ಫಡ್ನವಿಸ್, ಶಿಂಧೆ, ಪವಾರ್: ಯಾರಾಗಲಿದ್ದಾರೆ ಮಹಾರಾಷ್ಟ್ರದ ಮುಂದಿನ ಸಿಎಂ?
ಮುಂಬೈ: ಮಹಾರಾಷ್ಟ್ರದಲ್ಲಿ ಮಹಾಯುತಿ ಮೈತ್ರಿಕೂಟ ಬಹುಮತದತ್ತ ಸಾಗುತ್ತಿದ್ದಂತೆ ಮಹಾರಾಷ್ಟ್ರದ ಮುಂದಿನ ಸಿಎಂ ಯಾರಾಗಲಿದ್ದಾರೆ ಎಂಬ ಚರ್ಚೆ ಆರಂಭವಾಗಿದೆ.
ಎನ್ ಡಿಎ ಮೈತ್ರಿ ಪಕ್ಷದ ಪಾಲುದಾರರಾದ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್, ಶಿವಸೇನೆ ನಾಯಕ ಏಕನಾಥ್ ಶಿಂಧೆ, ಎನ್ ಸಿಪಿ ನಾಯಕ ಅಜಿತ್ ಪವಾರ್ ಅವರು ಮಹಾರಾಷ್ಟ್ರ ಸಿಎಂ ರೇಸ್ ನಲ್ಲಿದ್ದು, ಇವರಲ್ಲಿ ಓರ್ವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಾಗುತ್ತಾ ಅಥವಾ ಬೇರೆಯದ್ದೇ ಅಚ್ಚರಿ ಅಭ್ಯರ್ಥಿಯನ್ನು ಸಿಎಂ ಹುದ್ದೆಗೆ ನೇಮಕ ಮಾಡಲಾಗುತ್ತಾ ಎಂಬುವುದನ್ನು ಕಾದು ನೋಡಬೇಕಿದೆ.
ಮಹಾರಾಷ್ಟ್ರದ ಒಟ್ಟು 288 ವಿಧಾನಸಭಾ ಕ್ಷೇತ್ರಗಳಲ್ಲಿ 223 ಕ್ಷೇತ್ರಗಳಲ್ಲಿ ಎನ್ ಡಿಎ ಮೈತ್ರಿಕೂಟ ಮುನ್ನಡೆ ಸಾಧಿಸಿದೆ. ಬಿಜೆಪಿ, ಶಿಂಧೆ ಬಣದ ಶಿವಸೇನೆ, ಅಜಿತ್ ಪವಾರ್ ಬಣದ ಎಸ್ ಸಿಪಿಯನ್ನು ಒಳಗೊಂಡಿರುವ ಮಹಾಯುತಿ ಮೈತ್ರಿಕೂಟ ಸ್ಪಷ್ಟ ಬಹುಮತ ಪಡೆದುಕೊಳ್ಳುವುದು ಖಚಿತವಾಗಿದೆ. ಮಹಾಯುತಿ ಮೈತ್ರಿಯಲ್ಲಿ ಬಿಜೆಪಿಯು 84% ಅಂದರೆ ಅತಿಹೆಚ್ಚು ಸ್ಥಾನಗಳನ್ನು ಪಡೆದುಕೊಂಡಿದ್ದು, ಸಿಎಂ ನೇಮಕಾತಿಯಲ್ಲಿ ನಿರ್ಣಾಯಕ ಪಾತ್ರವಹಿಸಲಿದೆ.
ಬಿಜೆಪಿಯು ಮಹಾರಾಷ್ಟ್ರದಲ್ಲಿ 2019ರಲ್ಲಿ 105 ಕ್ಷೇತ್ರಗಳಲ್ಲಿ ಗೆಲುವನ್ನು ಸಾಧಿಸಿತ್ತು. ಈ ಬಾರಿ ಈ ಅಂಕಿ 125ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ದೇವೇಂದ್ರ ಫಡ್ನವಿಸ್ ಮಹಾರಾಷ್ಟ್ರ ಬಿಜೆಪಿಯ ಪ್ರಬಲ ನಾಯಕ. ಈ ಮೊದಲು ಎರಡು ಅವಧಿಗೆ ಮುಖ್ಯಮಂತ್ರಿಯಾಗಿದ್ದ ದೇವೇಂದ್ರ ಫಡ್ನವಿಸ್ ಹಾಲಿ ಶಿಂಧೆ ಸರಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದಾರೆ. ಈ ಚುನಾವಣೆಯಲ್ಲಿ ಬಿಜೆಪಿ ತಕ್ಕಮಟ್ಟಿಗೆ ಉತ್ತಮ ಫಲಿತಾಂಶವನ್ನು ಪಡೆದುಕೊಂಡಿದ್ದರಿಂದ ದೇವೇಂದ್ರ ಫಡ್ನವಿಸ್ ಅವರನ್ನು ಸಿಎಂ ಆಗಿ ನೇಮಕ ಮಾಡಬಹುದು ಎಂದು ಹೇಳಲಾಗುತ್ತಿದೆ. ಈ ಮಧ್ಯೆ ಫಡ್ನವಿಸ್ ಗೆ ಮಹಾರಾಷ್ಟ್ರದ ಮುಖ್ಯಮಂತ್ರಿಯನ್ನಾಗಿ ನೇಮಿಸುವಂತೆ ಬಿಜೆಪಿ ವಕ್ತಾರ ಪ್ರವೀಣ್ ದರೇಕರ್ ಕೂಡ ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿ ರೇಸ್ ನಲ್ಲಿ ಮಹಾರಾಷ್ಟ್ರದ ಹಾಲಿ ಸಿಎಂ ಏಕನಾಥ್ ಶಿಂಧೆ ಹೆಸರು ಕೂಡ ಮುಂಚೂಣಿಯಲ್ಲಿದೆ. ಏಕನಾಥ್ ಶಿಂಧೆ ಅವರನ್ನೇ ಮುಂದುವರಿಸಬೇಕೆಂದು ಶಿವಸೇನೆ ವಕ್ತಾರ ಶೀತಲ್ ಅವರು ಆಗ್ರಹಿಸಿದ್ದಾರೆ. ನನ್ನನ್ನೇ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಬೇಕೆಂದು ಏಕನಾಥ್ ಶಿಂಧೆ ಚುನಾವಣಾ ಪ್ರಚಾರದ ವೇಳೆ ಆಗ್ರಹಿಸಿದ್ದರು. ಆದರೆ, ಬಿಜೆಪಿ ಮತ್ತು ಎನ್ ಸಿಪಿ ಇದಕ್ಕೆ ಅಸಮ್ಮತ ವ್ಯಕ್ತಪಡಿಸಿರುವುದನ್ನು ಗಮನಿಸಬಹುದಾಗಿದೆ.
ಈ ಮಧ್ಯೆ ಮಹಾರಾಷ್ಟ್ರದ ಹಾಲಿ ಉಪಮುಖ್ಯಮಂತ್ರಿ, ಎನ್ಸಿಪಿ ನಾಯಕ ಅಜಿತ್ ಪವಾರ್ ಕೂಡ ಸಿಎಂ ಹುದ್ದೆಯ ಆಕಾಂಕ್ಷಿಯಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಮಹಾಯುತಿ ಮೈತ್ರಿಕೂಟ ಬಹುಮತ ಪಡೆಯುತ್ತಿದ್ದಂತೆ ಅಜಿತ್ ಪವಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ನೋಡಬೇಕೆಂಬ ಇಚ್ಚೆಯನ್ನು ಪತ್ನಿ ಸುನೇತ್ರಾ ಪವಾರ್ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಮತ ಎಣಿಕೆ ಪ್ರಕ್ರಿಯೆ ಇನ್ನು ಕೂಡ ಕೊನೆಗೊಂಡಿಲ್ಲ, ಅಂತಿಮ ಫಲಿತಾಂಶವೂ ಪ್ರಕಟಗೊಂಡಿಲ್ಲ, ಈ ಮಧ್ಯೆ ಮುಂದಿನ ಸಿಎಂ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿದ್ದು, ಮಹಾರಾಷ್ಟ್ರದ ಮುಂದಿನ ಸಿಎಂ ಯಾರಾಗಲಿದ್ದಾರೆ ಎಂದು ಕಾದು ನೋಡಬೇಕಿದೆ.