ರೈತರ ʼದಿಲ್ಲಿ ಚಲೋʼ : ಹರಿಯಾಣ ಸರಕಾರದಿಂದ ಇಂಟರ್ ನೆಟ್ ಸೇವೆ ಸ್ಥಗಿತ
ಚಂಡಿಗಡ: ಫೆಬ್ರವರಿ 13 ರಂದು ರೈತರ ಉದ್ದೇಶಿತ 'ದಿಲ್ಲಿ ಚಲೋ'ಗೆ ಮುಂಚಿತವಾಗಿ 7 ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆ ಮತ್ತು ಒಮ್ಮೆಲೇ ಹೆಚ್ಚು ಎಸ್ ಎಂ ಎಸ್ ಕಳುಹಿಸುವ ಸೇವೆ(ಬಲ್ಕ್ ಎಸ್ಎಂಎಸ್)ಗಳನ್ನು ಸ್ಥಗಿತಗೊಳಿಸುವಂತೆ ಹರಿಯಾಣ ಸರಕಾರ ಶನಿವಾರ ಆದೇಶಿಸಿದೆ ಎಂದು ಎ ಎನ್ ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಅಧಿಕೃತ ಆದೇಶದ ಪ್ರಕಾರ, ಅಂಬಾಲಾ, ಕುರುಕ್ಷೇತ್ರ, ಕೈತಾಲ್, ಜಿಂದ್, ಹಿಸಾರ್, ಫತೇಹಾಬಾದ್ ಮತ್ತು ಸಿರ್ಸಾ ಜಿಲ್ಲೆಗಳಲ್ಲಿ ಫೆಬ್ರವರಿ 11 ರಂದು ಬೆಳಿಗ್ಗೆ 6 ರಿಂದ ಫೆಬ್ರವರಿ 13 ರಂ ಮಧ್ಯರಾತ್ರಿ 12 ರವರೆಗೆ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ತಿಳಿದು ಬಂದಿದೆ.
ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ ಸಂಘಟನೆ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಸೇರಿದಂತೆ 200 ಕ್ಕೂ ಹೆಚ್ಚು ರೈತ ಸಂಘಗಳು ಫೆಬ್ರವರಿ 13 ರಂದು 'ದಿಲ್ಲಿ ಚಲೋ' ಸಮಾವೇಶ ಆಯೋಜಿಸಿವೆ. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (MSP) ಸೇರಿದಂತೆ ತಮ್ಮ ಹಲವಾರು ಬೇಡಿಕೆಗಳನ್ನು ಅಂಗೀಕರಿಸಿ ಕಾನೂನು ಜಾರಿಗೆ ತರುವಂತೆ ಕೇಂದ್ರವನ್ನು ಒತ್ತಾಯಿಸಿ ದಿಲ್ಲಿ ಚಲೋ ನಡೆಯಲಿದೆ ಎನ್ನಲಾಗಿದೆ.