ಬೆಂಬಲ ಬೆಲೆಗೆ ಸುಗ್ರೀವಾಜ್ಞೆ ಬೇಡಿಕೆ: ಇಂದು ಕೇಂದ್ರದ ಜತೆ ರೈತರ ಸಭೆ
ಹೊಸದಿಲ್ಲಿ: ಪಂಜಾಬ್- ಹರ್ಯಾಣ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ರವಿವಾರ ಕೇಂದ್ರದ ಪ್ರತಿನಿಧಿಗಳ ಜತೆ ನಾಲ್ಕನೇ ಸುತ್ತಿನ ಮಾತುಕತೆ ನಡೆಸಲು ಸಜ್ಜಾಗಿದ್ದಾರೆ. ಎಲ್ಲ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿಗೆ ಕಾನೂನು ಜಾರಿಗೊಳಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ರೈತ ಸಂಘಟನೆಗಳು ಮುಂದಿಟ್ಟಿವೆ. ಕನಿಷ್ಠ ಬೆಂಬಲ ಬೆಲೆ ಖಾತರಿ ಕುರಿತಂತೆ ಸುಗ್ರೀವಾಜ್ಞೆ ಜಾರಿಗೊಳಿಸಬೇಕು ಎಂಬ ಬೇಡಿಕೆಯೊಂದಿಗೆ ಸಂಘಟನೆಗಳು ಸಭೆಗೆ ಹಾಜರಾಗಲಿವೆ.
ರೈತ ಮುಖಂಡರು ಕೇಂದ್ರ ಸಚಿವರಾದ ಅರ್ಜುನ ಮುಂಡಾ, ಪಿಯೂಶ್ ಗೋಯಲ್ ಮತ್ತು ನಿತ್ಯಾನಂದ ರಾಯ್ ಅವರನ್ನು ಸಂಜೆ 6 ಗಂಟೆಗೆ ಚಂಡೀಗಢದಲ್ಲಿ ಭೇಟಿ ಮಾಡುವರು. ಇದಕ್ಕೂ ಮೊದಲು ನಡೆದ ಮೂರು ಸುತ್ತುಗಳ ಮಾತುಕತೆಗಳಲ್ಲಿ ಹಲವು ವಿಷಯಗಳ ಬಗ್ಗೆ ಪರಸ್ಪರ ಒಮ್ಮತಕ್ಕೆ ಬರಲಾಗಿದ್ದರೂ, ಪ್ರಮುಖ ವಿಷಯಗಳು ಇತ್ಯರ್ಥವಾಗದೇ ಹಾಗೇ ಉಳಿದಿವೆ.
ನಿನ್ನೆ ರೈತ ಮುಖಂಡರು ಸರ್ಕಾರದ ಮೇಲೆ ಒತ್ತಡ ತಂದು, ಎಂಎಸ್‍ಪಿಗೆ ಕಾನೂನಾತ್ಮಕ ಗ್ಯಾರೆಂಟಿ ನೀಡುವ ಸಲುವಾಗಿ ಸುಗ್ರೀವಾಜ್ಞೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದರು. ಆ ಬಳಿಕ ಅದನ್ನೇ ಕಾನೂನಾಗಿ ಪರಿವರ್ತಿಸುವಂತೆ ಸಲಹೆ ಮುಂದಿಟ್ಟಿವೆ.
ರವಿವಾರದ ಸಭೆಯ ಬಳಿಕ ನಮಗೆ ಶುಭ ಸುದ್ದಿ ಬರುವ ನಿರೀಕ್ಷೆ ಇದೆ ಎಂದು ರೈತ ಮುಖಂಡರಾದ ಸರ್ವನ್ ಸಿಂಗ್ ಪಂಧೇರ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಎಂಎಸ್‍ಪಿ ಕಾನೂನಿನ ಹೊರತಾಗಿ, ದೆಹಲಿ ಚಲೋ ಚಳವಳಿ ನಡೆಸುತ್ತಿರುವ ರೈತರು, ಸ್ವಾಮಿನಾಥನ್ ಆಯೋಗದ ವರದಿಯನ್ನು ಜಾರಿಗೊಳಿಸಬೇಕು, ಸಂಪೂರ್ಣ ಸಾಲ ಮನ್ನಾ ಮಾಡಬೇಕು, ರೈತರು ಹಾಗೂ ಕೃಷಿ ಕಾರ್ಮಿಕರಿಗೆ ಪಿಂಚಣಿ ನೀಡಬೇಕು ಹಾಗೂ ರೈತರ ವಿರುದ್ಧದ ಪೊಲೀಸ್ ಪ್ರಕರಣಗಳನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.