೆಯೊಂದಿಗೆ ವೈರಲ್ ಆಗಿದೆ.
ಈ ವಿಡಿಯೊವನ್ನು ಎಕ್ಸ್ ಸಾಮಾಜಿಕ ಮಾಧ‍್ಯಮದಲ್ಲಿ ಪೋಸ್ಟ್ ಮಾಡಿರುವ ಅಮೆರಿಕಾದ ಪತ್ರಕರ್ತೆ ಆ‍್ಯಮಿ ಮೆಕ್, “ಭಾರತದಲ್ಲಿ ಶರಿಯಾದ ಕಣ್ಗಾವಲಿದೆ! ಶರಿಯಾ ಪರದೆ ಇಲ್ಲದೆ ಬಸ್ ಪ್ರಯಾಣ ಮಾಡುವ ಧೈರ್ಯ ತೋರಿದ ಹಿಂದೂ ಮಹಿಳೆಯೊಬ್ಬರಿಗೆ ಇಸ್ಲಾಮಿಕ್ ಮಹಿಳೆಯರು ಕಿರುಕುಳ ನೀಡಿದ್ದಾರೆ. ಆಕ್ರೋಶಗೊಂಡ ಮುಸ್ಲಿಂ ಮಹಿಳೆಯರು ಆ ಮಹಿಳೆಯು ಬುರ್ಖಾ ತೊಡಬೇಕು ಎಂದು ಆಗ್ರಹಿಸಿದ್ದಾರೆ. ಹಿಂದೂ ಮಹಿಳೆಯರು ತಮ್ಮ ಶರಿಯಾ ಆಗ್ರಹಕ್ಕೆ ಅನುಗುಣವಾಗಿ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವುದನ್ನು ಮುಸ್ಲಿಮರು ಬಯಸುವುದಿಲ್ಲ!” ಎಂದು ಬರೆದುಕೊಂಡಿದ್ದಾರೆ.
ಬಲಪಂಥೀಯ ಪ್ರಭಾವಿ @MeghUpdates, ಆ ವಿಡಿಯೊವನ್ನು ಎಕ್ಸ್ ಸಾಮಾಜಿಕ ಮಾಧ‍್ಯಮದಲ್ಲಿ ಪೋಸ್ಟ್ ಮಾಡಿದ್ದು, “ಕೇರಳದ ಬುರ್ಖಾಧಾರಿ ಮಹಿಳೆಯರು ಸೀರೆ ಧರಿಸಿರುವ ಹಿಂದೂ ಮಹಿಳೆಗೆ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವಾಗ ಶರಿಯಾ ಕಾನೂನಿಗೆ ಅನುಗುಣವಾಗಿ ಬುರ್ಖಾ ಧರಿಸುವಂತೆ ಬಲವಂತಪಡಿಸಿದ್ದಾರೆ” ಎಂದು ಬರೆದಿದೆ.
ಪತ್ರಕರ್ತರಾದ ಅರ್ಚನಾ ತಿವಾರಿ, ಶಶಾಂಕ್ ಶೇಖರ್ ಝಾ, @Anandi_sanatani ಹಾಗೂ ಆರೆಸ್ಸೆಸ್ ಕಾರ್ಯಕರ್ತ ಶೀತಲ್ ಚೋಪ್ರಾ ಕೂಡಾ ಆ ಘಟನೆಯು ಕೇರಳದಲ್ಲಿ ನಡೆದಿದೆ ಎಂದು ಪ್ರತಿಪಾದಿಸಿದ್ದರು. ಈ ಪೈಕಿ ಮೊದಲಿಬ್ಬರು ತಮ್ಮ ಪೋಸ್ಟ್ ಅನ್ನು ಅಳಿಸಿ ಹಾಕಿದ್ದಾರೆ.
ಆರೆಸ್ಸೆಸ್ ಮಾಲಕತ್ವದ ಪಾಂಚಜನ್ಯ ಕೂಡಾ ಅದೇ ವಿಡಿಯೊವನ್ನು ಪೋಸ್ಟ್ ಮಾಡಿ, ಮುಸ್ಲಿಂ ಮಹಿಳೆಯರು ಬುರ್ಖಾ ಧರಿಸುವಂತೆ ಹಿಂದೂ ಮಹಿಳೆಯೊಬ್ಬರಿಗೆ ಬಲವಂತ ಪಡಿಸಿದ್ದಾರೆ ಎಂದು ಆರೋಪಿಸಿತ್ತು.
ಈ ಘಟನೆಯ ಕುರಿತು ಸತ್ಯಶೋಧನೆ ನಡೆಸಿರುವ altnews.in, ಆ ತುಣುಕಿಗೆ ಸಂಬಂಧಿಸಿದ ಹಲವಾರು ಫೇಸ್ ಬುಕ್ ಪೋಸ್ಟ್ ಗಳನ್ನು ಪತ್ತೆ ಹಚ್ಚಿದೆ. ಈ ಪೈಕಿ ಒಂದು ವಿಡಿಯೊದಲ್ಲಿ, ಬಸ್ ನ ಹೊರಗೆ ನಿಂತಿರುವ ಮಹಿಳೆಯರು, ಬಸ್ ನಿಲ್ದಾಣದಲ್ಲಿ ಏಕೆ ಬಸ್ ಅನ್ನು ನಿಲ್ಲಿಸುತ್ತಿಲ್ಲ ಎಂದು ಬಸ್ ಚಾಲಕನನ್ನು ಪ್ರಶ್ನಿಸುತ್ತಿರುವುದು ಸೆರೆಯಾಗಿದೆ. “ಬಸ್ ನಿಲ್ದಾಣದ ಬಳಿ ಬಸ್ ನಿಲ್ಲಿಸದಿದ್ದರೆ ಬಸ್ ನಿಲ್ದಾಣವಾದರೂ ಏಕಿರಬೇಕು?” ಎಂದು ಆ ಮಹಿಳೆಯರು ಚಾಲಕನನ್ನು ಪ್ರಶ್ನಿಸುತ್ತಿರುವುದನ್ನು ಆ ವಿಡಿಯೊದಲ್ಲಿ ಕೇಳಬಹುದಾಗಿದೆ.
ಮೇಲೆ ಹೇಳಲಾದ ವಿಡಿಯೊ ತುಣುಕು ಹಾಗೂ ವೈರಲ್ ವಿಡಿಯೊಗಳೆರಡನ್ನೂ ಒಂದೇ ಸಮಯದಲ್ಲಿ, ಒಂದೇ ಸ್ಥಳದಲ್ಲಿ ಚಿತ್ರೀಕರಿಸಲಾಗಿದೆ. Altnews ಸತ್ಯಶೋಧನಾ ವೇದಿಕೆಯು ಆ ವೈರಲ್ ವಿಡಿಯೊದ ತುಣುಕನ್ನು ಇತರ ವಿಡಿಯೊ ತುಣುಕಿನೊಂದಿಗೆ ತಾಳೆ ಹಾಕಿ ಪರಿಶೀಲಿಸಿದೆ. ಆಗ ಪರವಾನಗಿ ಫಲಕದ ಮೇಲಿರುವ ಸಂಖ್ಯೆ ಹಾಗೂ ವಾಹನದ ಒಳಗೆ ನಮೂದಿಸಿರುವ ಸಂಖ್ಯೆಗಳೆರಡೂ ಒಂದೇ ಆಗಿರುವುದು ಕಂಡು ಬಂದಿದೆ. ಇದಲ್ಲದೆ, ವೈರಲ್ ವಿಡಿಯೊದಲ್ಲಿ ಬಸ್ ಹೊರಗೆ ಕಂಡು ಬಂದಿರುವ ‘ಶ್ರೀ ಗುರುವಾಯೂರಪ್ಪನ್’ ಪದವು ಇತರ ವಿಡಿಯೊ ತುಣುಕುಗಳಲ್ಲೂ ಕಂಡು ಬಂದಿದೆ.
ಫೇಸ್ ಬುಕ್ ಪೋಸ್ಟ್ ಒಂದರಿಂದ ಸುಳಿವು ಪಡೆದಿರುವ Altnews ಸತ್ಯಶೋಧನಾ ವೇದಿಕೆಯು, ಕೀವರ್ಡ್ ಶೋಧನೆಯನ್ನು ನಡೆಸಿದ್ದು, ಆ ಘಟನೆಯ ಕುರಿತು ಹಲವಾರು ಮಲಯಾಳಂ ಸುದ್ದಿ ವರದಿಗಳನ್ನು ಪತ್ತೆ ಹಚ್ಚಿದೆ. ವರದಿಗಾರರೊಬ್ಬರ ಲೇಖನದ ಪ್ರಕಾರ, ಕೇರಳದ ಕಾಸರಗೋಡಿನ ಕುಂಬಳ-ಮುಲ್ಲೇರಿಯಾ ಕೆಎಸ್ಟಿಪಿ ರಸ್ತೆಯಲ್ಲಿನ ಭಾಸ್ಕರ ನಗರದ ಬಳಿಯಿರುವ ಖಾನ್ಸಾ ಉನ್ನತ ಅಧ್ಯಯನ ಮಹಿಳಾ ಕಾಲೇಜಿನ ಬಳಿ ನೂತನವಾಗಿ ನಿರ್ಮಿಸಲಾಗಿರುವ ಬಸ್ ನಿಲ್ದಾಣದಲ್ಲಿ ಬಸ್ ಗಳು ಪದೇ ಪದೇ ನಿಲುಗಡೆ ನೀಡದೆ ಮುಂದೆ ಹೋಗುತ್ತಿದ್ದವು ಎಂದು ಹೇಳಲಾಗಿದೆ. ಇದರ ಪರಿಣಾಮವಾಗಿ ಖಾನ್ಸಾ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳು ಅಕ್ಟೋಬರ್ 22ರಂದು ರಸ್ತೆಯಲ್ಲೇ ಬಸ್ ಅನ್ನು ನಿಲ್ಲಿಸಿ, ಚಾಲಕರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಇದರೊಂದಿಗೆ Altnews ಸತ್ಯಶೋಧನಾ ವೇದಿಕೆಗೆ ಮತ್ತೊಂದು ವಿಡಿಯೊ ಕೂಡಾ ಲಭ್ಯವಾಗಿದ್ದು, ಆ ವಿಡಿಯೊದಲ್ಲಿ ಕೆಲವು ಪೊಲೀಸ್ ಅಧಿಕಾರಿಗಳು ಬಸ್ ನಿಲುಗಡೆ ಮಾಡದಿರಲು ಕಾರಣವೇನೆಂದು ಬಸ್ ಚಾಲಕ ಹಾಗೂ ಬಸ್ ನಿರ್ವಾಹಕನನ್ನು ಪ್ರಶ್ನಿಸುತ್ತಿರುವುದು ಕಂಡು ಬಂದಿದೆ. ಮುಂದುವರಿದು, ಬಸ್ ನಿಲ್ದಾಣದಲ್ಲಿ ಕಾಯುವ ವಿದ್ಯಾರ್ಥಿಗಳಿಗೆ ಬಸ್ ನಿಲುಗಡೆ ಮಾಡಿ, ಅವರನ್ನು ಬಸ್ ನಲ್ಲಿ ಹತ್ತಿಸಿಕೊಂಡು ಹೋಗಬೇಕು ಎಂದು ಬಸ್ ಸಿಬ್ಬಂದಿಗಳಿಗೆ ಪೊಲೀಸರು ಸೂಚಿಸುತ್ತಿರುವುದು, ಅದಕ್ಕೆ ಬಸ್ ಸಿಬ್ಬಂದಿಗಳು ಸಮಜಾಯಿಷಿ ನೀಡಲು ಯತ್ನಿಸುತ್ತಿರುವುದನ್ನು ಕೇಳಬಹುದಾಗಿದೆ.
ವರದಿಗಳ ಪ್ರಕಾರ, ಕುಂಬಳೆ ಪೊಲೀಸ್ ಠಾಣಾಧಿಕಾರಿ ವಿವಿ ರಾಜೀವನ್ ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದು, “ಇತ್ತೀಚೆಗೆ ನಿರ್ಮಿಸಲಾಗಿರುವ ಬಸ್ ತಂಗುದಾಣದಲ್ಲಿ ಬಸ್ ನಿಲ್ಲಿಸದಿರುವ ಬಗ್ಗೆ ನಡೆದಿರುವ ಸಮಸ್ಯೆ. ಬುರ್ಖಾ ಧರಿಸಿದ್ದ ವಿದ್ಯಾರ್ಥಿನಿಯರು ವಿಡಿಯೋದಲ್ಲಿರುವ ಮಹಿಳೆಗೆ ವಿಷಯವನ್ನು ಹೇಳುತ್ತಿದ್ದರು. ಆ ಮಹಿಳೆ ಪ್ರತಿಭಟನೆಯಿಂದ ತಡವಾಗಿದ್ದಕ್ಕೆ ಅಸಮಾಧಾನಗೊಂಡಿದ್ದರು” ಎಂದಿದ್ದಾರೆ ಎಂದು thenewsminute.com ವರದಿ ಮಾಡಿದೆ.
ಈ ಎಲ್ಲ ಹಿನ್ನೆಲೆಯಲ್ಲಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಹಿಂದೂ ಮಹಿಳೆಗೆ ಶರಿಯಾ ಕಾನೂನಿನಂತೆ ಬುರ್ಖಾ ಧರಿಸುವಂತೆ ಮುಸ್ಲಿಂ ಮಹಿಳೆಯರು ಬಲವಂತ ಪಡಿಸಿದ್ದಾರೆ ಎಂಬ ಬಲಪಂಥೀಯರ ಆರೋಪವು ಸತ್ಯ ದೂರವಾಗಿದೆ ಎಂಬುದು ಸಾಬೀತಾಗಿದೆ.